ಕೆಲವೊಂದು ಘಟನೆಗಳು ತೀರಾ ಆಕಸ್ಮಿಕವಾಗಿದ್ದರೂ ದೀರ್ಘಕಾಲ ನೆನಪಿಟ್ಟುಕೊಳ್ಳುವ ಮಟ್ಟಿಗೆ ಅಚ್ಚರಿ ಮೂಡಿಸುತ್ತವೆ. ಇನ್ಯಾವಾಗಲೋ, ಯಾವುದೋ ಘಟನೆಯಾದಾಗ ಜನ ತಮ್ಮ ಸ್ಮೃತಿಪಟಲದಿಂದ ಹಳೇ ಘಟನೆಯನ್ನು ತೆಗೆದು ಅವೆರಡನ್ನೂ ಹೋಲಿಸಿ ಆಗೊಮ್ಮೆ ಹೀಗೇ ಆಗಿತ್ತು ನೋಡಿ ಎಂದು ನೆನಪಿಸಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣಗಳು ಮುನ್ನೆಲೆಗೆ ಬಂದ ನಂತರವಂತೂ ನಮ್ಮ ದೈನಂದಿನ ಜೀವನದ ಆಗುಹೋಗುಗಳು ಯಾವ ಕ್ಷಣದಲ್ಲೂ, ಯಾರಿಂದ ಬೇಕಾದರೂ ಚಿತ್ರೀಕರಣಗೊಂಡು ನಮಗೇ ಅರಿಯದಂತೆ ವೈರಲ್ ಆಗುವ ಸಂಭವ ಹೆಚ್ಚು. ಕೆಲವೊಂದಷ್ಟು ಘಟನೆಗಳು ಚಿತ್ರೀಕರಣಗೊಳ್ಳದೇ ಇದ್ದಲ್ಲಿ ಹೀಗಾಯ್ತು ಎಂದು ಬಾಯಿಬಿಟ್ಟು ಹೇಳಿದರೂ ಜನ ನಂಬದೇ ದಾಖಲೆ ಕೇಳುವ ಸ್ಥಿತಿ ಇದೆ ಬಿಡಿ. ಹೀಗಾಗಿ, ಅದೆಷ್ಟೇ ನಿಬ್ಬೆರಗಾಗಿಸುವ ಘಟನೆ ಇದ್ದರೂ ಅದನ್ನು ಕಿವಿಯಲ್ಲಿ ಕೇಳಿ, ಮತ್ತೊಬ್ಬರಿಗೆ ಹೇಳುತ್ತಾ ಹೋಗುವುದಕ್ಕಿಂತ. ಮೊಬೈಲಿನಲ್ಲಿ ವಿಡಿಯೋ ಸಿಕ್ಕರೆ ಮತ್ತೆ ಮತ್ತೆ ನೋಡಿ, ಊರಿಗೆಲ್ಲಾ ಹಂಚಿ ಬೆರಗುಗೊಳ್ಳುವುದು ಈ ಕಾಲದ ಟ್ರೆಂಡಿಂಗ್!
ಇತ್ತೀಚೆಗೆ ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ ಹಂಚಿಕೊಂಡ ವಿಡಿಯೋ ಒಂದು ಮೊಬೈಲಿಂದ ಮೊಬೈಲಿಗೆ ದಾಟಿ ಭಾರೀ ವೈರಲ್ ಆಗಿಬಿಟ್ಟಿದೆ. ಪ್ರಸಿದ್ಧ ವ್ಯಕ್ತಿ ಯಾವುದಾದರೂ ಘಟನೆ ಹಂಚಿಕೊಂಡರೆ ಅದು ಹೆಚ್ಚು ಸಂಖ್ಯೆಯ ಜನರಿಗೆ ತಲುಪುವುದೂ ಸಹಜವಾದ್ದರಿಂದ ಬಲುಬೇಗನೇ ವೈರಲ್ ಆಗಿದೆ. ರಸ್ತೆಯಲ್ಲಿ ನಡೆದ ಘಟನೆಯೊಂದರ ದೃಶ್ಯ ಇದಾಗಿದ್ದು, ಸಿಸಿ ಕ್ಯಾಮೆರಾದಲ್ಲಿ ಚಿತ್ರೀಕರಣವಾದಂತೆ ಕಾಣುತ್ತದೆ. ಒಬ್ಬ ದಾರಿಹೋಕನ ಮೇಲೆ ಇನ್ನೇನು ಪಲ್ಟಿ ಹೊಡೆದೇ ಬಿಟ್ಟಿತು ಎಂಬಂತೆ ವೇಗವಾಗಿ ನುಗ್ಗಿದ್ದ ಆಟೋವನ್ನು ಆ ವ್ಯಕ್ತಿ ಸಲೀಸಾಗಿ ಕೈಯಿಂದಲೇ ನೆಟ್ಟಗೆ ಮಾಡಿದ ವಿಡಿಯೋ ನೋಡಿ ಎಲ್ಲರೂ ಹುಬ್ಬೇರಿಸುತ್ತಿದ್ದಾರೆ.
Hilarious. Nothing beats Desi ‘Tech-Humour.’ I’d love to see more such Desi Depictions of Digital terms. What would you show for ‘Spell Check?’ A devotee gazing at a meditating Guru? pic.twitter.com/XNdK5ySCnU
— anand mahindra (@anandmahindra) June 22, 2021
ವಿಡಿಯೋ ಹೇಗೆ ಗಮನ ಸೆಳೆಯುತ್ತದೋ ಅಷ್ಟೇ ತಮಾಷೆ ಎನ್ನಿಸುವುದು ಅದರ ಅಂತ್ಯದಲ್ಲಿ ಆ ಘಟನೆಯನ್ನು ವರ್ಣಿಸಿರುವ ರೀತಿ. ಸಾಧಾರಣವಾಗಿ ಮೊಬೈಲ್, ಲ್ಯಾಪ್ಟಾಪ್ಗಳಲ್ಲಿ ಟೈಪ್ ಮಾಡುವಾಗ ಪದಗಳ ಸ್ಪೆಲ್ಲಿಂಗ್ ತಪ್ಪಾದರೆ ಅದು ತನ್ನಿಂತಾನೆ ಸರಿಯಾಗುವ ತಂತ್ರಜ್ಞಾನಕ್ಕೆ ಬಳಸುವ ಆಟೋ ಕರೆಕ್ಟ್ ಪದವನ್ನು ವಿಡಿಯೋದ ಕೊನೆಗೆ ನೀಡಿರುವುದು ಮುಖದ ಮೇಲೆ ನಗು ಮೂಡಿಸುತ್ತದೆ.
ವಿಡಿಯೋ ಹಂಚಿಕೊಳ್ಳುವ ಮುನ್ನ ಅದರ ಬಗ್ಗೆ ಎರಡು ಸಾಲು ಬರೆದುಕೊಂಡಿರುವ ಆನಂದ್ ಮಹೀಂದ್ರಾ, ಇಂತಹ ಪನ್ಗಳನ್ನು ನೋಡುವುದಕ್ಕೆ ಖುಷಿಯಾಗುತ್ತದೆ. ಪದಗಳನ್ನಿಟ್ಟುಕೊಂಡು ಚೇಷ್ಟೆ ಮಾಡಿ ಅತ್ಯಂತ ಕ್ರಿಯಾಶೀಲವಾಗಿ ಒಂದು ಘಟನೆಯನ್ನು ತೋರಿಸುವುದು ನಿಜಕ್ಕೂ ಒಂದು ಕಲೆ. ಅದರಲ್ಲಿ ನಮ್ಮ ಸಾಮಾಜಿಕ ಜಾಲತಾಣ ಪ್ರವೀಣರನ್ನು ಮೀರಿಸುವುದು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.
ಸದ್ಯ ಈ ಆಟೋ ಕರೆಕ್ಟ್ ವಿಡಿಯೋ ಭಾರೀ ಗಮನ ಸೆಳೆಯುತ್ತಿದೆ. ಅದೃಷ್ಟವಶಾತ್ ದಾರಿಹೋಕ ತಕ್ಷಣ ಎಚ್ಚೆತ್ತು ಮೈಮೇಲೆಯೇ ಬೀಳಬೇಕಿದ್ದ ಆಟೋವನ್ನು ತಳ್ಳಿ ಬಚಾವಾದ ಕಾರಣ ಇದೀಗ ತಮಾಷೆಯ ವಸ್ತುವಾಗಿದೆ. ಒಂದುವೇಳೆ ಆಗಬಾರದೇನಾದರೂ ಆಗಿದ್ದರೆ ವೇಗವಾಗಿ ಆಟೋ ನುಗ್ಗಿಸಿದ ಚಾಲಕನ ಅಜಾಗರೂಕತೆಯಿಂದ ಗಂಭೀರ ದುರ್ಘಟನೆಯೇ ನಡೆದು ಹೋಗುತ್ತಿತ್ತು ಎನ್ನುವುದು ಸುಳ್ಳಲ್ಲ.
ಇದನ್ನೂ ಓದಿ:
ಉದ್ಯಮಿ ಆನಂದ್ ಮಹಿಂದ್ರ ಪೋಸ್ಟ್ ಮಾಡಿದ ಬೈಕರ್ಗಳನ್ನು ಕರಡಿ ಬೆನ್ನಟ್ಟಿರುವ ವಿಡಿಯೋ ವೈರಲ್ ಆಗಿದೆ
ಅಯ್ಯೋ ಪಾಪ ಎನ್ನುವ ಮುನ್ನ ಪೂರ್ತಿ ವಿಡಿಯೋ ನೋಡಿ; ವೈರಲ್ ಸುದ್ದಿಯ ಅಸಲಿ ಕರಾಮತ್ತು ಇಲ್ಲಿದೆ
Published On - 7:38 am, Fri, 25 June 21