South Delhi : ದಕ್ಷಿಣ ದೆಹಲಿಯ ಕೆಫೆಯೊಂದರಲ್ಲಿ ನಡೆದ ಜನಾಂಗೀಯ ಕಿರುಕುಳದ ಬಗ್ಗೆ ಮಹಿಳೆಯೊಬ್ಬರು ತಾವು ಅನುಭವಿಸಿದ ಸಂಕಟವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ಆ ಪೋಸ್ಟ್ಗೆ ಉತ್ತರಿಸಿದ ರೀತಿ, ಜನಸಾಮಾನ್ಯರನ್ನು ಕೆರಳಿಸಿದೆ. ಹಲವಾರು ಜನರು ಆಕೆಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿ ಬೆಂಬಲಿಸಿದ್ದಾರೆ. ನುರಾಂಗ್ ರೀನಾ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ ವಿದ್ಯಾರ್ಥಿನಿ. ಅವರು ದಕ್ಷಿಣ ದೆಹಲಿಯಲ್ಲಿರುವ ಕೆಫೆಯೊಂದಕ್ಕೆ ರಾತ್ರಿ ಹೋದಾಗ, ಇಬ್ಬರು ಪುರುಷರು ಜನಾಂಗಿಯ ಕಿರುಕುಳ ನೀಡಿದ್ದು, ಮತ್ತೊಮ್ಮೆ ವ್ಯಕ್ತಿಯೊಬ್ಬ ಪಾರ್ಕಿನಲ್ಲಿ ತೊಂದರೆ ನೀಡಿದ್ದು ಹೀಗೆ ಎಲ್ಲವನ್ನೂ ಆಕೆ ವಿವರವಾಗಿ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಆಗ ಒಬ್ಬ ಟ್ವಿಟರ್ ಖಾತೆದಾರರು, ‘ರಾತ್ರಿ ಹೆಣ್ಣುಮಕ್ಕಳು ಓಡಾಡುವುದನ್ನು ನಿಲ್ಲಿಸಬೇಕು’ ಎಂದಿದ್ದಾರೆ!
‘ದೆಹಲಿಯ ದಕ್ಷಿಣ ಭಾಗದಲ್ಲಿರುವ ಆ ಕೆಫೆಗೆ ಹೋಗುವುದನ್ನು ನಾನು ನಿಲ್ಲಿಸಿದ್ದೇನೆ. ಅಲ್ಲಿ ಇಬ್ಬರು ಭಾರತೀಯ ಧರ್ಮಾಂಧರು ಕಳೆದ ತಿಂಗಳು ನನಗೆ ಜನಾಂಗೀಯ ಕಿರುಕುಳ ನೀಡಿದ್ದಾರೆ. ಅಲ್ಲದೆ ನಿನ್ನೆ ಒಬ್ಬ ವ್ಯಕ್ತಿ ಸಾರ್ವಜನಿಕ ಉದ್ಯಾನವನದಲ್ಲಿ ನನ್ನನ್ನು ಬಲವಂತವಾಗಿ ಹಿಂಬಾಲಿಸಲು ಪ್ರಯತ್ನಿಸಿದ್ದಾನೆ. ನಾನು ಅಂದರೆ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದನ್ನು ನಿಲ್ಲಿಸಬೇಕೆ? ನನ್ನನ್ನು ಅಂದರೆ ‘ನಮ್ಮನ್ನು’ ನಾವು ಬಂಧಿಸಿಟ್ಟುಕೊಳ್ಳಬೇಕೆ?’ ಎಂದು ರೀನಾ ಪೋಸ್ಟ್ನಲ್ಲಿ ಪ್ರಶ್ನಿಸಿದ್ದಾರೆ.
‘ನನ್ನ ತಿಳಿವಳಿಕೆಯ ಪ್ರಕಾರ, ಎಲ್ಲಾ ಹೆಣ್ಣುಮಕ್ಕಳು ಬಹುತೇಕ ಇಂಥ ಕಿರುಕುಳವನ್ನು ಪ್ರತೀದಿನವೂ ಸಹಿಸಿಕೊಳ್ಳುತ್ತಲೇ ಬರುತ್ತಿದ್ದಾರೆ. ಇದು ರಾಜಕೀಯ ಮತ್ತು ಸಾಮಾಜಿಕ ದೃಷ್ಟಿಯಿಂದ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ’ ಎಂದು ಮತ್ತೊಂದು ಟ್ವಿಟರ್ ಪೋಸ್ಟ್ನಲ್ಲಿ ರೀನಾ ಹೇಳಿಕೊಂಡಿದ್ದಾರೆ. ಈ ಪೋಸ್ಟ್ಗೆ ಅನೇಕ ಮೆಚ್ಚುಗೆಗಳು ವ್ಯಕ್ತವಾಗಿವೆ. ನೆಟ್ಟಿಗರು ರೀನಾ ಅವರಿಗೆ ಬೆಂಬಲ ವ್ಯಕ್ತಪಡಿಸುವಾಗ ಸನತ್ ಕುಮಾರ್ ಪೌಲ್ ಎಂಬ ವ್ಯಕ್ತಿ, ‘ನೀವು ಹೆಣ್ಣುಮಕ್ಕಳು ತಡರಾತ್ರಿಯಲ್ಲಿ ಅಪರಿಚಿತ ರಸ್ತೆಗಳಲ್ಲಿ, ಸ್ಥಳಗಳಲ್ಲಿ ತಿರುಗಾಡುವುದನ್ನು ಬಿಟ್ಟು ನಿಮ್ಮನ್ನು ನೀವು ರಕ್ಷಿಸಿಕೊಂಡು ಸಂತೋಷದಿಂದ ಭಾರತದಲ್ಲಿ ಇರಬೇಕೆಂದು ನಾವು ಬಯಸುತ್ತೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಇದು ಸಾಕಷ್ಟು ನೆಟ್ಟಿಗರನ್ನು ಕೆರಳಿಸಿದೆ.
I’ve stopped going to THAT cafe in South Delhi where two Indian bigots racially harassed me last month & yesterday a man followed me in a public park & tried to force himself on me. Should I (women) stop going to #publicplaces & lock myself (ourselves) up?
— Ngurang Reena. (@NgurangReena) August 11, 2022
‘ಅಂಕಲ್, ರೀನಾ ಮೂಲತಃ ಅರುಣಾಚಲ ಪ್ರದೇಶದವರು ಹೊರದೇಶದವರಲ್ಲ. ಭಾರತದ ನಕ್ಷೆಯನ್ನು ಗಮನಿಸಿ’ ಎಂದು ಅರುಣಾಚಲ ಪ್ರದೇಶವನ್ನು ಗುರುತು ಹಾಕಿ ಗಮನ ಸೆಳೆದಿದ್ದಾರೆ ಒಬ್ಬ ಟ್ವಿಟರ್ ಖಾತೆದಾರರು.
‘ರೀನಾ, ಭಾರತದವರು. ತಾವು ಸುರಕ್ಷಿತವಾಗಿರಲು ತಮ್ಮನ್ನು ತಾವು ಬಂಧನದಲ್ಲಿರಿಸಿಕೊಳ್ಳಬೇಕಿಲ್ಲ. ಹಾಗಿದ್ದಲ್ಲಿ ನಿರ್ದಿಷ್ಟ ಸಮಯದ ನಂತರ ಪುರುಷರು ಓಡಾಡದಂತೆ ನಿರ್ಬಂಧ ಹೇರಿ. ಆಗ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತವಾಗಿರುತ್ತಾರೆ.’ ಎಂದಿದ್ದಾರೆ ಮತ್ತೊಬ್ಬ ಟ್ವಿಟರ್ ಖಾತೆದಾರರು.
ನೀವೇನು ಹೇಳುತ್ತೀರಿ?
ಇನ್ನಷ್ಟು ಇಂಥ ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:41 am, Sat, 13 August 22