‘ನಾನು ಗೆದ್ದರೆ ವಿಮಾನ ನಿಲ್ದಾಣ, ಮಹಿಳೆಯರಿಗೆ ಮೇಕಪ್ ಕಿಟ್, ವೈಫೈ ಉಚಿತ’
Sarpanch Manifesto : ನಾನಂತೂ ಈ ಹಳ್ಳಿಗೆ ಶಿಫ್ಟ್ ಆಗ್ತೀನಿ ಎನ್ನುತ್ತಿದ್ದಾರೆ ಐಎಫ್ಎಸ್ ಅಧಿಕಾರಿ ಅರುಣ್ ಗೋಥ್ರಾ. ಈಗಲೇ ಶಿಫ್ಟ್ ಆಗಿಬಿಡೋಣ, ತಡವಾದರೆ ವೀಸಾ ಬೇಕಾಗಬಹುದು ಎನ್ನುತ್ತಿದ್ದಾರೆ ನೆಟ್ಟಿಗರು. ನೀವೂ ಶಿಫ್ಟ್ ಆಗುತ್ತೀರೋ ಹೇಗೆ?
Trending : ‘ನಾನು ಈ ಚುನಾವಣೆಯಲ್ಲಿ ಗೆದ್ದು ಬಂದರೆ, ಈ ಗ್ರಾಮಕ್ಕೆ ಮೂರು ವಿಮಾನ ನಿಲ್ದಾಣಗಳು, ಹೆಣ್ಣುಮಕ್ಕಳಿಗೆ ಉಚಿತ ಮೇಕಪ್ ಕಿಟ್, ಪ್ರತೀ ಕುಟುಂಬಕ್ಕೆ ಉಚಿತ ಬೈಕು, ವೈಫೈ, ಪೆಟ್ರೋಲ್ ಬೆಲೆಯಲ್ಲಿ ಪ್ರತೀ ಲೀಟರ್ಗೆ ರೂ.20 ಇಳಿಕೆ, ಜಿಎಸ್ಟಿ ರದ್ದು ಇಷ್ಟೆಲ್ಲ ಸೌಕರ್ಯಗಳನ್ನು ಕಲ್ಪಿಸುತ್ತೇನೆ’ ಹರಿಯಾಣಾದ ಸಿರ್ಸಾದ್ ಗ್ರಾಮದ ಸರ್ಪಂಚ್ ಹುದ್ದೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರ ಚುನಾವಣೆ ಪ್ರಣಾಳಿಕೆ ಇದು. ಐಪಿಎಸ್ ಅಧಿಕಾರಿ ಅರುಣ್ ಬೋಥ್ರಾ ಈ ಕರಪತ್ರವನ್ನು ಟ್ವೀಟ್ ಮಾಡುತ್ತಿದ್ದಂತೆ ಇದೀಗ ವೈರಲ್ ಆಗುತ್ತಿದೆ. ‘ನಾನು ಈ ಗ್ರಾಮಕ್ಕೆ ಶಿಫ್ಟ್ ಅಗುತ್ತಿದ್ದೇನೆ’ ಎಂಬ ವ್ಯಂಗ್ಯದ ಒಕ್ಕಣೆ ಬರೆದಿದ್ದಾರೆ ಅರುಣ್.
Am shifting to this village ? pic.twitter.com/fsfrjxbdLc
ಇದನ್ನೂ ಓದಿ— Arun Bothra ?? (@arunbothra) October 9, 2022
ಸರ್ಪಂಚ್ ಚುನಾವಣೆಗೆ ಸ್ಪರ್ಧಿಸಿ, ಚುನಾವಣೆಯ ಈ ಅದ್ಭುತ ಪ್ರಣಾಳಿಕೆ ಪಟ್ಟಿಯನ್ನು ಬಿಡುಗಡೆ ಮಾಡಿದವರು ಜೈಕರಣ್ ಲಾಥ್ವಾಲ್ ಎಂಬುವವರು. ನೆಟ್ಟಿಗರು ಈ ಪ್ರಣಾಳಿಕೆ ಪಟ್ಟಿಯನ್ನು ಹಂಚಿಕೊಂಡು ವಿಧವಿಧದಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಈ ಗ್ರಾಮಕ್ಕೆ ಶಾಶ್ವತವಾಗಿ ಶಿಫ್ಟ್ ಆಗಬೇಕೆ, ಬೇಡವೆ? ಎಂಬ ಬಗ್ಗೆ ಗೊಂದಲಕ್ಕೆ ಒಳಗಾಗಿದ್ದೇನೆ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ನಾನೂ ಈ ಹಳ್ಳಿಗೆ ಶಿಫ್ಟ್ ಆಗಬೇಕು, ದಯವಿಟ್ಟು ಹಳ್ಳಿಯ ಹೆಸರು ಹೇಳಿ’ ಎಂದಿದ್ದಾರೆ ಮತ್ತೊಬ್ಬರು. ‘ಅರುಣ್ ಬೋಥ್ರಾ ಅವರೊಂದಿಗೆ ನಾನು ಈ ಹಳ್ಳಿಗೆ ಶಿಫ್ಟ್ ಆಗುತ್ತಿದ್ದೇನೆ’ ಎಂದು ಮಗದೊಬ್ಬರು ತಮಾಷೆ ಮಾಡಿದ್ದಾರೆ. ‘ಆಮೇಲಾದರೆ ವೀಸಾ ಬೇಕಾಗಬಹುದು. ಈಗಲೇ ಶಿಫ್ಟ್ ಆಗುವುದು ಒಳ್ಳೆಯದು ನಡೆಯಿರಿ’ ಎಂದು ಇನ್ನೂ ಒಬ್ಬರು ಹಾಸ್ಯ ಮಾಡಿದ್ದಾರೆ.
ನೀವೇನಂತೀರಿ? ಇಷ್ಟೆಲ್ಲ ಉಚಿತವಾಗಿ ಸಿಗುವಾಗ ಈ ಹಳ್ಳಿಗೆ ಶಿಫ್ಟ್ ಆಗುವುದು ಒಳಿತಲ್ಲವೆ? ಅದರಲ್ಲೂ ಒಂದು ಹಳ್ಳಿಗೆ ಮೂರು ವಿಮಾನ ನಿಲ್ದಾಣಗಳು! ನಡೆಯಿರಿ ಮತ್ತೆ…
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:56 pm, Tue, 11 October 22