Viral Post : ಮನೆ ಹುಡುಕಿ ಕೊಡುವ ನೆಪದಲ್ಲಿ ಈ ಬ್ರೋಕರ್ಗಳು ಕೇಳುವ ಪ್ರಶ್ನೆಗಳಂತೂ ಹುಚ್ಚುಹಿಡಿಸುವ ಹಾಗಿರುತ್ತವೆ. ಜೊತೆಗೆ ಮನೆ ಬಾಡಿಗೆಗೆ ಕೊಡುವ ನೆಪದಲ್ಲಿ ಮಾಲೀಕರು ಹಾಕುವ ನಿಯಮಗಳಂತೂ ಮತ್ತೂ ದಿಕ್ಕೆಡಿಸುವಂತಿರುತ್ತವೆ. ಅದರಲ್ಲೂ ಒಂಟಿಮಹಿಳೆಯರು ಮನೆ ಹುಡುಕುತ್ತಿದ್ದರಂತೂ ಮುಗಿದೇ ಹೋಯಿತು. ಬೆಂಗಳೂರಿನಂಥ ಮುಂದುವರಿದ ಮಹಾನಗರಗಳಲ್ಲೇ ಮಹಿಳೆಯರ ಪರಿಸ್ಥಿತಿ ಹೀಗಾದರೆ ಇನ್ನು ಸಣ್ಣಪುಟ್ಟ ಊರು, ಹಳ್ಳಿಗಳಲ್ಲಿ ಹೇಗಿರಬೇಡ? ಈಗ ವೈರಲ್ ಆಗುತ್ತಿರುವ ಈ ಟ್ವೀಟ್ನಲ್ಲಿರುವ ಚಾಟ್ ಗಮನಿಸಿದರೆ ವಿಷಯವೇನೆಂದು ಅರ್ಥವಾಗುತ್ತದೆ.
Every broker asks me if I’m married because married people live boring lives and so they deserve a house. From tomorrow, I will be masquerading as a married woman looking for a house in Bangalore. My husband will be a ghost. He will ensure there are no parties or male friends. pic.twitter.com/sdCKW8Jips
ಇದನ್ನೂ ಓದಿ— Ruchita (@roocheetah) November 27, 2022
‘ಮನೆ ಹುಡುಕಲು ಹೊರಟರೆ, ನೀವು ಮದುವೆಯಾಗಿದ್ದೀರಾ, ನೀವು ಪಾರ್ಟಿ ಮಾಡುತ್ತೀರಾ? ನಿಮಗೆ ಬಾಯ್ಫ್ರೆಂಡ್ ಇದ್ದಾರಾ? ಅವರು ಮನೆಗೆ ಬರುತ್ತಾರಾ? ಇಂಥ ವೈಯಕ್ತಿಕ ಪ್ರಶ್ನೆಗಳನ್ನು ಬ್ರೋಕರ್ಗಳು ಕೇಳುತ್ತಾರೆ. ಆದ್ದರಿಂದ ನಾಳೆಯಿಂದ ಮದುವೆಯಾದ ಮಹಿಳೆಯಂತೆ ವೇಷಧರಿಸಿ ಮನೆ ಹುಡುಕಲು ಹೋಗಬೇಕೆಂದುಕೊಂಡಿದ್ದೇನೆ. ಆಗ ನನ್ನ ಗಂಡ ದೆವ್ವದಂತೆ ನನ್ನನ್ನು ಹಿಂಬಾಲಿಸಿ ಇವಳಿಗೆ ಬಾಯ್ಫ್ರೆಂಡ್ ಇಲ್ಲ, ಪಾರ್ಟಿ ಮಾಡುವುದಿಲ್ಲ ಎಂಬುದನ್ನು ಖಚಿತಪಡಿಸುತ್ತಾ ನನ್ನೊಂದಿಗೆ ಸುತ್ತಾಡುತ್ತಿರುತ್ತಾನೆ ಎಂದು ರುಚಿತಾ ಎನ್ನುವವರು ಅತ್ಯಂತ ಬೇಸರದಿಂದ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ಅನ್ನದ ಪಾಂಡಾ, ಮೊಟ್ಟೆಯ ಚಾದರ್, ಶಾವಿಗೆ ನಾಯಿ ಬೇಕಾ ನಿಮಗೂ?
ಇದೊಂದು ಮುಗಿಯದ ಕಥೆ, ಒಮ್ಮೊಮ್ಮೆ ಈ ಬ್ರೋಕರ್ಗಳು, ಮಾಲೀಕರು ಜೀವ ಹಿಂಡಿಬಿಡುತ್ತಾರೆ ಎಂದು ಈ ಟ್ವೀಟ್ಗೆ ಪ್ರತಿಯಾಗಿ ತಮ್ಮ ಅನುಭವ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ನೆಟ್ಟಿಗರು.
ಇಷ್ಟು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಈತನಕ ಇಂಥ ಕೆಟ್ಟ ಅನುಭವಗಳು ನನಗೆ ಆಗಿಲ್ಲ ಸದ್ಯ! ಅಷ್ಟಕ್ಕೂ ಭಾರತೀಯರು ಸದಾ ಪಾರ್ಟಿ ಮೂಡ್ನಲ್ಲಿರುವುದಿಲ್ಲ. ಮನೆಗಳಲ್ಲಿ ಮಾಡಿದರೂ ಅಪರೂಪ. ಪುಣ್ಯಕ್ಕೆ ನನ್ನ ಓನರ್ ಸಮಾನ ಮನಸ್ಕರಿದ್ದಾರೆ ಎಂದಿದ್ದಾರೆ ಒಬ್ಬರು. ಎಲ್ಲ ಕಡೆಯೂ ಇದೇ ಕಥೆ. ನಿಮ್ಮ ಮನೆಗೆ ಯಾರಾದರೂ ಬಂಧುಬಳಗದವರು, ಸ್ನೇಹಿತರು ಬರುತ್ತಾರೆಂದರೆ ಮೊದಲೇ ಓನರ್ಗೆ ತಿಳಿಸಬೇಕು ಎಂದು ಹಿಂದಿನ ಮಾಲೀಕರು ಹೇಳುತ್ತಿದ್ದರು ಎಂದಿದ್ದಾರೆ ಇನ್ನೂ ಒಬ್ಬರು. ನಾನಂತೂ ಹೀಗೆ ಕೇಳುವ ಮಾಲೀಕರು ಅಥವಾ ಬ್ರೋಕರ್ಗೆ, ಅಣ್ಣಾ ನನಗೆ ಬೇಕಿರುವುದು ಮನೆ ಜೈಲಲ್ಲ ಎಂದಿದ್ದೇನೆ ಎಂದಿದ್ದಾರೆ ಮಗದೊಬ್ಬರು.
ಯಾರೋ ಏನೋ ಎಂತೋ. ಮನೆಯನ್ನು ಬಾಡಿಗೆಗೆ ಕೊಡಿಸುತ್ತಾರೆ ಅಥವಾ ಕೊಡುತ್ತಾರೆ ಎಂದ ಮಾತ್ರಕ್ಕೆ, ಅವರು ತಮ್ಮ ಜೀವನಶೈಲಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ಜೀವನಶೈಲಿಯೂ ಅದೇ ರೀತಿ ಇರಬೇಕೆಂದು ನಿರೀಕ್ಷಿಸಿ ನಿಯಂತ್ರಿಸಲು ಇಚ್ಛಿಸುವುದು ಎಷ್ಟು ಸರಿ? ಇದು ಅತ್ಯಂತ ಅಸಹ್ಯಕರ ಸಂಗತಿ ಎಂದಿದ್ದಾರೆ ಇನ್ನೂ ಒಬ್ಬರು. ಇದು ಪ್ರತೀ ನಗರಗಳಲ್ಲಿ ಪ್ರತೀ ಹೆಣ್ಣುಮಕ್ಕಳ ಕಥೆ ಎಂದಿದ್ದಾರೆ ಹಲವಾರು ಜನ.
ಇದನ್ನು ಓದಿದ ನಿಮ್ಮಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:44 pm, Mon, 28 November 22