ಇತ್ತೀಚಿನ ದಿನಗಳ ಬಿಸಿಲ ಝಳಕ್ಕೆ ಮನುಷ್ಯರು ಮಾತ್ರವಲ್ಲದೆ, ಪ್ರಾಣಿ-ಪಕ್ಷಿಗಳೂ ಬಸವಳಿಯುತ್ತಿವೆ. ಮನುಷ್ಯರಾದ ನಾವು ಸಹಜವಾಗಿಯೇ ಸುಡು ಬಿಸಿಲಿಗೆ ದೇಹ ತಂಪು ಮಾಡಿಕೊಳ್ಳಲು ನೀರು, ಎಳನೀರು ಇತ್ಯಾದಿ ಆರೋಗ್ಯಕರ ಪಾನೀಯಗಳನ್ನು ಸೇವನೆ ಮಾಡುತ್ತೇವೆ. ಆದರೆ ಮೂಕ ಪ್ರಾಣಿ-ಪಕ್ಷಿಗಳು ಹೇಗೆ ಕೇಳಿಯಾವು? ಅದರಲ್ಲೂ ಈ ನಗರಗಳಲ್ಲಿ ಮೂಕ ಜೀವಿಗಳಿಗೆ ಆಹಾರವಿರಲಿ, ನೀರು ಸಿಗುವುದು ಕೂಡಾ ಕಷ್ಟವಾಗಿಬಿಟ್ಟಿದೆ. ನೀರು, ಆಹಾರಕ್ಕಾಗಿ ಅಲೆದಾಡುತ್ತಾ ಬಾನಲ್ಲಿ ಹಾರಾಡುವ ಹಕ್ಕಿಗಳಂತೂ ಬಿಸಿಲ ತಾಪಕ್ಕೆ ನೆಲಕ್ಕಪಳಿಸುತ್ತಿವೆ. ಕೆರೆ ಕಟ್ಟೆಗಳು ಬರಿದಾಗಿರುವುದರಿಂದ ಬೀಡಾಡಿ ಪ್ರಾಣಿಗಳಿಗೂ ನೀರು ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವುದು ನಮ್ಮ ನಿಮ್ಮೆಲ್ಲರ ಜವಬ್ದಾರಿಯೂ ಆಗಿದೆ. ಆದರೆ ಹೆಚ್ಚಿನವರು ಇದಕ್ಕೆ ಕ್ಯಾರೇ ಅನ್ನೋಲ್ಲ. ಇದನ್ನು ಮನಗಂಡು ನಮ್ಮ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯಾದ ಶಕ್ತಿ ಫೌಂಡೇಶನ್ ಮೂಕ ಜೀವಿಗಳಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಪ್ರಾಣಿ-ಪಕ್ಷಿಗಳ ದಾಹ ನೀಗಿಸಲು ಅಲ್ಲಲ್ಲಿ ಗೆರಟೆ ಮತ್ತು ಮಣ್ಣಿನ ಕುಂಡಗಳಲ್ಲಿ ನೀರು ತುಂಬಿಸಿಡುವ ಒಂದೊಳ್ಳೆ ಕಾರ್ಯವನ್ನು ಮಾಡಿದೆ.
ಈ ಕುರಿತ ವಿಡಿಯೋವೊಂದನ್ನು ಶಕ್ತಿ ಫೌಂಡೇಶನ್ (@shakti_foundation_official) ತನ್ನ ಅಧೀಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಪ್ರಾಣಿ ಪಕ್ಷಿಗಳ ದಾಹ ನೀಗಿಸಲು ನಮ್ಮ ತಂಡದಿಂದ ಒಂದು ಸಣ್ಣ ಪ್ರಯತ್ನ. ಬೇಸಿಗೆಯ ತಾಪಮಾನದಿಂದ ಪ್ರಾಣಿ ಪಕ್ಷಿಗಳನ್ನು ಬಸವಳಿಯಲು ಬಿಡಬೇಡಿ. ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿ ಚಿಕ್ಕ ಪಾತ್ರೆಗಳಲ್ಲಿ ನೀರನ್ನು ಇಡಿ” ಎಂಬ ಶೀರ್ಷಿಕೆಯನ್ನು ಬರೆದು, ಪ್ರಾಣಿ-ಪಕ್ಷಿಗಳ ದಾಹ ನೀಗಿಸುವುದು ನಮ್ಮೆಲ್ಲರ ಜವಬ್ದಾರಿ ಎಂಬುದನ್ನು ಹೇಳಿದೆ.
ವೈರಲ್ ವಿಡಿಯೋದಲ್ಲಿ ಶಕ್ತಿ ಫೌಂಡೇಶನ್ ಸಂಸ್ಥೆಯ ಯುವಕರು ಮಣ್ಣಿನ ಕುಂಡಗಳು, ತೆಂಗಿನ ಗೆರಟೆಗಳನ್ನು ಸ್ವಚ್ಛಗೊಳಿಸಿ ನಗರಗಳಲ್ಲಿ ಎಲ್ಲೆಲ್ಲಿ ಪಕ್ಷಿಗಳು ಹೆಚ್ಚಾಗಿವೆಯೋ ಆ ಸ್ಥಳಗಳಲ್ಲಿ ಮರದ ಮೇಲೆ ಗೆರಟೆಯನ್ನಿಟ್ಟು, ಹಾಗೂ ಅಲ್ಲಲ್ಲಿ ಮಣ್ಣಿನ ಕುಂಡವನ್ನಿಟ್ಟು ಅದರಲ್ಲಿ ನೀರು ತುಂಬಿಸಿಡುವ ಮೂಲಕ ಮೂಕ ಜೀವಿಗಳ ದಾಹ ನೀಗಿಸುವ ಸತ್ಕಾರ್ಯಕ್ಕೆ ಮುಂದಾಗಿರುವ ದೃಶ್ಯವನ್ನು ಕಾಣಬಹುದು. ಜೊತೆಗೆ ನಾವು ಕೂಡಾ ನಮ್ಮ ಮನೆಯ ಪಕ್ಕ-ಪಕ್ಕದಲ್ಲಿ, ಊರಿನ ಬೀದಿಗಳಲ್ಲಿ ಹೀಗೆ ಮೂಕ ಪ್ರಾಣಿಗಳಿಗಾಗಿ ನೀರನ್ನು ತುಂಬಿಸಿಡಬೇಕು ಎಂಬ ಪಾಠವನ್ನು ಕಲಿಸಿದೆ.
ಇದನ್ನೂ ಓದಿ: ಹೀರೋನಂತೆ ಎಮ್ಮೆಯ ಮೇಲೇರಿ ಸವಾರಿ ಹೊರಟ ಸುರ ಸುಂದರ; ವಿಡಿಯೋ ವೈರಲ್
ಒಂದು ವಾರಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 7 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಮಾನವೀಯತೆ ಅಂದ್ರೆ ಇದೇ ಅಲ್ಲವೇ! ನೀವು ಮಾಡುತ್ತಿರುವ ಪುಣ್ಯದ ಕೆಲಸಕ್ಕೆ ನಮ್ಮ ಬೆಂಬಲವೂ ಇದೇ ಇದೆ ಎನ್ನುತ್ತಾ ನೆಟ್ಟಿಗರು ಈ ಯುವಕರ ತಂಡದ ಒಂದೊಳ್ಳೆ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:01 am, Wed, 13 March 24