ಸೋಷಿಯಲ್ ಮೀಡಿಯಾ ಅನ್ನೋದೇ ಹೀಗೆ ಯಾವಾಗ? ಯಾರು ರಾತ್ರಿ ಬೆಳಗಾವುವುದರ ಒಳಗೆ ಫೇಮಸ್ ಆಗ್ತಾರೆ ಅಂತ ಹೇಳೋಕೆ ಆಗಲ್ಲ. ಯಾವುದಾದರೂ ರೀಲ್ಸ್ ವಿಡಿಯೋ ವೈರಲ್ ಆದರಂತೂ ಅವುಗಳು ಇಡೀ ಸಾಮಾಜಿಕ ಮಾಧ್ಯಮದಲ್ಲಿ ಧೂಳೆಬ್ಬಿಸಿ ಬಿಡುತ್ತವೆ. ಇದಕ್ಕೆ ʼಓ ನಲ್ಲ.. ನೀ ನಲ್ಲ.. ಕರಿಮಣಿ ಮಾಲೀಕ ನೀನಲ್ಲʼ ಹಾಡು ಸೂಕ್ತ ನಿದರ್ಶನ ಅಂತಾನೇ ಹೇಳಬಹುದು. ಹೌದು 1999 ರಲ್ಲಿ ತೆರೆ ಕಂಡ ಉಪೇಂದ್ರ ಚಿತ್ರದ ಈ ಹಾಡು ಸೋಷಿಯಲ್ ಮೀಡಿಯಾದ ಕಾರಣದಿಂದ ಮತ್ತೊಮ್ಮೆ ಮುನ್ನೆಲೆಗೆ ಬಂದು ವೈರಲ್ ಆಗಿತ್ತು. ಅಷ್ಟೇ ಅಲ್ಲದೆ ನಂದಿನಿ ಖ್ಯಾತಿಯ ವಿಕ್ಕಿಪೀಡಿಯಾ ಟೀಮ್ ಕೂಡಾ ಈ ಹಾಡಿಗೆ ಹೊಸ ಟಚ್ ನೀಡಿ ಕರಿಮಣಿ ಮಾಲೀಕ ರಾಹುಲ್ಲ ಎಂಬ ಹಾಡನ್ನು ಬಿಡುಗಡೆ ಮಾಡಿದ್ದರು. ಈ ಹಾಡಂತೂ ಸೂಪರ್ ಹಿಟ್ ಆಗಿತ್ತು. ಅದೇ ರೀತಿ ಇದೀಗ ಕರಿಮಣಿ ಮಾಲೀಕನ ಅಪ್ಡೇಟೆಡ್ ವರ್ಷನ್ ಬೋಳು ತಲೆ ಮಾಲೀಕನ ಹಾಡೊಂದು ಸಖತ್ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕೇಶದ ಮಾಲೀಕ ನಾನಲ್ಲ ಹಾಡಿನ ವಿಡಿಯೋವನ್ನು ನಿತೀನ್ ಹೆಗ್ಡೆ (@nithin.hegde.56) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಬೋಳು ತಲೆ ಮಾಲೀಕ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ನಿತೀನ್ ಹೆಗ್ಡೆ ತಮ್ಮ ಬೋಳು ತಲೆಯ ವಿಷಯವನ್ನು ಇಟ್ಟುಕೊಂಡು ತಮಾಷೆಯ ಸಾಹಿತ್ಯವನ್ನು ಬರೆದು, ಬೋಳು ತಲೆಯ ಸುಂದರ ಹಾಡನ್ನು ಹಾಡಿರುವ ದೃಶ್ಯವನ್ನು ಕಾಣಬಹುದು. ಅವರು ತಮ್ಮ ಬೋಳು ತಲೆಯ ಮೇಲೆ ಕೈಯಿಟ್ಟುಕೊಂಡು ‘ತಲೆಯ ಮೇಲೆ ಖಾಲಿ, ಖಾಲಿ…. ನೀ ಬದಿಯಲ್ಲಿ ಇದ್ದರೂ…. ಅಲ್ಲಿಗೆ ನಿಲ್ಲದೆ, ಉದುರಿ ಹೋದೆಯ ನೀ ಕೊನೆಗೆ…. ಇನ್ನೆಲ್ಲಾ ನಾನಲ್ಲ ಕೇಶದ ಮಾಲೀಕ ನಾನಲ್ಲ… ಬೋಳು ತಲೆ ಮಾಲೀಕ ನಾ.. ನಲ್ಲ’ ಎಂಬ ಹಾಡನ್ನು ಹಾಡುತ್ತಿರುವ ಹಾಸ್ಯಮಯ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಬಂತು ನೋಡಿ ಡಾರ್ಕ್ ಪಾರ್ಲೆ-ಜಿ; ಸೋಷಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸುತ್ತಿದೆ ಪಾರ್ಲೆ-ಜಿ
ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಏಳುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 42 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಈ ಹಾಡಿಗೆ ಹಲವಾರು ಕಾಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಈ ಹಾಡಂತೂ ಅದ್ಭುತವಾಗಿದೆ, ಅದಕ್ಕೆ ಹೇಳೋದು ಇರೋದ್ರಲ್ಲಿ ತೃಪ್ತಿ ಆಗಿರ್ಬೇಕು ಅಂತʼ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಮಗೆ ಅರವತ್ತನೇ ವಯಸ್ಸಿಗೆ ಕೂದಲು ಉದುರಿದೆ, ನಮ್ಗಿಲ್ಲಿ ಇಪ್ಪತ್ತಕ್ಕೆ ಕೂದಲು ಉದುರಿ ಹೋಗ್ತಿದ್ದಾವೆ. ನಾವು ಯಾವ್ ಹಾಡು ಹಾಡ್ಬೇಕುʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬೋಳು ತಲೆಗೆ ಬಾಳು ಕೊಟ್ಟʼ ಹಾಡು ಎಂದು ತಮಾಷೆ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ