Rapido Driver : ಬೆಂಗಳೂರಿನಲ್ಲಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕ ತಲುಪಬೇಕೆಂದರೆ ಬಸ್, ಮೆಟ್ರೋ ಹೊರತಾಗಿ ಸೌಲಭ್ಯವಿರುವುದು ಕ್ಯಾಬ್, ಆಟೋ, ಬೈಕ್ರೈಡ್. ಹೀಗೆ ಪ್ರಯಾಣಿಸುವಾಗ ನಾವದೆಷ್ಟು ಜನ ಡ್ರೈವರ್ಗಳೊಂದಿಗೆ ಮಾತನಾಡುವ ಆಸ್ಥೆ, ಆಸಕ್ತಿ ಉಳಿಸಿಕೊಂಡಿರುತ್ತೇವೆ? ಬಹುಶಃ ಇದು ಎಲ್ಲರಿಗೂ ಸಾಧ್ಯವಾಗದು. ಏಕೆಂದರೆ ಅನ್ಯರ ಬಗ್ಗೆ ಅನ್ಯ ವಿಷಯಗಳ ಬಗ್ಗೆ ಯೋಚಿಸುವ, ಚಿಂತಿಸುವ ವ್ಯವಧಾನ ಎಲ್ಲರಿಗೂ ಇರುವುದಿಲ್ಲ. ಎಲ್ಲರೂ ಅವರವರ ಬದುಕನ್ನು ಕಟ್ಟಿಕೊಳ್ಳುವ ಧಾವಂತದಲ್ಲಿ ಕಳೆದುಹೋಗುವವರೇ. ಆದರಲ್ಲೂ ಮೊಬೈಲ್ ಬಂದ ಮೇಲಂತೂ ಪೂರ್ತಿ ಸ್ವಕೇಂದ್ರಿತವೇ. ಆದರೂ ಮಾನವೀಯತೆ, ಅಂತಃಕರಣವುಳ್ಳ ಕೆಲ ವ್ಯಕ್ತಿಗಳು ತಮ್ಮ ಲೋಕದಿಂದ ಹೊರಬಂದು ಇತರರೊಂದಿಗೆ ಮಾತನಾಡಲು ಬಯಸುವ ರೂಢಿ ಇಟ್ಟುಕೊಂಡಿದ್ದಾರೆ ಎನ್ನುವುದೇ ಸಮಾಧಾನ. ಇದಕ್ಕೆ ಸಾಕ್ಷಿ ಈ ಟ್ವಿಟರ್ ಪೋಸ್ಟ್ ವೈರಲ್ ಆಗಿರುವುದು.
ಬೆಂಗಳೂರಿನಲ್ಲಿರುವ ಪರಾಗ್ ಜೈನ್ ಎಂಬ ವ್ಯಕ್ತಿ ತನ್ನ ಕೆಲಸದ ಸ್ಥಳದಿಂದ ರ‍್ಯಾಪಿಡೊ ಬೈಕ್ ಬುಕ್ ಮಾಡುತ್ತಾರೆ. ಡ್ರೈವರ್ ವಿಘ್ನೇಶ್ ನಾಗಭೂಷಣಂ, ಅವರನ್ನು ಪಿಕ್ ಮಾಡಲು ಹೋಗುತ್ತಾರೆ. ಪ್ರಯಾಣದ ಮಧ್ಯೆ ಮಾತನಾಡುತ್ತಾ, ನೀವು ಹಿಂದೆ ಯಾವ ಕೆಲಸದಲ್ಲಿ ತೊಡಗಿಕೊಂಡಿದ್ದೀರಿ ಎಂದು ಪರಾಗ್ ಕೇಳುತ್ತಾರೆ. ಎರಡು ವರ್ಷಗಳ ಹಿಂದೆ ಇದೇ ಬಿಲ್ಡಿಂಗ್ನಲ್ಲಿ ಕೆಲಸ ಮಾಡುತ್ತಿದ್ದೆ ಎನ್ನುತ್ತಾರೆ ವಿಘ್ನೇಶ್! ಹೇಗಿದ್ದವರನ್ನು ಹೇಗೂ ತಂದು ನಿಲ್ಲಿಸಬಹುದು ಈ ಕಾಲ, ಅಲ್ಲವೇ?
ಪರಾಗ್ ಕೆಲಸ ಮಾಡುತ್ತಿರುವ ಬಿಲ್ಡಿಂಗ್ನಲ್ಲಿಯೇ ವಿಘ್ನೇಶ್ ಚೀನಾದ ಕಂಪನಿಯೊಂದರಲ್ಲಿ ಆಪರೇಷನ್ ಟೀಮ್ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, 2020ರ ಮಾರ್ಚ್ನಲ್ಲಿ ಚೈನೀಸ್ ಅಪ್ಲಿಕೇಶನ್‌ಗಳ ಮೇಲಿನ ನಿಷೇಧದಿಂದಾಗಿ ಅವರು ಕೆಲಸ ಕಳೆದುಕೊಳ್ಳಬೇಕಾಯಿತು. ಕೊರೊನಾ ಸಮಯದಲ್ಲಿ ಅವರಿಗೆ ಎಲ್ಲಿಯೂ ಕೆಲಸ ಸಿಗಲಿಲ್ಲ. ಹಾಗಾಗಿ, ವಿಘ್ನೇಶ್ ಬಹಳ ಕಾಲದಿಂದ ಮನಸ್ಸಿನಲ್ಲಿದ್ದ ಸಿನೆಮಾ ನಿರ್ದೇಶನನದ ಒಲವಿಗೆ ಗರಿ ಮೂಡಿಸಿಕೊಳ್ಳಲಾರಂಭಿಸಿದರು. ಉಳಿತಾಯದ ಎಲ್ಲ ಹಣವನ್ನು ತೊಡಗಿಸಿ ಒಂದು ಮಿನಿಸೀರೀಸ್ ಮಾಡಿದರು. ನಿರೀಕ್ಷಿಸದ ಮಟ್ಟದಲ್ಲಿ ಅದು ಪ್ರಶಂಸೆ ಗಳಿಸಿತು. ಸುಮಾರು 15 ಫಿಲ್ಮ್ ಫೆಸ್ಟಿವಲ್ಗಳಲ್ಲಿ ಬಹುಮಾನ ಪಡೆಯಿತು. ನಂತರ OTT ಇವರ ಸೀರೀಸ್ ಬಗ್ಗೆ ಆಸಕ್ತಿ ತೋರಿತಾದರೂ ವಾಣಿಜ್ಯಾತ್ಮಕ ಸಮಸ್ಯೆಗಳಿಂದ ತಿರಸ್ಕರಿಸಲ್ಪಟ್ಟಿತು.
ಅಷ್ಟೊತ್ತಿಗೆ ತಮ್ಮ ಎಲ್ಲಾ ಉಳಿತಾಯದ ಹಣ ವ್ಯಯವಾಗಿದ್ದರಿಂದ ಎರಡು ವರ್ಷಗಳ ಕಾಲ ವಿಘ್ನೇಶ್ ಆರ್ಥಿಕವಾಗಿ ಸಂಕಷ್ಟ ಎದುರಿಸಬೇಕಾಯಿತು. ಉಪಾಯಗಾಣದೆ ರ‍್ಯಾಪಿಡೋನಲ್ಲಿ ಅರೆಕಾಲಿಕ ರೈಡರ್ ಆಗಿ ಸೇರಿಕೊಂಡರು. ಈ ವಿಷಯ ತಾಯಿಗೆ ಸಂಕಟ ತರಬಹುದೆಂದು ಅವರಿಂದ ಮರೆಮಾಚಿದರು.
Mini-Series link – https://t.co/QJTYVGxfRN
— Parag Jain (@kparagjain) August 15, 2022
ವಿಘ್ನೇಶ್ ನಿರ್ದೇಶನದ ಮಿನಿಸೀರೀಸ್ ಲಿಂಕ್ ಮೇಲಿನ ಈ ಥ್ರೆಡ್ನಲ್ಲಿದೆ ನೋಡಿ. ಆನ್ಲೈನ್ನಲ್ಲಿ ಈ ಥ್ರೆಡ್ ಸಾಕಷ್ಟು ಪ್ರತಿಕ್ರಿಯೆಗಳಿಂದ ತುಂಬಿ ತುಳುಕುತ್ತಿದೆ.
ಕಾಲನ ಹೊಡೆತದಿಂದಾಗಿ ಬದುಕು ಹೀಗೆ ಏರಿಳಿತವಾಗುವುದು ಸಹಜ. ಆದರೆ ಸ್ವಾಭಿಮಾನದಿಂದ, ಶ್ರಮದಿಂದ ಬದುಕುವಂಥ ಮತ್ತು ತಮ್ಮ ಕನಸುಗಳನ್ನು ಬದಿಗಿಟ್ಟು ಕುಟುಂಬಕ್ಕಾಗಿ ದುಡಿಯುತ್ತಿರುವ ಇಂಥ ಎಷ್ಟೋ ಜನರು ನಮ್ಮ ನಡುವೆ ಇದ್ದೇ ಇದ್ದಾರೆ. ಪರಸ್ಪರ ಸಂವಹನ ಕೊಡುವ ಕಸುವು ಬಹಳ ದೊಡ್ಡದು. ನಿತ್ಯದ ಏಕತಾನತೆಯಲ್ಲಿ ನಮಗರಿವಿಲ್ಲದೆ ಮೌನವಾಗುವ ಅಥವಾ ಮೊಬೈಲ್ಗಳಲ್ಲಿ ಕಳೆದುಹೋಗುವ ನಾವು ಹೀಗೆ ದಾರಿಯಲ್ಲಿ ಜೊತೆಯಾಗುವವರೊಂದಿಗೆ ನಾಲ್ಕು ಮಾತು ಮಾತನಾಡುವುದನ್ನು ರೂಢಿಸಿಕೊಂಡರೆ ಪರಸ್ಪರ ಸ್ಫೂರ್ತಿ ಕೊಡಬಹುದಲ್ಲವೆ? ಅಪರೂಪದ ಇಂಥ ವ್ಯಕ್ತಿಯನ್ನು ಪರಿಚಯಿಸಿಕೊಳ್ಳುವ, ಜಗತ್ತಿಗೆ ಪರಿಚಯಿಸುವ ಪುಣ್ಯ ನಿಮ್ಮದೂ ಆಗುವುದಲ್ಲವೆ?
ಯಾವ ಕೆಲಸವೂ ಮೇಲು ಕೀಳಲ್ಲ. ಆದರೂ ವಿದ್ಯಾರ್ಹತೆ, ಸಾಮರ್ಥ್ಯ, ಕೌಶಲ ಮತ್ತು ಆಸಕ್ತಿಗೆ ಅನುಗುಣವಾದ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ಹೋದಾಗ ವ್ಯಕ್ತಿಯು ತನ್ನ ಲೈಫ್ ಗ್ರಾಫ್ಗೆ ತಕ್ಕಂತೆ ಸೂಕ್ತ ಬೆಳವಣಿಗೆಯ ಬೆಳಕನ್ನು ಕಾಣಬಹುದು. ಹೆಚ್ಚಿನದನ್ನು ಸಾಧಿಸಬಹುದು.
ಇರಲಿ, ಆತ್ಮವಿಶ್ವಾಸ ಮತ್ತು ಕನಸುಳ್ಳ ವ್ಯಕ್ತಿಗೆ ಬದುಕು ತಂದೆಸೆಯುವ ಯಾವ ಅನುಭವವೂ ಸೃಜನಶೀಲತೆಗೆ ದ್ರವ್ಯವೇ!
ಏನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:48 am, Wed, 17 August 22