ರಸ್ತೆಯಲ್ಲಿ ಅಚಾನಕ್​ ಆಗಿ ಹಣ ಸಿಕ್ಕರೆ, ನೀವು ಜೀವನದಲ್ಲಿ ಈ ಪರೀಕ್ಷೆಯನ್ನು ಎದುರಿಸಲಿದ್ದೀರಿ ಎಂದರ್ಥ!

ನೀವು ಮನೆಯಿಂದ ಹೊರಬಂದ ನಂತರ ನಿಮಗೆ ಅಚಾನಕ್ ಆಗಿ ಹಣ ಸಿಕ್ಕರೆ ಯಶಸ್ಸು ನಿಮ್ಮನ್ನು ಅರಸಿ ಬರಲಿದೆ ಎಂಬ ಸಂಕೇತ. ಆದರೆ, ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬ ಆಧಾರದ ಮೇಲೆ ಯಶಸ್ಸು ನಿರ್ಧಾರವಾಗುತ್ತದೆ. ಏಕೆಂದರೆ, ನಿಮಗೆ ರಸ್ತೆಯಲ್ಲಿ ಸಿಕ್ಕುವ ದುಡ್ಡು ಇನ್ಯಾರದ್ದೋ ಕಠಿಣ ಪರಿಶ್ರಮದ ಫಲ.

ರಸ್ತೆಯಲ್ಲಿ ಅಚಾನಕ್​ ಆಗಿ ಹಣ ಸಿಕ್ಕರೆ, ನೀವು ಜೀವನದಲ್ಲಿ ಈ ಪರೀಕ್ಷೆಯನ್ನು ಎದುರಿಸಲಿದ್ದೀರಿ ಎಂದರ್ಥ!
ಪ್ರಾತಿನಿಧಿಕ ಚಿತ್ರ
Follow us
Skanda
| Updated By: shruti hegde

Updated on: Apr 27, 2021 | 2:55 PM

ಕೆಲವೊಮ್ಮೆ ಒಂದಷ್ಟು ವಿಚಿತ್ರಗಳು ಜೀವನದಲ್ಲಿ ಘಟಿಸುತ್ತಲೇ ಇರುತ್ತವೆ. ಅವುಗಳನ್ನು ತರ್ಕಬದ್ಧವಾಗಿ ಯೋಚಿಸಿದರೆ ನಂಬುವುದೇ ಕಷ್ಟವಾಗಬಹುದು. ಹಾಗಂತ ಆ ಕ್ಷಣವನ್ನು ಅನುಭವಿಸಿದವರಿಗೆ ನಂಬದೇ ಇರುವುದಂತೂ ಸಾಧ್ಯವಿಲ್ಲ. ಎಷ್ಟೋ ಬಾರಿ ನಿಮಗೂ ರಸ್ತೆಯಲ್ಲಿ ಹೋಗುವಾಗ ಅಚಾನಕ್ ಆಗಿ ಹಣ ಸಿಕ್ಕಿರಬಹುದು. ಹಾಗೆ ಸಿಕ್ಕಿದ್ದನ್ನು ನೀವೇ ಇಟ್ಟುಕೊಂಡಿರಬಹುದು ಅಥವಾ ಅದರ ವಾರಸುದಾರರನ್ನು ಹುಡುಕಿ ಹಿಂದಿರುಗಿಸಲು ಪ್ರಯತ್ನಿಸಿಯೂ ಇರಬಹುದು. ಅದರಲ್ಲೂ ಭಾರತೀಯರಾದ ನಮಗೆ ಹಣವೆಂದರೆ ಲಕ್ಷ್ಮಿ ಎಂಬ ಪೂಜನೀಯ ಭಾವ ಇರುವ ಕಾರಣ ರಸ್ತೆಯಲ್ಲಿ ಹಣ ಸಿಗುವುದೆಂದರೆ ಅದೃಷ್ಟವೇ ಸಿಕ್ಕಂತೆ. ಹಿಂದಿನಿಂದ ಬಂದ ನಂಬಿಕೆಯೂ ಇದನ್ನೇ ಬಲವಾಗಿ ಹೇಳುವುದಾಗಿದ್ದು, ಒಂದು ವೇಳೆ ಹಾದಿಯಲ್ಲಿ ಬಿದ್ದ ಹಣ ನಿಮಗೆ ಸಿಕ್ಕರೆ, ನಿಮ್ಮನ್ನು ಯಾವುದೋ ಶಕ್ತಿ ಪೊರೆಯುತ್ತಿದೆ ಎಂದರ್ಥ ಎನ್ನಲಾಗುತ್ತದೆ. ಇದರಲ್ಲಿ ಇನ್ನೊಂದು ವಿಶೇಷ ನಂಬಿಕೆಯೂ ಇದ್ದು, ಆಕಸ್ಮಿಕವಾಗಿ ಕೈ ಸೇರುವ ಹಣ ಒಂದು ವ್ಯಕ್ತಿಯ ಅದೃಷ್ಟದ ಪಥವನ್ನೇ ತಿರುಗಿಸಬಲ್ಲದು ಎಂದು ಹಿರಿಯರು ಹೇಳುತ್ತಾರೆ.

ನೀವು ಮನೆಯಿಂದ ಹೊರಬಂದ ನಂತರ ನಿಮಗೆ ಅಚಾನಕ್ ಆಗಿ ಹಣ ಸಿಕ್ಕರೆ ಯಶಸ್ಸು ನಿಮ್ಮನ್ನು ಅರಸಿ ಬರಲಿದೆ ಎಂಬ ಸಂಕೇತ. ಆದರೆ, ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬ ಆಧಾರದ ಮೇಲೆ ಯಶಸ್ಸು ನಿರ್ಧಾರವಾಗುತ್ತದೆ. ಏಕೆಂದರೆ, ನಿಮಗೆ ರಸ್ತೆಯಲ್ಲಿ ಸಿಕ್ಕುವ ದುಡ್ಡು ಇನ್ಯಾರದ್ದೋ ಕಠಿಣ ಪರಿಶ್ರಮದ ಫಲವಾಗಿದ್ದು, ದೇವರು ಅದರ ಮೂಲಕ ನಿಮಗೆ ಪರೀಕ್ಷೆ ಒಡ್ಡುತ್ತಾನೆ. ಒಂದು ವೇಳೆ ಅದನ್ನು ನೀವು ದುರ್ವಿನಿಯೋಗ ಮಾಡಿದ್ದೇ ಆದಲ್ಲಿ ಪರೀಕ್ಷೆಯಲ್ಲಿ ನೀವು ಸೋತಂತೆ. ಹೀಗಾಗಿ ಬಲ್ಲವರು ಹೇಳುವ ಪ್ರಕಾರ ನಿಮಗೆ ಸಣ್ಣ ಮೊತ್ತದ ಹಣ ಸಿಕ್ಕರೆ ಅದನ್ನು ಯಾವ ಕಾರಣಕ್ಕೂ ಖರ್ಚು ಮಾಡದೇ ಜೋಪಾನವಾಗಿ ತೆಗೆದಿರಿಸಿ. ಒಂದುವೇಳೆ ದೊಡ್ಡ ಮೊತ್ತ ಸಿಕ್ಕರೆ ಒಂದೋ ಅದರ ವಾರಸುದಾರರಿಗೆ ಹಿಂದಿರುಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಅಥವಾ ಬಡವರಿಗೆ, ನಿಜವಾಗಿಯೂ ಹಣದ ಅವಶ್ಯಕತೆ ಉಳ್ಳವರಿಗೆ ಹಂಚಿ ಸದ್ವಿನಿಯೋಗ ಮಾಡಿ. ಒಟ್ಟಿನಲ್ಲಿ ಹೀಗೆ ಸಿಕ್ಕ ಹಣವನ್ನು ನೀವು ನಿಮ್ಮ ಸ್ವಂತ ಬಳಕೆಗೆ ಖರ್ಚು ಮಾಡಲೇಬಾರದು. ಆಗ ಮಾತ್ರ ನೀವು ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದು, ದೇವರೊಡ್ಡಿದ ಪ್ರಾಮಾಣಿಕತೆಯ ಪರೀಕ್ಷೆಯಲ್ಲಿ ಪಾಸಾದಂತೆ ಅರ್ಥ.

ಇನ್ನು ಕೆಲವರ ನಂಬಿಕೆ ಪ್ರಕಾರ ನಿಮ್ಮ ಹಿರೀಕರು ಎಂದೋ, ಎಲ್ಲೋ ಹಣ ಕಳೆದುಕೊಂಡಿದ್ದರೆ ಅದು ಈ ರೂಪದಲ್ಲಿ ನಿಮ್ಮ ಕೈ ಸೇರುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಹಣ ಸಿಕ್ಕಿತೆಂಬ ಖುಷಿಯಲ್ಲಿ ಅದನ್ನು ಗಾಳಿಯಲ್ಲಿ ತೂರಾಡುವುದಾಗಲೀ, ಮೋಜು ಮಸ್ತಿ ಮಾಡುವುದಾಗಲೀ ಸಲ್ಲದು. ಇದೇವೇಳೆ, ನೀವೇನಾದರೂ ಅಚಾನಕ್ ಆಗಿ ಹಣ ಕಳೆದುಕೊಂಡರೆ ಆಗಲೂ ನಿಮ್ಮನ್ನು ನೀವು ಪರಾಮರ್ಶಿಸಿಕೊಳ್ಳಬೇಕು. ಅಪ್ಪಿತಪ್ಪಿ ನೀವು ವಾಮಮಾರ್ಗದಿಂದ ಹಣ ಸಂಗ್ರಹಿಸಿದ್ದರೆ, ಇನ್ನೊಬ್ಬರಿಗೆ ಸೇರಬೇಕಾದದ್ದನ್ನು ಕಸಿದುಕೊಂಡಿದ್ದರೆ ಅದು ನಿಮ್ಮಿಂದ ತಪ್ಪಿ ಹೋಗಿರುತ್ತದೆ. ಹೀಗಾಗಿ ನಾವು ಏನು ಮಾಡುತ್ತೇವೋ ಅದಕ್ಕೆ ತಕ್ಕುದಾದ ಪ್ರತಿಫಲವನ್ನು ಅನುಭವಿಸಿಯೇ ಅನುಭವಿಸುತ್ತೇವೆ ಎಂದು ಹಿರಿಯರು ಹೇಳುವುದು.

(Know why you get money on the Road and its meaning in Kannada)

ಇದನ್ನೂ ಓದಿ: Chanakya Niti: ಚಾಣಕ್ಯ ನೀತಿ ಪಾಲನೆಯಿಂದ ಜೀವನದಲ್ಲಿ ಮಹತ್ತರ ಬದಲಾವಣೆ ಸಾಧ್ಯ; ಉತ್ತಮ ಜೀವನಕ್ಕೆ ಇಲ್ಲಿದೆ ಕೆಲವು ಅಂಶ

ಭಾರತದ ಬ್ಯಾಂಕ್​ಗಳು ನೀಡಿರುವುದು ಸಾರ್ವಜನಿಕರ ಹಣ, ನನ್ನನ್ನು ದಿವಾಳಿ ಎಂದು ಘೋಷಿಸಲು ಆಗಲ್ಲ ಎಂದ ಮಲ್ಯ