ಈ ಕೆಲವರು ಊಟ ಬೇಕಾದ್ರೂ ಬಿಟ್ಟು ಇರ್ತಾರೆ ಆದ್ರೆ ಮೊಬೈಲ್ ಇಲ್ದೇ ಒಂದು ಕ್ಷಣವೂ ಇರಲಾರರು. ಅದರಲ್ಲೂ ಮೊಬೈಲ್ ಚಾರ್ಜ್ ಮಾಡಲು ಕರೆಂಟ್ ಇಲ್ಲಾಂದ್ರೆ ಚಡಪಡಿಕೆ ಶುರುವಾಗಿ ಬಿಡುತ್ತೆ. ಅಯ್ಯೋ ದೇವ್ರೇ ಯಾವಾಗಪ್ಪಾ ಕರೆಂಟ್ ಬರುತ್ತೆ ಎಂದು ಕಾದು ಕೂರುತ್ತಾರೆ. ಇನ್ನೂ ಮಳೆಯ ಕಾರಣದಿಂದಲೋ ಅಥವಾ ರಿಪೇರಿಯ ಕಾರಣದಿಂದಲೋ ವಾರಗಟ್ಟಲೆ ಕರೆಂಟ್ ಇಲ್ಲದಿದ್ದರೆ ಅದರ ಕಥೆ ಕೇಳುವುದೇ ಬೇಡಾ. ಸರ್ಕಸ್ ಮಾಡಿಯಾದ್ರು ಈ ಜನ ಮೊಬೈಲ್ ಚಾರ್ಜ್ ಮಾಡಿಕೊಳ್ಳುತ್ತಾರೆ. ಕಳೆದ ತಿಂಗಳು ಮಳೆಯ ಅವಾಂತರದಿಂದ ಮಲೆನಾಡಿನಲ್ಲಿ ಕರೆಂಟ್ ಇಲ್ಲದೆ ಅಲ್ಲಿನ ಜನರು ಹಣ ಕೊಟ್ಟು ತಮ್ಮ ಮೊಬೈಲ್ಗಳನ್ನು ಜನರೇಟರ್ ಮೂಲಕ ಚಾರ್ಜ್ ಮಾಡಿಕೊಂಡಿದ್ದರು. ಅದೇ ರೀತಿ ಇಲ್ಲೊಂದು ಹಳ್ಳಿಯ ಜನ ಕರೆಂಟ್ ಇಲ್ಲದೆ ಬೇಸತ್ತು ಕೊನೆಗೆ ಜನರೇಟರ್ ಮೂಲಕ ಮೊಬೈಲ್ ಚಾರ್ಜ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಕುರಿತ ಪೋಸ್ಟ್ ಒಂದನ್ನು Gulzar_sahab ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಗ್ರಾಮದಲ್ಲಿ ಒಂದು ವಾರದ ನಂತರ ಟ್ರಾನ್ಸ್‌ಫಾರ್ಮರ್ ದುರಸ್ತಿಯಾದ ನಂತರ….” ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಗ್ರಾಮದ ಜನರು ಸಾಲಾಗಿ ಕುಳಿತು ಜನರೇಟರ್ ಮೂಲಕ ಮೊಬೈಲ್ ಚಾರ್ಜ್ ಮಾಡಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು. ಒಂದು ವಾರಗಳಿಂದ ಕರೆಂಟ್ ಇಲ್ಲದೆ ಬೇಸತ್ತಿದ್ದ ಊರಿನ ಜನ, ಊಟ ಬೇಕಾದ್ರೂ ಬಿಟ್ಟಿರ್ಬೋದು ಆದ್ರೆ ಮೊಬೈಲ್ ಚಾರ್ಜ್ ಇಲ್ಲದೆ ಇರಲಾರೆವು ಎಂದು ದಿಕ್ಕು ತೋಚದೆ ಕೊನೆಗೆ ಯುವಕರೆಲ್ಲಾ ಸೇರಿ ಜನರೇಟರ್ ಸಹಾಯದಿಂದ ನಾ ಮುಂದು ತಾ ಮುಂದು ಎನ್ನುತ್ತಾ ಮೊಬೈಲ್ ಚಾರ್ಜ್ ಮಾಡಿದ್ದಾರೆ.
ಇದನ್ನೂ ಓದಿ: ಬಸ್ಸಿನಲ್ಲಿ ಸೀಟ್ ಹಿಡಿಯಲು ಮಹಿಳೆ ಮಾಡಿದ ಸರ್ಕಸ್ ನೋಡಿ…
गांव में एक हफ्ते बाद ट्रांसफार्मर ठीक होने के बाद।😅📱 pic.twitter.com/4k0MsAGf2n
— ज़िन्दगी गुलज़ार है ! (@Gulzar_sahab) August 20, 2024
ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 70 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಹಳ್ಳಿಯಾಗಿರಲಿ, ನಗರವೇ ಆಗಿರಲಿ ವಾರಗಟ್ಟಲೆ ಕರೆಂಟ್ ಇಲ್ಲದಿದ್ದರೆ ಇದೇ ಪರಿಸ್ಥಿತಿ ಎದುರಾಗುತ್ತದೆ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ಈ ದೃಶ್ಯ ನೋಡಲು ತುಂಬಾನೇ ತಮಾಷೆಯಾಗಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ