Viral Video : ಇಂಡೋನೇಷಿಯಾದಲ್ಲಿ 35 ಕೆ.ಜಿ. ಹೆಬ್ಬಾವನ್ನು ಬೇಯಿಸಿ ಖಾದ್ಯ ತಯಾರಿಸುತ್ತಿದ್ದ ವಿಡಿಯೋವನ್ನು ಕೇರಳದ ಯೂಟ್ಯೂಬರ್ ಫಿರೋಝ್ ಚುಟ್ಟಿಪ್ಪಾರ್ (Firoze Chuttipara) ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ಧಾರೆ. ಇದು ನೋಡುಗರನ್ನು ತೀವ್ರ ಅಸಮಾಧಾನಕ್ಕೆ ಗುರಿಮಾಡಿದೆ. ಇದೇನಾದರೂ ಭಾರತದಲ್ಲಿ ನಡೆದಿದ್ದರೆ ಇದರಲ್ಲಿ ಭಾಗಿಯಾದವರು ಜೈಲಿನಲ್ಲಿರಬೇಕಾಗುತ್ತಿತ್ತು. ಏಕೆಂದರೆ ಭಾರತದಲ್ಲಿ ಕಾಡುಪ್ರಾಣಿಗಳನ್ನು ಕೊಲ್ಲುವುದು ಅಪರಾಧ. ರಾಜಕೀಯ ಮತ್ತು ಸಿನೆಮಾಕ್ಕೆ ಸಂಬಂಧಿಸಿದ ವಿಡಿಯೋಗಳಿಗಿಂತ ಖಾದ್ಯ ತಯಾರಿಕೆ ವಿಡಿಯೋಗಳು ಹೆಚ್ಚು ಜನಪ್ರಿಯಗೊಳ್ಳುತ್ತವೆಯಾದ್ದರಿಂದ ಹೆಚ್ಚು ವೀಕ್ಷಣೆ ಗಳಿಸಲೆಂದೇ ಯೂಟ್ಯೂಬರ್ಗಳು ಖಾದ್ಯ ತಯಾರಿಕೆ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಗಮನ ಸೆಳೆಯುತ್ತಿರುತ್ತಾರೆ. ಈ ಪೈಕಿ ಪ್ರಸ್ತುತ ವಿಡಿಯೋ ನೆಟ್ಟಿಗರನ್ನು ಬಹುವಾಗಿ ಸೆಳೆದಿದ್ದಲ್ಲದೇ ಟೀಕೆಗೂ ಒಳಪಟ್ಟಿದೆ.
ಕುಕ್ಕಿಂಗ್ ವ್ಲಾಗರ್ ಫಿರೋಝ್ ಈಗಾಗಲೇ ಯೂಟ್ಯೂಬ್ನಲ್ಲಿ ಜನಪ್ರಿಯತೆ ಗಳಿಸಿದವರು. ಇಂಡೋನೇಷಿಯಾಗೆ ಹೋದಾಗ 35 ಕೇಜಿ ಹೆಬ್ಬಾವನ್ನು ಕತ್ತರಿಸಿ ಭಾರತೀಯ ಮಸಾಲೆ ಪದಾರ್ಥಗಳೊಂದಿಗೆ ಗ್ರಿಲ್ ಮಾಡುವ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಈ ಖಾದ್ಯ ತಯಾರಿಕೆಯ ವಿಡಿಯೋ ಪ್ರಸಾರ ಮಾಡುವ ಮೊದಲು ಫಿರೋಝ್, ‘ಈ ವಿಡಿಯೋ ಇಂಡೋನೇಷಿಯಾದಲ್ಲಿ ಚಿತ್ರೀಕರಿಸಿದ್ದು. ನಿಮ್ಮ ಮನೆಗಳಲ್ಲಿ ಇದನ್ನು ಪ್ರಯೋಗಿಸಬೇಡಿ. ಭಾರದಲ್ಲಿ ವನ್ಯಪ್ರಾಣಿಗಳಿಂದ ಖಾದ್ಯ ತಯಾರಿಸುವುದು ಅಪರಾಧ’ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ವಿಡಿಯೋದಲ್ಲಿ ಪ್ಲಾಸ್ಟಿಕ್ ಬಾಸ್ಕೆಟ್ನಲ್ಲಿ ದೊಡ್ಡ ಹೆಬ್ಬಾವನ್ನು ಹಿಡಿದು ತರಲಾಗುತ್ತದೆ. ನಂತರ ಈ ಹೆಬ್ಬಾವನ್ನು ಕತ್ತರಿಸಲಾಗುತ್ತದೆ. ಆಮೇಲೆ ಅದರ ಚರ್ಮವನ್ನು ಸುಲಿದು ಭಾರತೀಯ ಮಸಾಲೆಗಳಿಂದ ಆ ತುಂಡುಗಳಿಗೆ ಉಜ್ಜಿ ಲೇಪಿಸಿ ಕೊನೆಯಲ್ಲಿ ಬೆಂಕಿಯಲ್ಲಿ ಆ ತುಂಡುಗಳನ್ನು ಗ್ರಿಲ್ ಮಾಡಲಾಗುತ್ತದೆ. ನಂತರ ದೊಡ್ಡ ಬಾಳೆ ಎಲೆಮೇಲೆ ಬೇಯಿಸಿದ ಖಾದ್ಯವನ್ನು ಹರವುತ್ತಾರೆ. ಇದನ್ನು ತಿಂದ ಇಂಡೋನೇಷಿಯನ್ನರು ಮತ್ತು ಕೆಲ ಭಾರತೀಯರು ಬಹಳ ರುಚಿಕಟ್ಟಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ವಿಡಿಯೋ 2 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗೊಳಪಟ್ಟಿದೆ. 1,67,000 ಲೈಕ್ ಮತ್ತು 7,000 ಹಂಚಿಕೆಯಾಗಿದೆ.
ಈ ವಿಡಿಯೋ ಖಾದ್ಯತಯಾರಿಕೆಯಲ್ಲಿ ಆಸಕ್ತಿ ಇರುವವರನ್ನು ಬಹುವಾಗಿ ಸೆಳೆದಿದೆ. ನಾನಾರೀತಿಯ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ. ಆದರೆ, ಭಾರತದಲ್ಲಿ ಈ ದುಃಸ್ಸಾಹಸ ಮಾಡಿದರೆ ಪರಿಣಾಮ ಗೊತ್ತಲ್ಲವೆ?