ಬೈಕ್ ಅಥವಾ ಯಾವುದೇ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಾಗ, ಬೆಂಕಿ ನಂದಿಸುವ ಭರದಲ್ಲಿ ಬೈಕ್ ಹತ್ತಿರಕ್ಕೆ ಹೋಗಬಾರದು. ಕೆಲವೊಮ್ಮೆ ಬೆಂಕಿಯ ಶಾಖಕ್ಕೆ ವಾಹನದ ಪೆಟ್ರೋಲ್ ಟ್ಯಾಂಕ್ ಸ್ಪೋಟಗೊಂಡು ಬೆಂಕಿ ನಂದಿಸಲು ಹೋದವರೇ ಬೆಂಕಿಗಾಹುತಿಯಾಗುವಂತಹ ಸಾಧ್ಯತೆ ಇರುತ್ತದೆ. ಅಂತಹದ್ದೇ ಭೀಕರ ಘಟನೆಯೊಂದು ಇತ್ತೀಚಿಗೆ ನಡೆದಿದ್ದು, ಮಟ ಮಟ ಮಧ್ಯಾಹ್ನ ಬಿಸಿಲ ಶಾಖಕ್ಕೆ ಬುಲೆಟ್ ಬೈಕ್ ನಡು ರಸ್ತೆಯಲ್ಲಿಯೇ ಹೊತ್ತಿ ಉರಿಯುತ್ತದೆ. ಬೆಂಕಿ ನಂದಿಸಲು ಹೋದ ಸಂದರ್ಭದಲ್ಲಿ ವಾಹನದ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ಸ್ಥಳೀಯರು ಬೆಂಕಿಯ ಕೆನ್ನಾಲಿಗೆ ಸಿಲುಕಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಭಯಾನಕ ದೃಶ್ಯವನ್ನು ಕಂಡು ನೋಡುಗರು ಬೆಚ್ಚಿ ಬಿದ್ದಿದ್ದಾರೆ.
ಈ ಘಟನೆ ಹೈದರಾಬಾದ್‌ನ ಮೊಘಲ್‌ಪುರದ ಬಿಬಿ ಬಜಾರ್ ರಸ್ತೆಯಲ್ಲಿ ನಡೆದಿದ್ದು, ಮಟ ಮಟ ಮಧ್ಯಾಹ್ನದ ವೇಳೆ ರಾಯಲ್ ಎನ್‌ಫೀಲ್ಡ್ ಬೈಕ್ ಇದ್ದಕ್ಕಿದ್ದಂತೆ ಹೊತ್ತಿ ಉರಿದಿದೆ. ತಕ್ಷಣ ಸ್ಥಳೀಯರು ಬೆಂಕಿಯನ್ನು ನಂದಿಸಲು ಹೋಗಿದ್ದು, ಶಾಖ ಹೆಚ್ಚಾದ ಕಾರಣ ವಾಹನದ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡು ಅಲ್ಲೇ ಬೈಕ್ ಹತ್ತಿರ ನಿಂತಿದ್ದ ಸ್ಥಳೀಯರು ಹಾಗೂ ಅಕ್ಕ ಪಕ್ಕದಲ್ಲಿದ್ದ ವಾಹನಗಳಿಗೂ ಬೆಂಕಿ ತಗುಲಿದೆ. ಈ ಭೀಕರ ಬೆಂಕಿ ಅವಘಡದಿಂದ ಪೊಲೀಸ್ ಕಾನ್‌ಸ್ಟೇಬಲ್ ಸೇರಿದಂತೆ ಇನ್ನೂ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಅಲ್ಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಗೆ ಸಂಬಂಧಪಟ್ಟ ವಿಡಿಯೋವನ್ನು @Janasnehi Yogesh ಎಂಬ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಬೈಕ್‌ಗೆ ಬೆಂಕಿ ಹತ್ತಿಕೊಂಡಾಗ ಯಾವುದೇ ಕಾರಣಕ್ಕೂ ಹತ್ತಿರ ಹೋಗಬೇಡಿ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವಿಡಿಯೋದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಹೊತ್ತಿ ಉರಿಯುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಬೈಕ್‌ಗೆ ಬೆಂಕಿ ಹತ್ತಿಕೊಂಡಾಗ ಸ್ಥಳೀಯರು ನೀರು ಹಾಗೂ ಒದ್ದೆ ಗೋಣಿ ಚೀಲ ಬಳಸಿ ಬೆಂಕಿ ಆರಿಸಲು ಪ್ರಯತ್ನಿಸುತ್ತಾರೆ. ಆ ಸಂದರ್ಭದಲ್ಲಿ ಬೆಂಕಿಯ ಶಾಖಕ್ಕೆ ಬೈಕ್ ಪೆಟ್ರೋಲ್ ಟ್ಯಾಂಕ್ ಸ್ಪೋಟಗೊಂಡು, ಸ್ಥಳೀಯರು ಹಾಗೂ ಅಲ್ಲಿ ನಿಲ್ಲಿಸಲಾದ ವಾಹನಗಳ ಮೇಲೂ ಬೆಂಕಿ ತಗುತಿದೆ.
ಇದನ್ನೂ ಓದಿ: ಜಾಬ್ ಧರಿಸದೆ ಟಿಕ್ ಟಾಕ್‌ನಲ್ಲಿ ಲೈವ್ ಬಂದ ಮುಸ್ಲಿಂ ಯುವತಿ, ಹಿಗ್ಗಾಮುಗ್ಗಾ ಥಳಿಸಿದ ಪೋಷಕರು
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಭೀಕರ ಬೆಂಕಿ ಅವಘಡದ ದೃಶ್ಯವನ್ನು ಕಂಡು ನೋಡುಗರು ಬೆಚ್ಚಿ ಬಿದ್ದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ