Fact Check: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಮಗು ತನ್ನ ತಾಯಿಯನ್ನೇ ಕೊಂದಿದ್ದು ನಿಜವೇ?
ಮೊಬೈಲ್ ಬಳಸಬೇಡ ಎಂದು ಹೇಳಿ ಫೋನನ್ನು ಕಿತ್ತುಕೊಂಡಿದ್ದಕ್ಕೆ ತನ್ನ ತಾಯಿಯನ್ನೇ ಮಗು ಕೊಂದಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಸುದ್ದಿ ನಿಜವೇ?. ಇಲ್ಲಿದೆ ನೋಡಿ ನೈಜ್ಯ ಮಾಹಿತಿ.
ಮೊಬೈಲ್ ಬಳಸಲು ನಿರಾಕರಿಸಿದ್ದಕ್ಕೆ ಮಗು ತನ್ನ ತಾಯಿಯನ್ನೇ ಕೊಂದಿದ್ದು ನಿಜವೇ?. ಇಂತಹದೊಂದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋ ಮನೆಯೊಂದರ ಸಿಸಿಟಿವಿ ಫೂಟೇಜ್‌ನಂತೆ ಕಾಣುತ್ತದೆ. ಈ ವೇಳೆ ಮಹಿಳೆಯೊಬ್ಬರು ಬಂದು ಹಾಸಿಗೆಯ ಮೇಲೆ ಕುಳಿತಿದ್ದ ಮಗುವಿನ ಕೈಯಿಂದ ಫೋನ್ ಕಿತ್ತುಕೊಂಡು ಜೋರು ಮಾಡಿದ್ದಾರೆ. ಮಗು ಎದ್ದುನಿಂತು ಹತ್ತಿರದ ಮೇಜಿನಿಂದ ಪುಸ್ತಕವನ್ನು ತೆಗೆದುಕೊಂಡು ಓದಲು ಪ್ರಾರಂಭಿಸುತ್ತದೆ.
ಅತ್ತ ಮಹಿಳೆ ಹತ್ತಿರ ಕುಳಿತು ಫೋನ್ನಲ್ಲಿ ಮಾತನಾಡಲು ಪ್ರಾರಂಭಿಸುತ್ತಾರೆ. ಸ್ವಲ್ಪ ಸಮಯದ ನಂತರ, ಮಗು ಪುಸ್ತಕವನ್ನು ಬಿಟ್ಟು ರೂಮ್ ಒಳಗೆ ಹೋಗಿ ಕ್ರಿಕೆಟ್ ಬ್ಯಾಟ್ ತಂದು ಮಹಿಳೆಯ ತಲೆಗೆ ಹೊಡೆಯುತ್ತದೆ. ಮಹಿಳೆ ಪ್ರಜ್ಞಾಹೀನಳಾಗಿ ನೆಲದ ಮೇಲೆ ಬೀಳುತ್ತಾಳೆ ಮತ್ತು ಮಗು ಹಾಸಿಗೆಯ ಮೇಲೆ ಕುಳಿತು ಮತ್ತೆ ಫೋನ್ ನೋಡಲು ಪ್ರಾರಂಭಿಸುತ್ತದೆ.
ಈ ವಿಡಿಯೋವನ್ನು ನೈಜ ಘಟನೆ ಎಂದು ಪರಿಗಣಿಸಿ ಹಲವರು ಚಿಕ್ಕ ಮಕ್ಕಳಿಗೆ ಮೊಬೈಲ್ ಕೊಟ್ಟ ಪರಿಣಾಮ ಇದು ಎಂದು ಹೇಳುತ್ತಿದ್ದಾರೆ. “ಚಿಕ್ಕ ಮಕ್ಕಳಿಗೆ ಮೊಬೈಲ್ ಫೋನ್ ನೀಡುವುದರಿಂದ ಉಂಟಾಗುವ ಪರಿಣಾಮಗಳನ್ನು ನೋಡಿ, ಈ ಮಗು ತನ್ನ ಸ್ವಂತ ತಾಯಿಯ ಪ್ರಾಣವನ್ನು ತೆಗೆದುಕೊಂಡಿತು” ಎಂದು ಬರೆದಿದ್ದಾರೆ.
#मां ने #बेटे को मोबाइल चलाने से डाटा, गाल पर लगाया चांटा! गुस्से में बेटे ने मां की सिर पर बैट से किया हमला मां गंभीर रूप से घायल !!
घटना घर में लगे सीसीटीवी कैमरे में हुई कैद सीसीटीवी वीडियो सोशल मीडिया पर तेजी से हो रहा वायरल!!#ViralVideo #ShockingVideo pic.twitter.com/T4Cn6mMzC7
— PRIYA RANA (@priyarana3101) October 2, 2024
Fact Check:
ಟಿವಿ9 ಕನ್ನಡ ತನ್ನ ಫ್ಯಾಕ್ಟ್ ಚೆಕ್ನಿಂದ ಇದು ನೈಜ ಘಟನೆಯಲ್ಲ, ಸ್ಕ್ರಿಪ್ಟ್ ಮಾಡಿದ ವಿಡಿಯೋ ಎಂದು ಕಂಡುಹಿಡಿದಿದೆ. ನಿಜಾಂಶವನ್ನು ತಿಳಿಯಲು ನಾವು ವಿಡಿಯೋದ ಕೀಫ್ರೇಮ್‌ಗಳನ್ನು ಹಿಮ್ಮುಖವಾಗಿ ಹುಡುಕಿದೆವು. ಆಗ ಅಕ್ಟೋಬರ್ 2, 2024 ರಂದು ಫೇಸ್ಬುಕ್ನಲ್ಲಿ ಅಪ್ಲೋಡ್ ಆದ ಈ ವಿಡಿಯೋದ ದೀರ್ಘ ಆವೃತ್ತಿಯನ್ನು ಕಂಡುಕೊಂಡಿದ್ದೇವೆ. ಇದರ ಕೊನೆಯಲ್ಲಿ, ‘ಜನರು ತಮ್ಮ ಮಕ್ಕಳನ್ನು ಮೊಬೈಲ್ ಫೋನ್‌ಗೆ ದಾಸರನ್ನಾಗದಂತೆ ನೋಡಕೊಳ್ಳಿ’ ಎಂದು ಮನವಿ ಮಾಡಲಾಗಿದೆ. ಅಲ್ಲದೆ, ಇದು ಮನರಂಜನೆ ಮತ್ತು ಜಾಗೃತಿಯ ಉದ್ದೇಶಕ್ಕಾಗಿ ಮಾಡಿದ ಸ್ಕ್ರಿಪ್ಟ್ ವೀಡಿಯೊ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಈ ವಿಡಿಯೋದ ಮೂಲವನ್ನು ಹುಡುಕಿದಾಗ ‘ಐಡಿಯಾಸ್ ಫ್ಯಾಕ್ಟರಿ’ ಹೆಸರಿನ ಫೇಸ್‌ಬುಕ್ ಪೇಜ್ ಮೊದಲು ಹಂಚಿಕೊಂಡಿದೆ. ಆದರೆ ಪ್ರಸ್ತುತ, ಈ ಪುಟವು ಈ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ. ಅಂತಹ ಅನೇಕ ಸ್ಕ್ರಿಪ್ಟ್ ವಿಡಿಯೋಗಳನ್ನು ಈ ಪೇಜ್ನಲ್ಲಿ ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿದೆ.
ಅದೇ Facebook ಪುಟದಲ್ಲಿ ನಾವು ಇನ್ನೊಂದು ಸ್ಕ್ರಿಪ್ಟ್ ಮಾಡಿದ ವಿಡಿಯೋವನ್ನು ಕಂಡುಕೊಂಡಿದ್ದೇವೆ. ಇದನ್ನು ಅಕ್ಟೋಬರ್ 1, 2024 ರಂದು ಹಂಚಿಕೊಳ್ಳಲಾಗಿದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಮಾಡಿದ ಕೊಠಡಿಯಲ್ಲೇ ಈ ವಿಡಿಯೋವನ್ನು ಕೂಡ ಚಿತ್ರೀಕರಿಸಲಾಗಿದೆ. ಇಲ್ಲಿ ತೋರಿಸಿರುವ ಕೊಠಡಿ ಮತ್ತು ಅದರಲ್ಲಿರುವ ಟಿವಿ, ಡೆಸ್ಕ್ ಮತ್ತು ಬಲಭಾಗದಲ್ಲಿ ಇರಿಸಲಾಗಿರುವ ಟ್ರೆಡ್‌ಮಿಲ್ ಯಂತ್ರವನ್ನು ಸಹ ವೈರಲ್ ವಿಡಿಯೋದಲ್ಲಿ ಕಾಣಬಹುದು.
ಹೀಗಾಗಿ ಮೊಬೈಲ್ ಬಳಸಲು ನಿರಾಕರಿಸಿದ್ದಕ್ಕೆ ಮಗು ತನ್ನ ತಾಯಿಯನ್ನೇ ಕೊಂದಿದೆ ಎಂದು ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು ಎಂಬುದನ್ನು ಟಿವಿ9 ಕನ್ನಡ ಖಚಿತವಾಗಿ ಹೇಳುತ್ತದೆ. ಸ್ಕ್ರಿಪ್ಟ್ ಮಾಡಿದ ವಿಡಿಯೋವನ್ನು ನೈಜ ಘಟನೆ ಎಂದು ಹೇಳುವ ಮೂಲಕ ಸುಳ್ಳು ವಿಡಿಯೋ ಹರಿಬಿಡಲಾಗುತ್ತಿದೆ. ಆದರೆ, ಈ ವಿಡಿಯೋದಲ್ಲಿ ಒಂದೊಳ್ಳೆ ಸಂದೇಶವಿದೆ ಎಂಬುದನ್ನು ಗಮನಿಸಬೇಕಾದ ಸಂಗತಿ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ