ಸರ್ಕಾರದಿಂದ ಸನ್ನಿ ಲಿಯೋನ್ ಹೆಸರಿನ ಖಾತೆಗೆ ಪ್ರತಿ ತಿಂಗಳು 1 ಸಾವಿರ ರೂ. ಜಮಾ!
ಛತ್ತೀಸ್‌ಗಢದ ಮಹತಾರಿ ವಂದನಾ ಯೋಜನೆಯಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ನಡೆದ ವಂಚನೆ ಬೆಳಕಿಗೆ ಬಂದಿದೆ. ಬಸ್ತಾರ್ ಜಿಲ್ಲೆಯ ವ್ಯಕ್ತಿಯೊಬ್ಬ ನಕಲಿ ಖಾತೆ ತೆರೆದು ಹತ್ತು ತಿಂಗಳ ಕಾಲ ಲಾಭ ಪಡೆದಿದ್ದಾನೆ. ಅಂಗನವಾಡಿ ಕಾರ್ಯಕರ್ತೆಯರ ನಿರ್ಲಕ್ಷ್ಯದಿಂದ ಈ ವಂಚನೆ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಛತ್ತೀಸ್‌ಗಢದ ಬಿಜೆಪಿ ಸರ್ಕಾರ ವಿವಾಹಿತ ಮಹಿಳೆಯರಿಗಾಗಿ ಮಹತಾರಿ ವಂದನಾ ಯೋಜನೆಯಡಿ ತಿಂಗಳಿಗೆ ಒಂದು ಸಾವಿರ ರೂಪಾಯಿ ಗೌರವಧನವನ್ನು ನೀಡುತ್ತಿದೆ. ಇದೀಗ ಈ ಯೋಜನೆಯಡಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಹೆಸರಿನಲ್ಲಿರುವ ಖಾತೆಗೆ ರೂ.1000 ಜಮಾ ಆಗುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.ಸುಮಾರು ಹತ್ತು ತಿಂಗಳಿನಿಂದ ಸನ್ನಿ ಲಿಯೋನ್ ಹೆಸರಿನ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದ್ದು, ತನಿಖೆ ನಡೆಸಿದಾಗ ನಕಲಿ ಖಾತೆ ತೆರೆದು ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಬಸ್ತಾರ್ ಜಿಲ್ಲೆಯ ತಾಳೂರು ಗ್ರಾಮದ ವೀರೇಂದ್ರ ಜೋಶಿ ಎಂಬ ವ್ಯಕ್ತಿ ಸನ್ನಿ ಲಿಯೋನ್ ಹೆಸರಿನಲ್ಲಿ ಮಹತಾರಿ ವಂದನ್ ಯೋಜನೆಯಡಿ ಖಾತೆ ತೆರೆದಿದ್ದಾರೆ. ಇದರಿಂದ ಈ ಖಾತೆಯಿಂದ ತಿಂಗಳಿಗೆ 1000 ರೂ.ನಂತೆ ಹತ್ತು ತಿಂಗಳವರೆಗೆ ಲಾಭ ಪಡೆಯುತ್ತಿದ್ದುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಅಕ್ರಮವಾಗಿ ಲಾಭ ಮಾಡಿಕೊಳ್ಳುತ್ತಿದ್ದ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಯೋಜನೆಯ ಅರ್ಹ ಫಲಾನುಭವಿಗಳನ್ನು ಸರಿಯಾಗಿ ಪರಿಶೀಲಿಸಬೇಕಾಗಿದ್ದ ಜವಾಬ್ದಾರಿ ಹೊಂದಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುತ್ತಿದೆ.
ಇದನ್ನೂ ಓದಿ: Viral Video: ಟ್ರೈನ್ನಂತೆ ಇಂಡಿಗೋ ವಿಮಾನದಲ್ಲೂ ಫ್ಲಾಸ್ಕ್ ಹಿಡಿದು ಚಹಾ ಮಾರಾಟ
ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕರ ನಿರ್ಲಕ್ಷ್ಯದಿಂದ ಆರೋಪಿಯು ಕಳೆದ 10 ತಿಂಗಳಿಂದ ಅಕ್ರಮ ಸವಲತ್ತು ಪಡೆಯುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆಯಾ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯನ್ನು ಕೆಲಸದಿಂದ ವಜಾಗೊಳಿಸಿದ್ದು, ಯೋಜನಾಧಿಕಾರಿ ಹಾಗೂ ಮೇಲ್ವಿಚಾರಕರನ್ನು ಸರ್ಕಾರ ಅಮಾನತುಗೊಳಿಸಿದೆ. ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಬ್ಯಾಂಕ್ ಖಾತೆ ಜಪ್ತಿ ಮಾಡಿ ಹಣ ವಸೂಲಿ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮತ್ತೊಂದೆಡೆ, ಸನ್ನಿ ಲಿಯೋನ್ ಹೆಸರಿನಲ್ಲಿ ಸರ್ಕಾರದ ಯೋಜನೆ ಹಣದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:31 am, Tue, 24 December 24