‘ಅಮ್ಮನಿಗೆ ಸೈಕಲ್ ಸೀಟ್, ನನಗೆ ಕುರ್ಚಿಸೀಟ್’ ಎಲ್ಲರಿಗೂ ದಸರಾ ಶುಭಾಶಯ!

Innovative Basket : ನವರಾತ್ರಿಯ ಈ ದಿನಗಳಲ್ಲಿ ಶಕ್ತಿಸ್ವರೂಪಿಣಿಯ ಸಾಕ್ಷಾತ್ ದರ್ಶನ! ಕೈಗಾರಿಕೋದ್ಯಮಿ ಹರ್ಷ ಗೋಯೆಂಕಾ ಮಾಡಿದ ಈ ವಿಡಿಯೋ ಟ್ವೀಟ್​ಗೆ ಒಂದು ಮಿಲಿಯನ್​ಗಿಂತಲೂ ಹೆಚ್ಚು ಜನರು ಮನಸೋತಿದ್ದಾರೆ.

‘ಅಮ್ಮನಿಗೆ ಸೈಕಲ್ ಸೀಟ್, ನನಗೆ ಕುರ್ಚಿಸೀಟ್’ ಎಲ್ಲರಿಗೂ ದಸರಾ ಶುಭಾಶಯ!
ಸೈಕಲ್​ ಓಡಿಸುತ್ತಿರುವ ಅಮ್ಮ ಕುರ್ಚಿಸೀಟ್​ನಲ್ಲಿ ಮಗಳು
TV9kannada Web Team

| Edited By: ಶ್ರೀದೇವಿ ಕಳಸದ | Shridevi Kalasad

Sep 28, 2022 | 11:32 AM

ತನ್ನ ಮಗುವಿಗಾಗಿ ತಾಯಿ ಏನೆಲ್ಲ ಮಾಡಬಲ್ಲಳು? ಏನೇನೆಲ್ಲಾ ಮಾಡಬಲ್ಲಳು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಅನಾನುಕೂಲ ಮತ್ತು ಅನಿವಾರ್ಯಕ್ಕೆ ತಕ್ಕಂತೆ ಆಕೆಯಲ್ಲಿ ಮೊಳೆಯುವ ರಚನಾತ್ಮಕ, ಕ್ರಿಯಾಶೀಲ ವಿಚಾರಗಳಿಗೆ ಆಕೆಗೆ ಆಕೆಯೇ ಸಾಟಿ. ತಾನು ಪಟ್ಟ ತೊಂದರೆಗಳನ್ನು ಮಗು ಅನುಭವಿಸಬಾರದು ಎಂದು ಯೋಚಿಸುತ್ತ ಹೆಜ್ಜೆಹೆಜ್ಜೆಗೂ ಮಗುವನ್ನು ಎಚ್ಚರದಿಂದ ಕಾಯುತ್ತಿರುತ್ತಾಳೆ ಶಕ್ತಿರೂಪಿಣಿಯಾಗಿ. ಇಂಥ ತಾಯಿಯೊಬ್ಬಳ ವಿಡಿಯೋ ಅನ್ನು ಕೈಗಾರಿಕೋದ್ಯಮಿ ಹರ್ಷ ಗೋಯೆಂಕಾ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸೈಕಲ್​ ಸವಾರಿ ಮಾಡುತ್ತಿರುವ ಈ ಮಹಿಳೆ, ಹಿಂದಿನ ಸೀಟಿನಲ್ಲಿ ತಾತ್ಕಾಲಿಕವಾಗಿ ಪ್ಲಾಸ್ಟಿಕ್​ ಕುರ್ಚಿ ಅಳವಡಿಸಿದ್ದಾಳೆ. ಪುಟ್ಟ ಮಗು ಆ ಕುರ್ಚಿಯಲ್ಲಿ ಭದ್ರವಾಗಿ ಕುಳಿತು ಅಮ್ಮನೊಂದಿಗೆ ಪ್ರಯಾಣಿಸುತ್ತಿದೆ. ನಿರಾಯಾಸವಾಗಿ ಸಾಗಿದ ಈ ಪ್ರಯಾಣ ಯಾರನ್ನೂ ಸೆಳೆಯುವಂತಿಲ್ಲವೆ?

ಜೀವನದಲ್ಲಿ ಯಾವ ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ ಎನ್ನುವುದಕ್ಕೆ ಈ 9 ಸೆಕೆಂಡುಗಳ ವಿಡಿಯೋ ಸಾಕ್ಷಿ. ಈತನಕ 1.4 ಮಿಲಿಯನ್​ ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. 5,000 ಕ್ಕಿಂತಲೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಮಹಿಳೆಯ ಸೃಜನಶೀಲತೆಗೆ ನೆಟ್ಟಿಗರು ಪ್ರಭಾವಿತಗೊಂಡಿದ್ದಾರೆ.

ಎಲ್ಲ ಆವಿಷ್ಕಾರಗಳು ಮಗುವಿನಿಂದಲೇ ಆರಂಭವಾಗುತ್ತವೆ. ತಂದೆತಾಯಿ ಮಕ್ಕಳ ಖುಷಿಗಾಗಿ ಏನೆಲ್ಲ ಪ್ರಯತ್ನಿಸುತ್ತಾರಲ್ಲವೆ? ಎಂದು ನೆಟ್ಟಿಗರೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ. ಎಂಥ ಆರಾಮದಾಯಕ ಪ್ರಯಾಣ, ನಾವೂ ಸೈಕಲ್​ ಓಡಿಸಬಹುದಲ್ಲ. ಹೀಗೆಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ​ಮಳೆ ಬಂದರೆ, ಬಿಸಿಲು ಹೆಚ್ಚಾದರೆ ಮಗುವಿನ ಆರೋಗ್ಯ ಏನಾಗಬೇಕು ಎಂದು ಮಗದೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಈ ತಾಯಿ ಎಷ್ಟೇ ಹುಷಾರಾಗಿ ಸೈಕಲ್ ಓಡಿಸುತ್ತಿರಬಹುದು. ಆದರೆ ಮಗುವಿಗೆ ನಿದ್ದೆ ಬಂದರೆ, ಹಿಂದಿನಿಂದ ಯಾವುದಾದರೂ ಲಾರಿ ಗುದ್ದಿದರೆ? ಎಂದು ಕೆಲವರು ಸಾಧ್ಯಾಸಾಧ್ಯತೆಗಳನ್ನು ಊಹಿಸಿಕೊಂಡು ಕಾಳಜಿಯಿಂದ ಪ್ರತಿಕ್ರಿಯಿಸಿದ್ದಾರೆ.

ಏನೇ ಆಗಲಿ, ನವರಾತ್ರಿಯ ಈ ದಿನಗಳಲ್ಲಿ ಇಂಥ ದುರ್ಗೆಯರ ಸಂತತಿ ಹೆಚ್ಚಲಿ. ಎಲ್ಲರೂ ಸುರಕ್ಷಿತವಾಗಿರಲಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಇದನ್ನೂ ಓದಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada