ಉಕ್ರೇನಿನ ಈ ಕಲಾವಿದೆಯ ವಯೋಲಿನ್ನಲ್ಲಿ ‘ಪಸೂರಿ’ಯ ಮಾಧುರ್ಯ ಹೊಮ್ಮಿದ ಅಪೂರ್ವ ಕ್ಷಣ
Pasoori : ಕ್ಯಾಲಿಫೋರ್ನಿಯಾದ ಬೀದಿಯಲ್ಲಿ ಉಕ್ರೇನಿನ ಕಲಾವಿದೆಯೊಬ್ಬಳು ಪಾಕಿಸ್ತಾನಿ ಕಲಾವಿದ ಅಲಿ ಸೇಥಿಯ ‘ಪಸೂರಿ’ ಹಾಡನ್ನು ವಯೋಲಿನ್ನಲ್ಲಿ ನುಡಿಸಿದ ಆ ಕ್ಷಣಗಳು... 4.1 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ.
Viral Video : ಈ ಉಕ್ರೇನಿನ 13 ವರ್ಷದ ಈ ಕಲಾವಿದೆ ಕ್ಯಾಲಿಫೋರ್ನಿಯಾದ ಬೀದಿಯಲ್ಲಿ ‘ಪಸೂರಿ’ ಹಾಡನ್ನು ವಯೋಲಿನ್ನಲ್ಲಿ ನುಡಿಸುತ್ತಿದ್ದರೆ ಸುತ್ತಮುತ್ತಲೂ ಜನ ಮೂಕವಿಸ್ಮಿತರಾಗಿ ಆಲಿಸುತ್ತಿದ್ದಾರೆ. ಪಕ್ಕದಲ್ಲೇ ಒಂದು ಪುಟ್ಟ ಹೆಣ್ಣುಮಗು ನೃತ್ಯದಲ್ಲಿ ಮೈಮರೆತಿದೆ. ಕಲೆಯ ಶಕ್ತಿಯೇ ಅಗಾಧ. ಯಾವ ಭಾಷೆ ದೇಶವನ್ನೂ ಬೆಸೆಯುವ ಮಹಾನ್ ದಿವ್ಯ. ಇದೀಗ ವೈರಲ್ ಆಗಿರುವ ಈ ವಿಡಿಯೋ ಅನ್ನು ಸುಮಾರು 4.1 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಕೋಕ್ ಸ್ಟುಡಿಯೋದ ಸೀಸನ್ 14ನ ಟ್ರ್ಯಾಕ್ ಈ ಪಸೂರಿ ಹಾಡು. ಪಾಕಿಸ್ತಾನಿ ಕಲಾವಿದರಾದ ಅಲಿ ಸೇಥಿ ಮತ್ತು ಶೇ ಗಿಲ್ ಹಾಡಿರುವ ಈ ಹಾಡು ಜಗತ್ತಿನ ಸಂಗೀತ ಪ್ರೇಮಿಗಳ ಮನಸೂರೆಗೊಂಡಿದೆ.
ಈ ಹಾಡಿನ ಸಾಹಿತ್ಯ, ಸಂಗೀತ ಕೇಳಿದವರ ಹೃನ್ಮನ ತುಂಬುವಲ್ಲಿ ಎರಡು ಮಾತಿಲ್ಲ. ಪಂಜಾಬಿ ಮತ್ತು ಉರ್ದು ಭಾಷೆಯನ್ನು ಆಧರಿಸಿದ ಸಾಹಿತ್ಯವನ್ನು ಕೇಳಿಯೇ ಅನುಭವಿಸಬೇಕು. ಹೀಗೆ ಈ ಹಾಡನ್ನು ಅಮೆರಿಕದ ಬೀದಿಯಲ್ಲಿ ನಿಂತು ವಯೋಲಿನ್ನಲ್ಲಿ ನುಡಿಸಿದ ಯುವ ಕಲಾವಿದೆಯ ಹೆಸರು ಕೆರೋಲಿನಾ ಪ್ರೊಟ್ಸೆಂಕೊ. ಇತ್ತೀಚೆಗೆ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ.
ಈ ಹಾಡಿನ ನುಡಿಸಾಣಿಕೆಗೆ ಅರಬ್ನ ಪುಟ್ಟ ಹೆಣ್ಣುಮಗು ನರ್ತಿಸಿದ್ದನ್ನು ವಿಡಿಯೋದಲ್ಲಿ ಗಮನಿಸಿರಬಹುದು. ‘ನನ್ನ ನುಡಿಸುವಿಕೆಗೆ ಈ ಪುಟ್ಟಹುಡುಗಿ ನರ್ತಿಸಿದ್ದು ನನಗೆ ಮತ್ತಷ್ಟು ಸ್ಫೂರ್ತಿ ತಂದಿದೆ’ ಎಂದಿದ್ದಾಳೆ ಕೆರೋಲಿನಾ. ಈಕೆಯ ಯೂಟ್ಯೂಬ್ ಚಾನೆಲ್ಗೆ 7.6 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರು ಇದ್ದಾರೆ. ಪ್ರತೀ ವಿಡಿಯೋಗಳನ್ನು ಲಕ್ಷಾಂತರ ಜನರು ವೀಕ್ಷಿಸುತ್ತಾರೆ. ಈಕೆ ‘ದಿ ಎಲೆನ್ ಷೋ’ನಲ್ಲಿ ಕೂಡ ವಯೋಲಿನ್ ಪ್ರದರ್ಶನ ನೀಡಿದ್ದಳು.
ಯಾವ ದೇಶದವರು ಎಲ್ಲಿ ನಿಂತು ನುಡಿಸಿದರೂ ಆ ಸಪ್ತಸ್ವರಗಳೇ. ಹೊಮ್ಮಿಸುವ ರಸಭಾವಗಳೂ ಅವೇ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:56 pm, Tue, 11 October 22