‘ವಯನಾಡು ನಿಮಗಾಗಿ ಕಾಯುತ್ತಿದೆ’ ದೊಡ್ಡ ಎಡವಟ್ಟು ಮಾಡಿಕೊಂಡ ಕೆಎಸ್‌ಟಿಡಿಸಿ
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ತನ್ನ ಅಧಿಕೃತ X ಖಾತೆಯಲ್ಲಿ ಕೇರಳದ ವಯನಾಡಿನ ಪ್ರವಾಸೋದ್ಯಮವನ್ನು ಪ್ರಚಾರ ಮಾಡಿ ಭಾರೀ ವಿವಾದಕ್ಕೆ ಸಿಲುಕಿದೆ. ಕರ್ನಾಟಕದ ಪ್ರವಾಸಿ ತಾಣಗಳನ್ನು ಬಿಟ್ಟು ಹೊರ ರಾಜ್ಯದ ಪ್ರಚಾರ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ನಡೆ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂದು ಹಲವರು ಟೀಕಿಸಿದ್ದಾರೆ.

ದೊಡ್ಡ ಎಡವಟ್ಟು ಮಾಡಿಕೊಂಡ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ), ಕೆಎಸ್‌ಟಿಡಿಸಿ ಹಂಚಿಕೊಂಡ ಒಂದು ಪೋಸ್ಟ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. KSTDC ಮಾಡಿಕೊಂಡ ಈ ಎಡವಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ವಲ್ಪವಾದರೂ ನಾಚಿಕೆ ಮರ್ಯಾದೆ ಇದ್ರೆ ಆ ಪೋಸ್ಟ್ನ್ನು ಈ ತಕ್ಷಣವೇ ಡಿಲೀಟ್ ಮಾಡಿ ಎಂದು ಹೇಳಿದ್ದಾರೆ. ಕೆಎಸ್‌ಟಿಡಿಸಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ವಯನಾಡಿನ ಪ್ರವಾಸೋದ್ಯಮದ ಬಗ್ಗೆ ಹಂಚಿಕೊಂಡಿದೆ. ಕರ್ನಾಟಕದ ಪ್ರವಾಸೋದ್ಯಮದ ಬಗ್ಗೆ ಹಂಚಿಕೊಳ್ಳುವುದು ಬಿಟ್ಟು, ಕೇರಳದ ವಯನಾಡಿನ ಪ್ರವಾಸಿತಾಣದ ಬಗ್ಗೆ ಜಾಹೀರಾತು ನೀಡಿದೆ ಎಂದು ಕನ್ನಡಿಗರ ವಿರೋಧಕ್ಕೆ ಗುರಿಯಾಗಿದೆ. ಜತೆಗೆ ಈ ಪೋಸ್ಟರ್ ವಿವಾದ ರಾಜಕೀಯ ಗದ್ದಲಕ್ಕೂ ಕಾರಣವಾಗಿದೆ. ಕರ್ನಾಟಕ ಸರ್ಕಾರ ಇಂತಹ ವಿಚಾರದಲ್ಲಿ ಕರ್ನಾಟಕಕ್ಕೆ ಮೋಸ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ದೂರಿದೆ.
ಕೆಎಸ್‌ಟಿಡಿಸಿ ತನ್ನ ಎಕ್ಸ್ ಖಾತೆಯಲ್ಲಿ ವಯನಾಡಿನ ಪ್ರವಾಸಿತಾಣದ ಚಿತ್ರವನ್ನು ಹಂಚಿಕೊಂಡಿದ್ದು, ಪೋಸ್ಟ್ನಲ್ಲಿ ಹೀಗೆ ಬರೆದುಕೊಂಡಿದ್ದಾರೆ “ನೆಮ್ಮದಿಯನ್ನು ಹುಡುಕುತ್ತಿದ್ದೀರಾ? ವಯನಾಡಿನಲ್ಲಿ ಖಂಡಿತ ಇದು ಸಿಗುತ್ತದೆ. ಕೆಎಸ್‌ಟಿಡಿಸಿಯೊಂದಿಗೆ ಸುಂದರವಾದ ಹಾದಿಗಳಲ್ಲಿ ಚಾರಣ ಮಾಡಿ, ಜಲಪಾತ ಮತ್ತು ಕಾಡುಗಳನ್ನು ನೋಡಬಹುದು. ಪ್ರಕೃತಿ ನಿಮಗಾಗಿ ಕಾಯುತ್ತಿದೆ”. ಜತೆಗೆ ವಯನಾಡ್ ನಿಮಗಾಗಿ ಕಾಯುತ್ತಿದೆ ಎಂಬ ಪೋಸ್ಟರ್ನ್ನು ಕೂಡ ಹಂಚಿಕೊಂಡಿದ್ದಾರೆ. ಕರ್ನಾಟಕದಲ್ಲಿ ಅದ್ಭುತ ಪ್ರವಾಸಿತಾಣಗಳು ಇರಬೇಕಾದರೆ, ಹೊರ ರಾಜ್ಯದ ಪ್ರವಾಸಿತಾಣಗಳ ಬಗ್ಗೆ ಇಂತಹ ಪ್ರಮೋಷನ್ ನೀಡುವುದು ಎಷ್ಟು ಸರಿ ಎಂದು ಸಾಮಾಜಿಕ ತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
Seeking thrill or tranquillity? Find both in Wayanad! Trek scenic trails, chase waterfalls & meet the wild with KSTDC. Your perfect nature escape awaits. https://t.co/7H16iVsvqi#WayanadDiaries #TravelWithKSTDC #NatureEscape pic.twitter.com/hJIOc9TZbm
— K.S.T.D.C. (@kstdc) October 28, 2025
ಒಬ್ಬ ಬಳಕೆದಾರರು, ಇದು ನಾಚಿಕೆಗೇಡಿನ ಸಂಗತಿ, ಈ ಪೋಸ್ಟ್ ಅನ್ನು ಆದಷ್ಟು ಬೇಗ ಅಳಿಸಿ. ನೀವು ಕರ್ನಾಟಕದ ಸ್ಥಳಗಳನ್ನು ಏಕೆ ಪ್ರಚಾರ ಮಾಡಲು ಸಾಧ್ಯವಿಲ್ಲ? ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ವಯನಾಡು ಯಾವಾಗ ಕರ್ನಾಟಕದ ಭಾಗವಾಯಿತು? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಪ್ರವಾಸೋದ್ಯಮ ಆಡಳಿತಾತ್ಮಕ ಗಡಿಗಳನ್ನು ಮೀರಬೇಕು ಹೇಳಿದ್ದಾರೆ. ಒಬ್ಬ ಬಳಕೆದಾರ ಜನರು ಪ್ರಯಾಣಿಸದೆ ಪ್ರವಾಸೋದ್ಯಮ ಬೆಳೆಯುವುದಿಲ್ಲ. ರಾಜ್ಯ ಗಡಿಗಳು ನಮ್ಮನ್ನು ವಿಭಜಿಸಬಾರದು ಎಂದು ಹೇಳಿದ್ದಾರೆ. ಕೆಎಸ್‌ಟಿಡಿಸಿ ಬಹಳ ಹಿಂದಿನಿಂದಲೂ ತಮಿಳುನಾಡು, ಗೋವಾ, ತೆಲಂಗಾಣ ಮತ್ತು ಆಂಧ್ರಪ್ರದೇಶದ ತಾಣಗಳಿಗೆ ಪ್ಯಾಕೇಜ್ ಪ್ರವಾಸಗಳನ್ನು ನೀಡುತ್ತಿದೆ ಎಂದು ಮತ್ತೊಂದ ಬಳಕೆದಾರ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: 10 ನಿಮಿಷ ಕಾಯಿಸಿದ್ದಕ್ಕೆ ಮಹಿಳೆ ಮತ್ತು ಆಟೋ ಚಾಲಕನ ನಡುವೆ ಬಿಗ್ ಫೈಟ್
ಇನ್ನು ರಾಜ್ಯದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕರ್ನಾಟಕ ಸರ್ಕಾರವನ್ನು ಟೀಕಿಸಿದ್ದಾರೆ. “ಈಗಾಗಲೇ ನೀವು (ಸಿದ್ದರಾಮಯ್ಯ) ಕರ್ನಾಟಕದ ತೆರಿಗೆದಾರರ ₹ 10 ಕೋಟಿ ಹಣವನ್ನು ವಯನಾಡಿಗೆ ದಾನ ಮಾಡಿದ್ದೀರಾ, ಆನೆಯಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ₹ 15 ಲಕ್ಷ ದಾನ ಮಾಡಿದ್ದೀರಿ. ಭೂಕುಸಿತದ ನಂತರ ವಯನಾಡಿನಲ್ಲಿ 100 ಮನೆಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದೀರಿ. ಈಗ ಪ್ರಿಯಾಂಕಾ ಗಾಂಧಿಯವರ ಕ್ಷೇತ್ರವನ್ನು ಪ್ರಚಾರ ಮಾಡಲು ನೀವು ಕೆಎಸ್‌ಟಿಡಿಸಿಯನ್ನು ಬಳಸುತ್ತಿದ್ದೀರಿ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:28 pm, Thu, 30 October 25




