Emotions: ಗೂಗಲ್ ಸಿಇಒ ಸುಂದರ್ ಪಿಚ್ಚೈ ಅಪ್ಪ ಕಣ್ಣೀರು; ಚೆನ್ನೈ ಮನೆ ಮಾರುವಾಗ ಭಾವೋದ್ವೇಗದ ಕ್ಷಣಗಳು; ಘಟನೆ ಸ್ಮರಿಸಿದ ತಮಿಳು ನಟ
Google CEO's Father In Tears: ಅಮೆರಿಕದಲ್ಲಿ ಭವ್ಯ ಬಂಗಲೆ ಹೊಂದಿರುವ ಗೂಗಲ್ ಸಿಇಒ ಸುಂದರ್ ಪಿಚ್ಚೈ ಅವರು ಚೆನ್ನೈನಲ್ಲಿ ಹುಟ್ಟಿ ಬೆಳೆದಿದ್ದ ಮನೆಯನ್ನು ಮಾರಲಾಗಿದೆ. ಈ ವೇಳೆ ಅವರ ಅಪ್ಪ ಗಳಗಳನೇ ಅತ್ತಿದ್ದು, ಅವರ ಸರಳತೆ, ಸಜ್ಜನಿಗೆ ಇತ್ಯಾದಿಯನ್ನು ತಮಿಳು ಚಿತ್ರ ನಿರ್ಮಾಪಕ ಸಿ. ಮಣಿಕಂಡನ್ ಸ್ಮರಿಸಿದ್ದಾರೆ.
ಚೆನ್ನೈ: ಇದು ಯಾರದ್ದೇ ಜೀವನದಲ್ಲಾದರೂ ಬರಬಹುದಾದ ಮನಕಲಕುವ ಪ್ರಸಂಗ. ಮಗ ಕೋಟಿ ಕೋಟಿಗಳ ಲೆಕ್ಕವೇ ಸಿಗದಷ್ಟು ಕುಬೇರ. ವಿಶ್ವದ ಇಡೀ ಜನಸಮುದಾಯದ ಮೇಲೆ ಪ್ರಭಾವ ಬೀರುವ, ನಿಯಂತ್ರಣ ಹೊಂದಿರುವ ಗೂಗಲ್ ಕಂಪನಿಯ ಸಿಇಒ ಸುಂದರ್ ಪಿಚ್ಚೈ (Sundar Pichai). ಚೆನ್ನೈನಲ್ಲಿ ಇವರು ಹುಟ್ಟಿ ಬೆಳೆದ ಮನೆಯನ್ನು ಮಾರಲಾಗಿದೆ. ಇದರಲ್ಲೇನು ವಿಶೇಷ ಎನ್ನಬಹುದು…! ಈ ಮನೆಯನ್ನು ಖರೀದಿಸಿದ್ದು ತಮಿಳು ನಟ ಮತ್ತು ನಿರ್ಮಾಪಕ ಸಿ. ಮಣಿಕಂಡನ್. ಈ ಮನೆ ಮಾರುವಾಗ ಸುಂದರ್ ಪಿಚ್ಚೈ ಅವರ ತಂದೆ ಮತ್ತು ತಾಯಿ ಇಬ್ಬರು ಅನುಭವಿಸಿದ ಭಾವೋದ್ವೇಗದ ಕ್ಷಣಗಳು, ಆ ಹಿರಿಯ ಜೀವಗಳ ಸರಳತೆ ಎಲ್ಲವನ್ನೂ ಮಣಿಕಂಡನ್ ಬಿಚ್ಚಿಟ್ಟು ಮನಕಲಕುವಂತೆ ಮಾಡಿದ್ದಾರೆ.
ಗಳಗಳನೇ ಅತ್ತ ರಘುನಾಥ್ ಪಿಚ್ಚೈ
ಸುಂದರ್ ಪಿಚೈ ಅಮೆರಿಕದಲ್ಲಿ ಭವ್ಯವಾದ ಅರಮನೆಯಂಥ ಬಂಗಲೆ ಹೊಂದಿದ್ದಾರೆ. ಆದರೆ, ಅವರು ಹುಟ್ಟಿ ಬೆಳೆದದ್ದು ಚೆನ್ನೈನ ಅಶೋಕ್ ನಗರ್ನಲ್ಲಿ. ಇವರ ತಂದೆ ರಘುನಾಥ್ ಪಿಚ್ಚೈ ಎಲೆಕ್ಟ್ರಿಕ್ ಎಂಜಿನಿಯರ್. ತಾಯಿ ಲಕ್ಷ್ಮೀ ಸ್ಟೆನೋಗ್ರಾಫ್ ಆಗಿದ್ದವರು.
ಸುಂದರ್ ಪಿಚ್ಚೈ ತಂದೆ ರಘುನಾಥ್ ಅವರು ಇಲ್ಲಿಯ ತಮ್ಮ ಮನೆಯನ್ನು ಮಾರಿದ್ದಾರೆ. ಮನೆಯನ್ನು ಕೆಡವಿ ನಿವೇಶನವನ್ನು ಮಾರಿದ್ದಾರೆ. ತಮಿಳು ನಟ ಸಿ. ಮಣಿಕಂಡನ್ ಅವರು ಈ ನಿವೇಶನ ಖರೀದಿಸಿದವರು. ಆ ಕ್ಷಣಗಳನ್ನು ನೆನಸಿಕೊಂಡ ಮಣಿಕಂಡನ್, ‘ಅವರು ನನ್ನ ಕೈಗೆ ದಾಖಲೆಪತ್ರಗಳನ್ನು ಕೊಡುವಾಗ ಕೆಲ ನಿಮಿಷ ಗಳಗಳನೇ ಅತ್ತುಬಿಟ್ಟರು’ ಎಂದು ಹೇಳುತ್ತಾರೆ.
ಇದನ್ನೂ ಓದಿ: Green Card: ಅಮೆರಿಕದ ಗ್ರೀನ್ ಕಾರ್ಡ್ ಪಡೆಯಲು ದಶಕದಿಂದ ಕಾಯುತ್ತಿರುವ ಭಾರತೀಯರು; ಯಾಕಿಷ್ಟು ವಿಳಂಬ? ಬಯಲಾಯ್ತು ಕಾರಣ
ಸುಂದರ್ ಪಿಚ್ಚೈ ಅವರ ಅಪ್ಪ ಅಮ್ಮ ಸಂಪಾದಿಸಿದ ಮೊದಲ ಆಸ್ತಿಯಾಗಿತ್ತು ಈ ಮನೆ. ಹೀಗಾಗಿ, ಯಾರಿಗಾದರೂ ಸರಿ ಆ ಆಸ್ತಿ ಮಾರುವಾಗ ಅದೆಷ್ಟು ನೋವಾಗಿರಬೇಡ..!
ಮಗ ಗೂಗಲ್ ಸಿಇಒ ಅಂತ ಹೇಳದಷ್ಟು ಸರಳಮೂರ್ತಿಗಳು ಲಕ್ಷ್ಮೀ ಮತ್ತು ರಘುನಾಥ್ ಪಿಚ್ಚೈ
ಮಗ ಗೂಗಲ್ ಕಂಪನಿಯ ಸಿಇಒ ಆಗಿದ್ದರೆ ಯಾರಾದರೂ ಸರಿ ಅದೆಷ್ಟು ಮೆರೆದಾಡಬೇಡ. ಆದರೆ, ಲಕ್ಷ್ಮೀ ಮತ್ತು ರಘುನಾಥ್ ದಂಪತಿ ಇದ್ಯಾವುದೂ ಇಷ್ಟಪಡದಷ್ಟು ಸರಳ ಜೀವಿಗಳು. ನಿವೇಶನ ಮಾರುವಾಗ ಕಾಗದಪತ್ರ ಇತ್ಯಾದಿ ಸಿದ್ಧಪಡಿಸಲು ಮಗನ ಹೆಸರು ಹೇಳಿದ್ದರೆ ಒಂದೇ ದಿನದಲ್ಲಿ ಎಲ್ಲವೂ ಸಿದ್ಧವಾಗಿಬಿಡುತ್ತಿತ್ತು. ಆದರೆ ಈ ಹಿರಿಯರು ಹಾಗೆ ಮಾಡಲಿಲ್ಲ. ತಾವೇ ಶ್ರಮವಹಿಸಿ ಮಾರಾಟ ದಾಖಲೆ ಸಿದ್ಧಪಡಿಸಿದ್ದಾರೆ. ತಮಿಳು ನಟ ಸಿ ಮಣಿಕಂಡನ್ ಈ ವಿಚಾರವನ್ನು ಹೊರಗೆಡವಿದ್ದು, ಗೂಗಲ್ ಸಿಇಒನ ತಂದೆ ತಾಯಿಯ ಸರಳತೆಯನ್ನು ಕೊಂಡಾಡಿದ್ದಾರೆ.
‘ನೊಂದಣಿ ಕಚೇರಿಯಲ್ಲಿ ಅವರು ಗಂಟೆಗಟ್ಟಲೆ ಕಾದು, ಎಲ್ಲಾ ತೆರಿಗೆಗಳನ್ನು ಕಟ್ಟಿದ್ದಾರೆ. ಅವರು ತಮ್ಮ ಮಗನ ಹೆಸರು ಹೇಳಿದ್ದರೆ ಎಲ್ಲವೂ ಕ್ಷಣಮಾತ್ರದಲ್ಲಿ ಆಗಿಹೋಗುತ್ತಿತ್ತು,’ ಎಂದನ್ನುತ್ತಾರೆ ಮಣಿಕಂಡನ್.
ಇದನ್ನೂ ಓದಿ: ಕೇವಲ 270 ರೂ.ಗೆ ಇಟಲಿಯಲ್ಲಿ 3 ಮನೆಗಳನ್ನು ಖರೀದಿಸಿದ ಮಹಿಳೆ; ಆದರೆ ಇಲ್ಲಿದೆ ಒಂದು ಟ್ವಿಸ್ಟ್!
‘ಸುಂದರ್ ಅವರ ತಾಯಿ ತಾವೇ ಖುದ್ದಾಗಿ ಫಿಲ್ಟರ್ ಕಾಫಿ ಮಾಡಿಕೊಟ್ಟರು. ಅವರ ತಂದೆ ನನ್ನ ಮೊದಲ ಭೇಟಿಯಲ್ಲೇ ದಾಖಲೆಪತ್ರಗಳನ್ನು ಕೊಡಲು ಮುಂದಾದರು… ಮನೆಯನ್ನು ಕೆಡವಿದ ವೆಚ್ಚವನ್ನು ತಾವೇ ಭರಿಸಿದರು’ ಎಂದು ಸಿ. ಮಣಿಕಂಡನ್ ಹೇಳುತ್ತಾರೆ.
ತಮಿಳು ನಟ ಮಣಿಕಂಡನ್ಗೆ ಗೊತ್ತಿತ್ತಾ, ಅದು ಗೂಗಲ್ ಸಿಇಒ ಮನೆ ಎಂದು?
ರಘುನಾಥ್ ಪಿಚ್ಚೈ ಅವರು ಚೆನ್ನೈನ ಅಶೋಕ್ ನಗರದ ತಮ್ಮ ಮನೆಯನ್ನು ಮಾರಲು ಮುಂದಾದಾಗ, ಅದರ ವಿಚಾರ ತಿಳಿದ ಸಿನಿಮಾ ನಿರ್ಮಾಪಕ ಮಣಿಕಂಡನ್ ಅವರಿಗೆ ಇದು ಗೂಗಲ್ ಸಿಇಒ ಹುಟ್ಟಿ ಬೆಳೆದ ಮನೆ ಎಂಬುದು ಗೊತ್ತಾಗಿತ್ತು. ದೇಶಕ್ಕೆ ಹೆಮ್ಮೆ ತಂದಿರುವ ಸುಂದರ್ ಪಿಚ್ಚೈ ಅವರ ಮನೆ ಇರುವ ಜಾಗ ಖರೀದಿಸುವುದು ತಮಗೂ ಹೆಮ್ಮೆ ಎಂದು ಮಣಿಕಂಡನ್ ಭಾವಿಸಿದ್ದಾರೆ.
ಸದ್ಯ ಸುಂದರ್ ಪಿಚ್ಚೈ ಅವರ ತಂದೆ ಮತ್ತು ತಾಯಿ ಅಮೆರಿಕದಲ್ಲಿ ತಮ್ಮ ಮಗನ ಜೊತೆ ಇದ್ದಾರೆ. ಗೂಗಲ್ ಸಿಇಒ ಅವರು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲೋಸ್ ಆಲ್ಟೋಸ್ ಹಿಲ್ಸ್ನ ವೆಸ್ಟ್ವಿಂಡ್ ವೇ ಬಳಿ ಭವ್ಯವಾದ ಮನೆ ಹೊಂದಿದ್ದಾರೆ. 3 ಬೆಡ್ರೂಮ್, 5 ಬಾತ್ರೂಮ್ಗಳು ಈ ಮನೆಯಲ್ಲಿವೆ. ಮನೆ ಮಾರಾಟಕ್ಕೆಂದು ರಘುನಾಥ್ ಅವರು ಅಮೆರಿಕದಿಂದ ಚೆನ್ನೈಗೆ ಬಂದಿದ್ದರಂತೆ.