ಎಲ್ಲರಿಗೂ ಅಪ್ಪ ಇದ್ದಾರೆ ಆದ್ರೆ ನಂಗಿಲ್ಲ, ಯಾಕಪ್ಪಾ ಅಷ್ಟೊಂದು ಕುಡಿದ್ರಿ, ಯಾಕೆ ಹೋದ್ರಿ, ಪುಟ್ಟ ಬಾಲಕಿಯ ಪ್ರಶ್ನೆಗೆ ಉತ್ತರಿಸುವವರ್ಯಾರು?
ಮದ್ಯಪಾನದಿಂದಾಗಿ ಕುಟುಂಬಗಳು ಹೇಗೆ ಸರ್ವನಾಶವಾಗುತ್ತವೆ, ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದಕ್ಕೆ ವೈರಲ್ ವಿಡಿಯೋ ಸಾಕ್ಷಿ. ತಂದೆಯನ್ನು ಕುಡಿತದಿಂದ ಕಳೆದುಕೊಂಡ ಪುಟ್ಟ ಬಾಲಕಿಯೊಬ್ಬಳು ಫೋಟೋ ಮುಂದೆ ನಿಂತು, ‘ಯಾಕೆ ಕುಡಿದ್ರಿ? ಯಾಕೆ ನಮ್ಮನ್ನು ಬಿಟ್ಟು ಹೋದ್ರಿ?’ ಎಂದು ಪ್ರಶ್ನಿಸುತ್ತಾಳೆ. ಈ ಹೃದಯವಿದ್ರಾವಕ ದೃಶ್ಯ ಮದ್ಯದ ವ್ಯಸನದ ಭೀಕರತೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ. ಪೋಷಕರು ತಮ್ಮ ಜವಾಬ್ದಾರಿ ಅರಿಯಲು ಇದು ಸ್ಪೂರ್ತಿಯಾಗಬೇಕು.

ಕುಡಿತದ ಚಟ ಹೇಗೆ ಒಂದು ಸುಂದರ ಸಂಸಾರವನ್ನು ಸರ್ವನಾಶ ಮಾಡುತ್ತದೆ, ಅದರ ಜತೆಗೆ ಮಕ್ಕಳ ಮನಸ್ಸಿನ ಮೇಲೆ ಎಂಥಾ ದುಷ್ಪರಿಣಾಮವನ್ನು ಬೀರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಪುಟ್ಟ ಹೆಣ್ಣುಮಗುವೊಂದು ಅಪ್ಪ, ಅಮ್ಮನ ಜತೆ ತಾನು ನಿಂತಿರುವ ಫೋಟೊದ ಬಳಿ ಹೋಗಿ ಎಲ್ಲರಿಗೂ ಅಪ್ಪ ಇದ್ದಾರೆ ಆದ್ರೆ ನನಗೆ ಮಾತ್ರ ಇಲ್ಲ, ಯಾಕಪ್ಪಾ ಅಷ್ಟೊಂದು ಕುಡಿದ್ರಿ, ಯಾಕಪ್ಪಾ ನಮ್ಮನ್ನು ಬಿಟ್ಟು ಹೋದ್ರಿ ಎಂದು ಕೇಳುವ ಪ್ರಶ್ನೆಗೆ ಉತ್ತರಿಸುವವರ್ಯಾರು?.
‘@flix.indian’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊದಲ್ಲಿ, ಬಾಲಕಿಯೊಬ್ಬಳು ಅಪ್ಪನ ಫೋಟೊದೆದುರು ನಿಂತು ತುಂಬಾ ಭಾವುಕಳಾಗಿ ಹಾಗೂ ಕೋಪದಿಂದ ಮಾತನಾಡುತ್ತಿರುವುದನ್ನು ಕಾಣಬಹುದು. ತನ್ನ ತಂದೆ ಫೋಟೋದಲ್ಲಿದ್ದರೂ, ಅವರು ತನ್ನೆದುರೇ ಇದ್ದಾರೆ ಎಂಬಂತೆ ಮಾತನಾಡಿದ ಬಾಲಕಿ, ಮದ್ಯದ ವ್ಯಸನದ ವಿನಾಶಕಾರಿ ಮುಖವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾಳೆ.
ಅಪ್ಪಾ, ಅಮ್ಮ ನಿಮ್ಮನ್ನು ಕುಡಿಯಬೇಡಿ ಅಂತ ತಡೆಯುತ್ತಿದ್ದರು. ಆದ್ರೂ ನೀವು ಯಾಕೆ ಅಷ್ಟೊಂದು ಕುಡಿದ್ರಿ? ಇವತ್ತು ಬೇರೆ ಎಲ್ಲಾ ಮಕ್ಕಳಿಗೂ ಅಪ್ಪ ಇದ್ದಾರೆ. ಆದ್ರೆ ನೀವು ಮಾತ್ರ ಮದ್ಯಪಾನ ಮಾಡಿ ನಮ್ಮನ್ನು ಬಿಟ್ಟು ಹೋಗಿದ್ದೀರಿ.
ಈ ವೀಡಿಯೊ ಎಲ್ಲಿಯದು ಮತ್ತು ಬಾಲಕಿಯ ಹೆಸರೇನು ಎಂಬ ಮಾಹಿತಿ ಲಭ್ಯವಿಲ್ಲದಿದ್ದರೂ, ಅವಳು ವ್ಯಕ್ತಪಡಿಸಿದ ನೋವು ಮಾತ್ರ ಪ್ರತಿಯೊಬ್ಬರ ಹೃದಯವನ್ನು ತಟ್ಟುವಂತಿದೆ. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ, ಸಾವಿರಾರು ಜನರು ಕಮೆಂಟ್ ಬಾಕ್ಸ್‌ನಲ್ಲಿ ತಮ್ಮ ಬಾಲ್ಯದ ಕಹಿ ನೆನಪುಗಳು ಮತ್ತು ಆಘಾತಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ವಿಡಿಯೋ
View this post on Instagram
ನನ್ನ ತಂದೆ ಇಂದಿಗೂ ಮದ್ಯಪಾನ ಮಾಡುತ್ತಾರೆ. ಅವರ ವರ್ತನೆ ಕಂಡು ಬೇಸತ್ತು ನಾನು ಜೀವನದಲ್ಲಿ ಎಂದಿಗೂ ಮದ್ಯವನ್ನು ಮುಟ್ಟಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ನನ್ನ ಬಾಲ್ಯದ ನೆಮ್ಮದಿಯ ದಿನ ಯಾವುದು ಗೊತ್ತಾ? ನನ್ನ ತಂದೆ ಕುಡಿದು ಗಲಾಟೆ ಮಾಡಿ ಊರು ಬಿಟ್ಟು ಹೋಗಿದ್ದ ದಿನಗಳು. ನಿಮಗೆ ಮದ್ಯದ ವ್ಯಸನವಿದ್ದರೆ ದಯವಿಟ್ಟು ಮದುವೆಯಾಗಬೇಡಿ, ಮಕ್ಕಳನ್ನು ಪಡೆದು ಅವರ ಜೀವನ ಹಾಳು ಮಾಡಬೇಡಿ ಎಂದು ಬರೆದಿದ್ದಾರೆ.
ಪ್ರತಿಯೊಂದು ಮಗುವಿಗೂ ಒಬ್ಬರು ಒಳ್ಳೆಯ ಪೋಷಕರು ಬೇಕು. ಆದರೆ ಪ್ರತಿಯೊಬ್ಬ ಪೋಷಕರೂ ಮಗುವನ್ನು ಪಡೆಯಲು ಅರ್ಹರಾಗಿರುವುದಿಲ್ಲ. ನನ್ನ ತಂದೆಯನ್ನೂ ನಾನು ಇದೇ ಮದ್ಯದ ವ್ಯಸನದಿಂದ ಕಳೆದುಕೊಂಡೆ. ಈ ಪುಟ್ಟ ಹುಡುಗಿಯ ನೋವು ಏನೆಂದು ನನಗೆ ಗೊತ್ತು ಎಂದು ಹೇಳಿಕೊಂಡಿದ್ದಾರೆ. ಈ ಪುಟ್ಟ ಬಾಲಕಿಯ ಕಣ್ಣೀರು ಮತ್ತು ಪ್ರಾಮಾಣಿಕ ಮಾತುಗಳು, ಮದ್ಯದ ದಾಸರಾಗಿರುವ ಎಷ್ಟೋ ಪೋಷಕರಿಗೆ ತಮ್ಮ ಜವಾಬ್ದಾರಿಯನ್ನು ನೆನಪಿಸುವಂತಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:25 am, Thu, 18 June 26




