ಮುಂಬೈ, ಮಾ. 20: ಸೈಬರ್ ವಂಚನೆಯ (Cyber Crime) ಜಾಲದ ಕುರಿತು ನಿರಂತರವಾಗಿ ಅರಿವು ಮೂಡಿಸುವ ಕೆಲಸ ನಡೆಯುತ್ತಿದ್ದರೂ , ಸೈಬರ್ ಖದೀಮರು ಮಾತ್ರ ವಿನೂತನ ವಂಚನೆಯ (Scams) ವಿಧಾನಗಳನ್ನು ಅನುಸರಿಸುತ್ತಾ ಅಮಾಯಕ ಜನರನ್ನು ವಂಚನೆ ಮಾಡುತ್ತಲೇ ಇದ್ದಾರೆ. ಕೆಲ ತಿಂಗಳುಗಳಿಂದ ಡಿಜಿಟಲ್ ಅರೆಸ್ಟ್ (digital arrest) ಅನ್ನೋ ಸ್ಕ್ಯಾಮ್ ಹೆಚ್ಚಾಗಿದ್ದು, ಈ ವಂಚನೆಗೆ ಬಲಿಯಾಗಿ ಅದೆಷ್ಟೋ ಜನ ಲಕ್ಷಾಂತರ ಕೋಟ್ಯಾಂತರ ಹಣವನ್ನು ಕಳೆದುಕೊಂಡಿದ್ದಾರೆ. ಮನ್ ಕಿ ಬಾತ್ (mann ki baat) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಈ ಸ್ಕ್ಯಾಮ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇಷ್ಟೆಲ್ಲಾ ಆದ್ರೂ ಈ ಸೈಬರ್ ವಂಚನೆ ಮಾತ್ರ ಕೊನೆಗಾಣುತ್ತಿಲ್ಲ. ಇದೀಗ ಇಲ್ಲೊಬ್ಬರು ವೃದ್ಧೆ ಕೂಡಾ ಡಿಜಿಟಲ್ ಅರೆಸ್ಟ್ ವಂಚನೆಗೆ ಬಲಿಯಾಗಿ ಬರೋಬ್ಬರಿ 20 ಕೋಟಿ ರೂ. ಕಳೆದುಕೊಂಡಿದ್ದಾರೆ. ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ, ನಿಮ್ಮ ಮಕ್ಕಳು ಕೂಡಾ ಬಂಧನ ಭೀತಿಯಲ್ಲಿದ್ದಾರೆ ಎಂದು ಸುಳ್ಳು ಹೇಳಿ ಮೋಸ ಮಾಡಿ ಸ್ಕ್ಯಾಮರ್ಸ್ (Scammers) ವೃದ್ಧೆಯ ಬ್ಯಾಂಕ್ ಅಕೌಂಟ್‌ನಿಂದ 20 ಕೋಟಿ ರೂ. ಹಣವನ್ನು ದೋಚಿದ್ದಾರೆ.
ಮುಂಬೈನ 86 ವರ್ಷ ವಯಸ್ಸಿನ ವೃದ್ಧೆ ಸೈಬರ್ ವಂಚನೆಗೆ ಬಲಿಯಾಗಿ ಬರೋಬ್ಬರಿ 20 ಕೋಟಿ ರೂ. ಕಳೆದುಕೊಂಡಿದ್ದಾರೆ. ಹೆದರಿಸಿ ಬೆದರಿಸಿ ವೃದ್ಧೆಯನ್ನು ಸುಮಾರು 2 ತಿಂಗಳುಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿ ಹೆದರಿಸಿ ಬೆದರಿಸಿ ಅವರಿಂದ ವಂಚಕರು 20.25 ಕೋಟಿ ರೂ. ದೋಚಿದ್ದಾರೆ.
ತಾನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಸ್ಕ್ಯಾಮರ್ ಅಪರಿಚಿತ ಸಂಖ್ಯೆಯಿಂದ ವೃದ್ಧೆಗೆ ಕರೆ ಮಾಡಿ ನಿಮ್ಮ ವೈಯಕ್ತಿಕ ದಾಖಲೆಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆ ತೆರೆಯಲಾಗಿದ್ದು, ಅದನ್ನು ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಹೆದರಿಸಿದ್ದಾರೆ. ನೀವು ಈ ತಕ್ಷಣ ಡಿಜಿಟಲ್ ಅರೆಸ್ಟ್ ಆಗಬೇಕು ಇಲ್ಲದೆ ಹೋದಲ್ಲಿ ನಿಮ್ಮ ಮಕ್ಕಳನ್ನು ಬಂಧಿಸಲಾಗುವುದು ಎಂದು ಬೆದರಿಸಿದ್ದರು.
ಇದರಿಂದ ಆತಂಕಕ್ಕೆ ಒಳಗಾದ ವೃದ್ಧೆ ಸುಮಾರು ಎರಡು ತಿಂಗಳುಗಳ ಕಾಲ ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿದ್ದಾರೆ. ಈ ವೇಳೆ ವೃದ್ಧೆ ಮನೆಯಲ್ಲಿಯೇ ಇದ್ದಾರೆಯೇ ಎಂದು ಪರೀಕ್ಷಿಸಲು ಪ್ರತಿ ಮೂರು ಗಂಟೆಗೊಮ್ಮೆ ಕರೆ ಮಾಡಿ ಪರೀಕ್ಷಿಸುತ್ತಿದ್ದರು. ಇದಾದ ಬಳಿಕ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ನ್ಯಾಯಾಲಯದ ಖಾತೆಗೆ ವರ್ಗಾಯಿಸಬೇಕಾಗುತ್ತದೆ ತನಿಖೆ ಪೂರ್ಣಗೊಂಡ ನಂತರ ನಿಮ್ಮ ಹಣವನ್ನು ಹಿಂತಿರುಗಿಸಲಾಗುವುದು ಎಂದು ಸೈಬರ್ ವಂಚಕರು ಸುಳ್ಳು ಭರವಸೆ ನೀಡಿದ್ದರು. ಇದನ್ನು ನಿಜವೆಂದು ನಂಬಿದ ವೃದ್ಧೆ 20.26 ಕೋಟಿ ರೂ. ಹಣವನ್ನು ವಂಚಕರ ಬ್ಯಾಂಕ್ ಅಕೌಂಟ್‌ಗೆ ವರ್ಗಾಯಿಸಿದ್ದಾರೆ.
ಇದನ್ನೂ ಓದಿ: ಆರಕ್ಷಕರೇ ಹಿಂಗ್ ಮಾಡಿದ್ರೆ ಹೆಂಗಪ್ಪಾ ಎಂದ ಜನ
ಕೇವಲ ಊಟ ಮಾಡಲು ಮಾತ್ರ ಕೋಣೆಯಿಂದ ಹೊರಗೆ ಬರುತ್ತಿದ್ದನ್ನು ಹಾಗೂ ವೃದ್ಧೆಯ ನಡವಳಿಕೆಯಲ್ಲಿ ಒಂದಷ್ಟು ಬದಲಾವಣೆಯನ್ನು ಕಂಡು ಮನೆಗೆಲಸದಾಕೆ ಈ ಬಗ್ಗೆ ವೃದ್ಧೆಯ ಮಗಳಿಗೆ ತಿಳಿಸಿದ್ದು, ಈ ಸಂದರ್ಭದಲ್ಲಿ ವೃದ್ಧೆ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಮಾರ್ಚ್ 4 ರಂದು ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶಯಾನ್ ಜಮೀಲ್ ಶೇಖ್ ಮತ್ತು ರಾಝಿಕ್ ಅಜಮ್ ಬಟ್ ಎಂಬ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಹೀಗೆ ಆನ್‌ಲೈನ್ ಸ್ಕ್ಯಾಮ್‌ಗಳ ಬಗ್ಗೆ ಅರಿವಿಲ್ಲದೆ ವೃದ್ಧೆ ವಂಚನೆಗೆ ಒಳಗಾಗಿ ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ