ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ…ಎಂದು ಕೈಮುಗಿಯುವ ದೇಶ ನಮ್ಮದು. ಇಂತಹ ಮಹತ್ವದ ಸ್ಥಾನದಲ್ಲಿರುವ ಗುರು ಮಕ್ಕಳಿಗೆ ಮಾದರಿಯಾಗಿರಬೇಕು. ಆದರೆ ಇಲ್ಲೊಬ್ಬರು ಗುರು ಕಂಠಪೂರ್ತಿ ಕುಡಿದು ಬಂದು ಕ್ಲಾಸ್ ರೂಮ್ನಲ್ಲೇ ಗಡತ್ತಾಗಿ ನಿದ್ದೆ ಮಾಡಿರುವ ಘಟನೆ ನಡೆದಿದೆ. ಇದನ್ನು ನೋಡಿ ಮಕ್ಕಳು ಕಂಗಾಲಾಗಿದ್ದಾರೆ. ಏಕೆಂದರೆ ಅತ್ತ ಪಾಠವಿಲ್ಲ, ಇತ್ತ ಟೀಚರ್ಗೆ ಎಚ್ಚರವಿಲ್ಲ…! ಹೌದು, ಇಂತಹದೊಂದು ಘಟನೆ ನಡೆದಿರುವುದು ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ..ಪೂಜಿಸುವ ನಮ್ಮದೇ ದೇಶದ ಛತ್ತೀಸ್ಗಢ ರಾಜ್ಯದಲ್ಲಿ ಎಂಬುದು ನಾಚಿಗೇಡಿನ ಸಂಗತಿ.
ಛತ್ತೀಸ್ಗಢದ ಜಶ್‌ಪುರದ ಸರ್ಕಾರಿ ಶಾಲೆಯ ಶಿಕ್ಷಕಿ ಜಗಪತಿ ಭಗತ್ ಕುಡಿದು ಟೈಟಾಗಿ ಶಾಲೆಗೆ ಬಂದಿದ್ದರು. ಕಂಠಪೂರ್ತಿ ಕುಡಿದಿದ್ದ ಶಿಕ್ಷಕಿಗೆ ಮಕ್ಕಳಿಗೆ ಪಾಠ ಹೇಳಿಕೊಡುವಷ್ಟು ತ್ರಾಣವೂ ಕೂಡ ಇರಲಿಲ್ಲ. ಹೀಗಾಗಿ ಅಲ್ಲೇ ಕುರ್ಚಿ ಹಾಕಿ ನಿದ್ದೆ ಮಾಡಿದ್ದಾರೆ.
ಅದೃಷ್ಟವಶಾತ್ ಅದೇ ಸಮಯಕ್ಕೆ ಪರಿಶೀಲನೆಗೆ ಸ್ಥಳೀಯ ಶಿಕ್ಷಣಾಧಿಕಾರಿ ಎಂಜೆಯು ಸಿದ್ದಿಕಿ ಶಾಲೆಗೆ ಭೇಟಿ ನೀಡಿದ್ದಾರೆ. ಅತ್ತ ಕ್ಲಾಸ್ ರೂಮ್ನಲ್ಲಿ ಮಕ್ಕಳ ಗದ್ದಲಗಳು ಕೇಳಿ ಬರುತ್ತಿದ್ದರೂ ಟೀಚರ್ನ ಒಂದೇ ಒಂದು ಶಬ್ದ ಕೇಳಿ ಬರುತ್ತಿರಲಿಲ್ಲ. ಹೀಗಾಗಿ ಶಿಕ್ಷಣಾಧಿಕಾರಿ ನೇರವಾಗಿ ತರಗತಿಯೊಳಗೆ ಹೋಗಿದ್ದಾರೆ. ಈ ವೇಳೆ ಕಂಡ ದೃಶ್ಯದಿಂದ ಖುದ್ದು ಶಿಕ್ಷಣಾಧಿಕಾರಿಯೇ ದಂಗಾಗಿ ಹೋದರು. ಏಕೆಂದರೆ ಶಿಕ್ಷಣಾಧಿಕಾರಿ ಹೋಗಿ ಮುಂದೆ ನಿಂತರೂ, ಅಮಲಿನಲ್ಲಿದ್ದ ಶಿಕ್ಷಕಿಗೆ ಮೈಮೇಲೆ ಯಾವುದೇ ಪ್ರಜ್ಞೆಯೇ ಇರಲಿಲ್ಲ. ಹಲವು ಬಾರಿ ಎಚ್ಚರಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಹೀಗಾಗಿ ಬಿಇಒ ಹೆಚ್ಚುವರಿ ಎಸ್ಪಿಗೆ ಕರೆ ಮಾಡಿ ಮಹಿಳಾ ಪೊಲೀಸರನ್ನು ಕರೆಸಿದ್ದಾರೆ. ಆ ಬಳಿಕ ಬಂದ ಮಹಿಳಾ ಪೊಲೀಸರು ಜಗಪತಿ ಭಗತ್ ಅವರನ್ನು ವಶಕ್ಕೆ ಪಡೆದರು. ಅಚ್ಚರಿ ಎಂದರೆ ಈ ಶಾಲೆಯಲ್ಲಿ ಒಟ್ಟು 54 ಮಕ್ಕಳು ಓದುತ್ತಿದ್ದಾರೆ. ಅಲ್ಲದೆ ಜಗಪತಿ ಭಗತ್ ಎಲ್ಲಾ ವಿಷಯಗಳನ್ನು ಕಲಿಸುತ್ತಾರೆ. ಆದರೆ ಶಿಕ್ಷಣಾಧಿಕಾರಿಯ ಭೇಟಿಯ ವೇಳೆ ಶಿಕ್ಷಕಿಯು ಪಾನಮತ್ತಳಾಗಿರುವುದು ಕಂಡು ಬಂದಿದ್ದು, ಹೀಗಾಗಿ ಮಕ್ಕಳಿಗೆ ಅದ್ಯಾವ ರೀತಿಯ ಪಾಠ ಹೇಳಿಕೊಡುತ್ತಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಇನ್ನು ಇಡೀ ಘಟನೆಯನ್ನು ಕಣ್ಣಾರೆ ಕಂಡ ಶಿಕ್ಷಣಾಧಿಕಾರಿಯು ಶಿಕ್ಷಕಿ ಜಗಪತಿ ಭಗತ್ರನ್ನು ಅಮಾನತುಗೊಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಿಇಒ ಸಿದ್ದಿಕಿ, ‘ನಾನು ಶಾಲೆಗಳಿಗೆ ನಿತ್ಯ ತಪಾಸಣೆಗೆ ಹೋಗುತ್ತಿರುತ್ತೇನೆ. ಆದರೆ ಶಿಕ್ಷಕಿಯೊಬ್ಬರು ಕಂಠಪೂರ್ತಿ ಕುಡಿದು ಪ್ರಜ್ಞಾಹೀನಳಾಗಿರುವುದು ನೋಡಿದ್ದು ಇದೇ ಮೊದಲ ಬಾರಿಗೆ. ಆರಂಭದಲ್ಲಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ನಾನು ಭಾವಿಸಿದೆ. ಮಕ್ಕಳಿಂದ ಅವರ ಆರೋಗ್ಯ ವಿಚಾರಿಸಿದೆ. ಮಕ್ಕಳ ಉತ್ತರದಿಂದ ನನಗೆ ಆಶ್ಚರ್ಯವಾಯಿತು. ಮಕ್ಕಳೇ ಮದ್ಯಪಾನ ಮಾಡಿ ಶಿಕ್ಷಕಿ ಪ್ರಜ್ಞೆ ತಪ್ಪಿದ್ದಾರೆ ಎಂದರು.
ಹೀಗಾಗಿ ಜಶ್‌ಪುರ ಹೆಚ್ಚುವರಿ ಎಸ್‌ಪಿ ಪ್ರತಿಭಾ ಪಾಂಡೆ ಅವರಿಗೆ ಕರೆ ಮಾಡಿ ಸಂಪೂರ್ಣ ವಿಷಯ ತಿಳಿಸಿ, ಶಿಕ್ಷಕಿಯ ವೈದ್ಯಕೀಯ ತಪಾಸಣೆ ಮಾಡಿಸಲು ಮಹಿಳಾ ಪೊಲೀಸರನ್ನು ಕಳುಹಿಸುವಂತೆ ಮನವಿ ಮಾಡಿದೆ. ಕೂಡಲೇ ಇಬ್ಬರು ಮಹಿಳಾ ಪೊಲೀಸರನ್ನು ಶಾಲೆಗೆ ಕಳುಹಿಸಿದರು. ಮಹಿಳಾ ಶಿಕ್ಷಕಿಯನ್ನು ಪೊಲೀಸ್ ವ್ಯಾನ್‌ನಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಪರೀಕ್ಷಿಸಿ ಶಿಕ್ಷಕಿ ಮದ್ಯ ಸೇವಿಸಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಹೀಗಾಗಿ ತಕ್ಷಣವೇ ಜಾರಿಗೆ ಬರುವಂತೆ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಶಿಕ್ಷಣಾಧಿಕಾರಿ ಸಿದ್ದಿಕಿ ತಿಳಿಸಿದ್ದಾರೆ.