ಓದುತ್ತ ಕುಳಿತಾಗಲೋ, ಕೆಲಸ ಮಾಡುವಾಗಲೋ ಮಧ್ಯರಾತ್ರಿ ಹಸಿವಾದಾಗ ಮ್ಯಾಗಿಯೇ ನಮ್ಮನೆ ದೇವರು ಎಂದು ಹಬೆಯಾಡುವ ಮ್ಯಾಗಿಯನ್ನು ಕಣ್ಣಿಗೆ ಒತ್ತಿಕೊಂಡು, ಅಲ್ಲಲ್ಲ ಸರಕ್ಕನೆ ತುಟಿಯೊಳಗೆಳೆದುಕೊಂಡು ಆಸ್ವಾದಿಸುವುದನ್ನು ಮರೆಯಲು ಸಾಧ್ಯವೆ? ಚೀಸ್ ಮ್ಯಾಗಿ, ಪೆರಿಪೆರಿ ಮ್ಯಾಗಿ, ತಡ್ಕಾ ಮ್ಯಾಗಿ ಆ ಮ್ಯಾಗಿ ಈ ಮ್ಯಾಗಿ ಒಂದಾ ಎರಡಾ ಈವತ್ತು ಮ್ಯಾಗಿಯ ವೆರೈಟಿಗಳಲ್ಲಿ. ಇಲ್ಲಿ ನೋಡಿ ಲಕ್ನೋದ ಬೀದಿಯಲ್ಲಿ ಮಧ್ಯರಾತ್ರಿ ತಯಾರಾಗುವ ಈ ಮ್ಯಾಗಿಯ ವಿಡಿಯೋ. ಈಗಲೇ ಲಕ್ನೋಗೆ ಹೋಗಬೇಕು ಎನ್ನುವಷ್ಟು ಆಕರ್ಷಕವಾಗಿದೆ!
‘ಫ್ಲೇವರ್ಸ್ ಆಫ್ ಲಕ್ನೋ’ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಲಕ್ನೋದ ಈ ಬೀದಿಯಲ್ಲಿ ನೂರಾರು ಜನರು, ಮಧ್ಯರಾತ್ರಿಯಲ್ಲಿ ಈ ಮಹಿಳೆ ತಯಾರಿಸುವ ಮ್ಯಾಗಿಯಂಗಡಿ ಬಂದು ಜಮಾಯಿಸುತ್ತಾರೆ. ವಿವಿಧ ತರಕಾರಿಗಳು, ಬೆಣ್ಣೆ, ಮಸಾಲೆಪುಡಿಗಳೊಂದಿಗೆ ನೂಡಲ್ಸ್ ಬೇಯುವಾಗ ಇಡೀ ಬೀದಿಯೆಲ್ಲ ಮೂಗರಳಿಸಲಾರಂಭಿಸುತ್ತದೆ.
ಈ ತನಕ ಈ ವಿಡಿಯೋ ಅನ್ನು 4 ಲಕ್ಷ ಜನರು ಇಷ್ಟಪಟ್ಟಿದ್ದಾರೆ. ಪ್ರತಿಕ್ರಿಯೆಗಳ ಸಂಖ್ಯೆ ಸಾವಿರಕ್ಕೂ ಹೆಚ್ಚಿದೆ. ಇದು ತವಾ ಮ್ಯಾಗಿ ಎಂದು ಹಲವರು ಹೇಳಿದ್ದಾರೆ. ಸಾಮಾನ್ಯವಾಗಿ ಮ್ಯಾಗಿಗೆ ಕಡಾಯಿ ಬಳಸುತ್ತಾರೆ. ಆದರೆ ಈಕೆ ಇಲ್ಲಿ ತವಾ ಬಳಸಿದ್ದು ಗಮನಾರ್ಹ.
ಇದನ್ನೂ ಓದಿ : ನಾಯಿ ಕರುವಿನ ಬಾಂಧವ್ಯ; ಸ್ವಜಾತಿ ಸ್ನೇಹ ಸಹಜ ಆದರೆ…
ದಯವಿಟ್ಟು ಹೇಳಿ, ಅದೆಷ್ಟು ಜನ ಮ್ಯಾಗಿಯಷ್ಟೇ ಅಲ್ಲ ಸುಂದರವಾದ ಈ ಮಹಿಳೆಯನ್ನೂ ನೋಡುತ್ತಿದ್ದೀರಿ. ಕೈ ಎತ್ತಿ! ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಎಲ್ಲಾ ಸರಿ ಆದರೆ ಮಧ್ಯರಾತ್ರಿ ಮ್ಯಾಗಿ ಮಾಡುವಾಗ ಇಷ್ಟೊಂದೆಲ್ಲ ಮೇಕಪ್ ಬೇಕೆ, ಅದೂ ಮಧ್ಯರಾತ್ರಿ? ಎಂದು ಒಬ್ಬಾಕೆ ಪ್ರಶ್ನಿಸಿದ್ದಾರೆ. ಈ ಪ್ರತಿಕ್ರಿಯೆಗೆ ನೂರು ಜನರು ಮುಗಿಬಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ.
ಓಹೋ ನಿಮಗೆ ಮ್ಯಾಗಿಗಿಂತ ಆಕೆಯ ಮೇಕಪ್ ಕಿರಿಕಿರಿ ಮಾಡಿದೆಯಾ? ಬನ್ನಿ ಈಗಲೇ ಮ್ಯಾಗಿ ತಿಂದು ಬರೋಣ ಎಂದು ಮತ್ತೊಬ್ಬರು ಆಹ್ವಾನಿಸಿದ್ಧಾರೆ. ದುಡಿಯುವ ವರ್ಗದವರು ಮೇಕಪ್ ಮಾಡಿಕೊಂಡರೆ ನಿಮಗೆ ಪ್ರಶ್ನೆಗಳೇಳುತ್ತವೆ. ಆದರೆ ಅದೇ ಮೇಲ್ವರ್ಗದ ಜನರು ಏನೇ ಮಾಡಿದರೂ ನೀವು ಸುಮ್ಮನಿರುತ್ತೀರಿ ಅಲ್ಲವೆ? ಎಂದು ಮತ್ತೂ ಒಬ್ಬರು ಕೇಳಿದ್ದಾರೆ.
ಇದನ್ನೂ ಓದಿ : ಮುದ್ದಾದ ಈ ಸಿಂಹದಮರಿ ನನಗೆ ಬೇಕು! ಕಾಡಿನಂಚಿನಲ್ಲಿ ಅರ್ಜಿ ಗುಜರಾಯಿಸುತ್ತಿದ್ದಾರೆ ನೆಟ್ಟಿಗರು
ಮೇಕಪ್ವಾಲೀ ಆಂಟೀ 3 ಗಂಟೆಯ ನಂತರ ನಮಗಾಗಿ ಸಮಯ ಮಾಡಿಕೊಳ್ಳಿ ಎಂದು ಕೆಲ ಹುಡುಗರು ಪ್ರಚೋದನೀಯವಾಗಿ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಹಲವರು, ಅಸಭ್ಯವಾಗಿ ಪ್ರತಿಕ್ರಿಯಿಸಬೇಡಿ ಆಕೆ ತನ್ನಪಾಡಿಗೆ ತಾನು ದುಡಿದು ತಿನ್ನುತ್ತಿದ್ದಾಳೆ. ಹೇಗಾದರೂ ಅಲಂಕರಿಸಿಕೊಳ್ಳುತ್ತಾಳೆ ಅದು ಆಕೆಯ ವೈಯಕ್ತಿಕ. ಮೊದಲು ಮಹಿಳೆಯನ್ನು ಮತ್ತು ಆಕೆಯ ಕೌಶಲ, ಬುದ್ಧಿಮತ್ತೆ, ಶ್ರಮ, ಧೈರ್ಯವನ್ನು ಗೌರವಿಸಿ ಎಂದು ಬುದ್ಧಿ ಹೇಳಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:38 pm, Thu, 4 May 23