Viral Video : ಈ ಮಳೆಯಿಂದಾಗಿ ಊರಿಗೆ ಊರೇ ಹೊಳೆಯಂತೆ ಕಾಣುತ್ತಿವೆ. ಇನ್ನು ಇಂಥ ಸಮಯದಲ್ಲಿ ಕುಡುಕರಿಗೆ ಹೀಗನ್ನಿಸುವುದು ಸಹಜ ಅಲ್ಲವೆ? ಚೆನ್ನೈನಲ್ಲಿ ಜಲಾವೃತಗೊಂಡ ರಸ್ತೆಯಲ್ಲಿ ಕುಡುಕನೊಬ್ಬ ಈಜಲು ನೋಡುತ್ತಿದ್ದಾನೆ. ಈ ವಿಡಿಯೋ ಇದೀಗ ಆನ್ಲೈನ್ನಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರಂತೂ ತಲೆಗೊಬ್ಬೊಬ್ಬರಂತೆ ಪ್ರತಿಕ್ರಿಯಿಸುತ್ತಿದ್ದಾರೆ. ಒಂದು ದಿನ ಇಡೀ ಜಗತ್ತೇ ನಿಮ್ಮನ್ನು ತಿರುಗಿ ನೋಡೋ ಹಾಗೆ ಆಗುವ ದಿನವೊಂದು ಬರುತ್ತದೆ ಎನ್ನುತ್ತಾರಲ್ಲ… ಈ ಮನುಷ್ಯನ ವಿಷಯದಲ್ಲಿ ಅದು ನಿಜವಾದಂತಿದೆ!
ಚೆನ್ನೈನ ಪುಲಿಯಾಂತೋಪ್ನ ಬಳಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಪಾಪ ಕುಡಿದ ಅಮಲಿನಲ್ಲಿ ಇದು ಯಾವ ನದಿಯ ನೆನಪನ್ನು ಈತನಿಗೆ ತಂದಿದೆಯೋ ಏನೊ. ಅಂತೂ ಈಜಲು ಶುರುಮಾಡಿದ್ದಾನೆ. ಅಣ್ಣಾ ನೀನೊಬ್ಬನೇ ಸ್ಪರ್ಧಿ ಇಲ್ಲಿ, ನಿನಗೇ ಬಹುಮಾನ ಈಜು ಈಜು ಎಂದು ಹುರಿದುಂಬಿಸಿದ್ದಾರೆ ಒಬ್ಬರು. ಚಿಕ್ಕವನಿದ್ದಾಗ ನೀನು ಈ ನದಿಯನ್ನು ಬಿಟ್ಟುಬಂದಿದ್ದೆ. ಅದೀಗ ನಿನ್ನನ್ನು ಹುಡುಕಿಕೊಂಡು ಬಂದಿದೆ ಎಂದಿದ್ದಾರೆ ಇನ್ನೂ ಒಬ್ಬರು. ನೀ ಈಗ ಈಜಿಕೊಂಡು ಹೋಗದಿದ್ದರೆ ನದಿ ಈಗ ನಿಮ್ಮ ಮನೆಗೇ ನುಗ್ಗುತ್ತದೆ! ಎಂದಿದ್ದಾರೆ ಮಗದೊಬ್ಬರು.
ಕಳೆದ ವರ್ಷದ ಮಳೆಗಾಲದಲ್ಲಿ ಮುಂಬೈನಲ್ಲಿ ಕುಡುಕನೊಬ್ಬ ಹೀಗೇ ಮಳೆನೀರಿನಲ್ಲಿ ರಸ್ತೆ ಮಧ್ಯೆ ಆರಾಮಾಗಿ ಮಲಗಿದ್ದ. ಬಸ್ಸು, ಲಾರಿಗಳ ಓಡಾಟದ ಖಬರು ಇಲ್ಲದಂತೆ ತನ್ನ ಪಾಡಿಗೆ ತಲೆಯನ್ನು ಕೈಗಿಟ್ಟು ಮಲಗಿದ್ದ. ಸಾವಿರಾರು ಜನರು ಈ ವಿಡಿಯೋ ನೋಡಿ ಮೆಚ್ಚಿದ್ದರು. ಮನಬಂದಂತೆ ಪ್ರತಿಕ್ರಿಯಿಸಿದ್ದರು.
ಇದೆಲ್ಲ ನೋಡುತ್ತ ಓದುತ್ತ ನಿಮಗೂ ಒಂದು ಕ್ಷಣ ನಗು ಬಂದಿರಬಹುದು. ಆದರೂ ಇವರ ಮನೆಮಂದಿ ಈ ವಿಡಿಯೋ ನೋಡಿದಲ್ಲಿ ಏನೆನ್ನಿಸಬಹುದು? ಪಾಪ ಅಲ್ಲವೆ…
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:31 pm, Wed, 2 November 22