‘ಫ್ರೀಡಾ’ ಎಂಬ ಕಾಡುಹಂದಿಮರಿಯನ್ನು ದತ್ತು ತೆಗೆದುಕೊಂಡಿರುವ ಹಸುಗಳು
Adoption : ‘ಅಯ್ಯೋ ತಪ್ಪಿಸ್ಕೊಂಡೀಯೇನೋ? ಪಾಪಚ್ಚಿ ನೀನು, ಇರ್ಲಿ ಬಾ ಇನ್ಮೇಲಿಂದ ನೀನೂ ನಮ್ಮ ಮಗುವೇ’ ಎಂದು ಈ ಹಸುಗಳು ತಮ್ಮ ಶೆಡ್ಡಿಗೆ ಈ ಕಾಡುಹಂದಿಮರಿಯನ್ನು ಕರೆತಂದಿವೆ. ಈ ಘಟನೆ ನಡೆದದ್ದು ಜರ್ಮನಿಯಲ್ಲಿ.
Trending : ನಾಯಿಯೊಂದು ಬೆಕ್ಕಿನ ಮರಿಗೋ, ಕೋತಿಗೋ ಹಾಲು ಕುಡಿಸಿ ಪೋಷಿಸುವುದು. ಹಸುವು ನಾಯಿಮರಿಗೋ, ಬೆಕ್ಕಿನಮರಿಗೋ ಹಾಲು ಕುಡಿಸಿ ಜೋಪಾನಿಸುವುದು. ಗೋರಿಲ್ಲಾ ಹುಲಿಯ ಮರಿಗಳನ್ನು ಅವುಚಿಕೊಂಡು ಸಾಕುವುದು. ಹೀಗೆ ಸಾಕಷ್ಟು ವೈರಲ್ ವಿಡಿಯೋಗಳನ್ನು ನೋಡಿರುವಿರಿ. ಮಮತೆ ಎನ್ನುವುದಕ್ಕೆ ಯಾರಪ್ಪಣೆ ಬೇಕು? ಪ್ರಾಣಿಗಳಂಥ ಪ್ರಾಣಿಗಳೇ ಭಿನ್ನವರ್ಗದ ಪ್ರಾಣಿಗಳ ವಿಷಯವಾಗಿ ಇಷ್ಟು ತಿಳಿವಳಿಕೆಯಿಂದ ವರ್ತಿಸುತ್ತವೆ ಎಂದ ಮೇಲೆ ಮನುಷ್ಯರಾದ ನಮಗೆ ಈ ವಿಷಯವಾಗಿ ತುಸು ಹೆಚ್ಚೇ ವಾತ್ಸಲ್ಯ, ಅಂತಃಕರಣ ಇರಬೇಕಲ್ಲವೆ?
ಜರ್ಮನಿಯ ಬರ್ಲಿನ್ನಲ್ಲಿರುವ ನದಿಯೊಂದನ್ನು ದಾಟುವಾಗ ಈ ಪುಟಾಣಿ ಕಾಡುಹಂದಿಮರಿ ತನ್ನ ಹಿಂಡಿನಿಂದ ತಪ್ಪಿಸಿಕೊಂಡುಬಿಟ್ಟಿದೆ. ಒಂಟಿಯಾಗಿ ಕಂಗಾಲಾಗಿ ನಿಂತ ಈ ಹಂದಿಮರಿಯನ್ನು ನೋಡಿದ ಹಸುಗಳಿಗೆ ಜೀವ ಮರುಗಿದೆ. ತಮ್ಮ ಮರಿಗಳೊಂದಿಗೆ ಈ ಹಂದಿಮರಿಯನ್ನೂ ಸಾಕುವುದೆಂದು ನಿರ್ಧರಿಸಿ ಅದನ್ನೂ ತಮ್ಮ ಶೆಡ್ಡಿಗೆ ಕರೆದುಕೊಂಡು ಬಂದಿವೆ. ಕೃಷಿಕ ಫ್ರೆಡ್ರಿಕ್ ಸ್ಟೇಪಲ್ಗೆ ಈ ವಿಷಯ ಅಚ್ಚರಿಯನ್ನುಂಟು ಮಾಡಿದ್ದಲ್ಲದೆ ಈತನ ಹೃದಯವನ್ನು ಆರ್ದ್ರಗೊಳಿಸಿದೆ. ತನ್ನ ಹಸುಗಳೊಂದಿಗೆ ಈ ಕಾಡುಹಂದಿಮರಿಯನ್ನು ಬರಮಾಡಿಕೊಂಡಿದ್ದಾನೆ. ನಂತರ ಈ ಅಪರೂಪದ ಸಂಗತಿಯನ್ನು ಡಿಪಿಎ ಸುದ್ದಿ ಸಂಸ್ಥೆಗೆ ತಿಳಿಸಿದ್ದಾನೆ.
ಸುಮಾರು ಮೂರು ವಾರಗಳ ಹಿಂದೆ ಬ್ರೆವೊರ್ಡೆಯ ಜರ್ಮನ್ ಸಮುದಾಯದಲ್ಲಿ ಹಸುಗಳೊಂದಿಗೆ ಈ ಹಂದಿಮರಿ ಪತ್ತೆಯಾಗಿದೆ. ‘ಹಾಗೆ ನೋಡಿದರೆ ಕಾಡುಹಂದಿಗಳು ದಾಳಿಮಾಡಿ ಹಾನಿಯುಂಟು ಮಾಡುವುದರಲ್ಲಿ ಎತ್ತಿದ ಕೈ. ಹಾಗೆಂದು ಈ ಹಂದಿಮರಿಯನ್ನು ಅನಾಥವಾಗಿಸುವುದು ಅನ್ಯಾಯ’ಎಂದಿದ್ದಾನೆ ಫ್ರೆಡ್ರಿಕ್.
ಫ್ರೆಡ್ರಿಕ್ ಈ ಹಂದಿಮರಿಗೆ ಫ್ರೀಡಾ ಎಂದು ನಾಮಕರಣ ಮಾಡಿದ್ದಾನೆ. ಅಲ್ಲದೆ, ಈ ಹಂದಿಮರಿಯನ್ನು ಬೇಟೆಯಾಡದಂತೆ ಸ್ಥಳೀಯ ಬೇಟೆಗಾರರಲ್ಲಿ ಮನವಿ ಮಾಡಿಕೊಂಡಿದ್ದಾನೆ. ಈ ಚಳಿಗಾಲದ ಹೊತ್ತಿಗೆ ತಾಯಿಹಸುಗಳೊಂದಿಗೆ ಹಾಕುವ ಶೆಡ್ನಲ್ಲಿ ಇದಕ್ಕೂ ವಾಸ್ತವ್ಯ ಕಲ್ಪಿಲಾಗುವುದು. ಏನೇ ಆಗಲಿ ಈ ಹಂದಿಮರಿಯನ್ನು ಒಂಟಿಯಾಗಿ ಬಿಡುವುದು ಮಾತ್ರ ಸೂಕ್ತವಲ್ಲ ಎಂದಿದ್ದಾನೆ ಫೆಡ್ರಿಕ್.
ಎಂಥ ಚೆಂದದ ಅನುಬಂಧ ಅಲ್ಲವೆ?
ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:16 pm, Fri, 30 September 22