ಮದುವೆಯೆಂಬುದು ಎಲ್ಲರ ಜೀವನದ ಅತ್ಯಂತ ಮುಖ್ಯ ಘಟ್ಟ. ತಮ್ಮ ಮದುವೆಯ ಕ್ಷಣಗಳು ಸುಂದರವಾಗಿರಬೇಕು, ಮದುವೆಯಲ್ಲಿ ಚೆನ್ನಾಗಿ ಫೋಟೋಶೂಟ್ ಮಾಡಿಸಿಕೊಳ್ಳಬೇಕು, ಮದುವೆಯ ಡೆಕೋರೇಷನ್, ಊಟದ ಮೆನು ಹೀಗೇ ಇರಬೇಕು ಈ ರೀತಿ ಎಲ್ಲ ಗಂಡು-ಹೆಣ್ಣಿಗೂ ಸಾಕಷ್ಟು ಕನಸುಗಳಿರುತ್ತವೆ. ಮದುವೆಯಲ್ಲಿ ತಾವು ಚೆನ್ನಾಗಿ ಕಾಣಬೇಕೆಂದು ಲಕ್ಷಾಂತರ ರೂ. ಖರ್ಚು ಮಾಡಿ ಬೆಸ್ಟ್ ಫೋಟೋಗ್ರಾಫರ್, ವಿಡಿಯೋಗ್ರಾಫರನ್ನೇ ಆಯ್ಕೆ ಮಾಡಿಕೊಂಡಿರುತ್ತಾರೆ. ಆದರೆ, ಮದುವೆ ಮನೆಯಲ್ಲೇ ಫೋಟೋಗ್ರಾಫರ್ ಮದುಮಕ್ಕಳ ಎಲ್ಲ ಫೋಟೋಗಳನ್ನೂ ಡಿಲೀಟ್ ಮಾಡಿದರೆ ಹೇಗಿರುತ್ತದೆ? ಅಷ್ಟಕ್ಕೂ ಹೀಗಾಗಲು ಕಾರಣವೇನು ಎಂದು ನಿಮಗೆ ಗೊತ್ತಾದರೆ ಅಚ್ಚರಿಯಾಗುವುದು ಗ್ಯಾರಂಟಿ.
ಮದುವೆಯ ಫೋಟೋಶೂಟ್ಗೆಂದು ಬಂದಿದ್ದ ಫೋಟೋಗ್ರಾಫರ್ಗೆ ಮದುವೆ ಮನೆಯಲ್ಲಿ ಊಟ ನೀಡಲು ನಿರಾಕರಿಸಿದರು. ಇದರಿಂದ ಕೋಪಗೊಂಡ ಆತ ವರನ ಎದುರಲ್ಲೇ ಮದುವೆಯಲ್ಲಿ ತೆಗೆದಿದ್ದ ಎಲ್ಲ ಫೋಟೋಗಳನ್ನೂ ಡಿಲೀಟ್ ಮಾಡಿದ್ದಾರೆ. ಅದಕ್ಕೂ ವಿಚಿತ್ರವಾದ ವಿಷಯವೆಂದರೆ ಈ ಘಟನೆಯನ್ನು ರೆಡ್ಡಿಟ್ನಲ್ಲಿ ಬರೆದುಕೊಂಡಿರುವ ಆತ, ‘ನಾನು ನಿಜವಾಗಿಯೂ ಫೋಟೋಗ್ರಾಫರ್ ಅಲ್ಲ. ನಾನು ನಾಯಿ ಸಾಕುವವನು. ನಾನು ಸಾಕಿರುವ ನಾಯಿಗಳ ಸಾಕಷ್ಟು ಫೋಟೋಗಳನ್ನು ತೆಗೆದಿದ್ದೇನೆ. ಅದಕ್ಕೆಂದೇ ಕ್ಯಾಮೆರಾ ಖರೀದಿಸಿದ್ದೆ. ಆದರೆ. ನನ್ನ ಗೆಳೆಯ ತನ್ನ ಮದುವೆಯಲ್ಲಿ ಫೋಟೋಗ್ರಾಫರ್ಗೆ ನೀಡುವ ಹಣವನ್ನು ಉಳಿಸಲೆಂದು ನನ್ನ ಬಳಿ ಆತನ ಮದುವೆಯ ಫೋಟೋಸ್ ತೆಗೆಯಲು ಹೇಳಿದ್ದ. ಆ ಫೋಟೋಗಳು ಚೆನ್ನಾಗಿ ಬರದಿದ್ದರೂ ಪರವಾಗಿಲ್ಲ ಎಂದು ಹೇಳಿದ್ದ.’ ಎಂದು ಬರೆದುಕೊಂಡಿದ್ದಾರೆ.
ಗೆಳೆಯನ ಮದುವೆಯ ಫೋಟೋಶೂಟ್ಗೆಂದು ಆತ 300 ರೂ. ಪಡೆದಿದ್ದ. ಮದುವೆಯ ದಿನ ಬೆಳಗ್ಗೆ 11 ಗಂಟೆಯಿಂದ ಫೋಟೋಗಳನ್ನು ತೆಗೆಯಲು ಶುರು ಮಾಡಿದ ಆತ ಸಂಜೆ 7.30ರವರೆಗೂ ಫೋಟೋಗಳನ್ನು ತೆಗೆಯುತ್ತಲೇ ಇದ್ದ. ಸಂಜೆ 5 ಗಂಟೆ ವೇಳೆಗೆ ಎಲ್ಲರಿಗೂ ತಿಂಡಿ ನೀಡಲಾಗುತ್ತಿತ್ತು. ಮಧ್ಯಾಹ್ನ ಸರಿಯಾಗಿ ಊಟ ಮಾಡಲೂ ಆಗಿರಲಿಲ್ಲ. ಹೀಗಾಗಿ, ನನಗೂ ತಿಂಡಿ ಕೊಡಲು ಕೇಳಿದೆ. ಆದರೆ, ನಾನು ಫೋಟೋಗ್ರಾಫರ್ ಆಗಿದ್ದರಿಂದ ಫೋಟೋ ತೆಗೆಯುವುದನ್ನು ಬಿಟ್ಟು ತಿಂಡಿ ತಿನ್ನುವಂತಿಲ್ಲ ಎಂದು ಹೇಳಿದರು.
ಮೊದಲೇ ಹಸಿವಾಗಿದ್ದ ನನಗೆ ಈ ಮಾತಿನಿಂದ ಬಹಳ ಕೋಪ ಬಂದಿತು. ರಾತ್ರಿಯಾದರೂ ನನಗೆ ತಿಂಡಿ ಕೊಡಲೇ ಇಲ್ಲ. ಹೀಗಾಗಿ ಕೋಪದಿಂದ ನನ್ನ ಗೆಳೆಯನ ಎದುರೇ ಎಲ್ಲ ಫೋಟೋಗಳನ್ನೂ ಡಿಲೀಟ್ ಮಾಡಿ ಅಲ್ಲಿಂದ ಮನೆಗೆ ಬಂದೆ. ಗೆಳೆಯನಿಗಾಗಿ ಫೋಟೋಸ್ ತೆಗೆಯಲು ಹೋಗಿದ್ದ ನನಗೆ ಸಿಕ್ಕ ಮರ್ಯಾದೆ, ಉಪಚಾರ ನೋಡಿ ಬಹಳ ಬೇಸರವಾಯಿತು. ಅಷ್ಟೆಲ್ಲ ಕಷ್ಟಪಟ್ಟು ಫೋಟೋ ತೆಗೆಯುವ ಅಗತ್ಯವಿಲ್ಲವೆಂದು ಫೋಟೋಗಳನ್ನು ಡಿಲೀಟ್ ಮಾಡಿದೆ. ನನಗೆ ನೀರು ಕೊಡುವವರೂ ಯಾರೂ ಇರಲಿಲ್ಲ. ಮಧ್ಯಾಹ್ನವೂ ಒಂದೆರಡು ತುತ್ತು ತಿನ್ನಲು ಮಾತ್ರ ಸಮಯವಿತ್ತು ಎಂದು ಆತ ಬರೆದುಕೊಂಡಿದ್ದಾರೆ.
ತೀವ್ರವಾಗಿ ಹಸಿವಾಗಿದ್ದರಿಂದ ನಾನು ಗೆಳೆಯನ ಬಳಿ ಹೋಗಿ ನನಗೆ 20 ನಿಮಿಷ ಸಮಯ ಕೊಟ್ಟರೆ ಏನಾದರೂ ತಿಂದುಕೊಂಡು, ಕುಡಿದುಕೊಂಡು ಬರುತ್ತೇನೆ ಎಂದು ಹೇಳಿದೆ. ಆದರೆ ಅದಕ್ಕೆ ಒಪ್ಪದ ಆತ ನೀನು ಫೋಟೋಗ್ರಾಫರ್ ಆಗಿರುವುದಿದ್ದರೆ ಇರು, ನೆಂಟರ ರೀತಿ ತಿಂದುಂಡುಕೊಂಡು ಇರುವುದಾದರೆ ಒಂದು ಪೈಸೆ ಹಣವನ್ನೂ ಕೊಡುವುದಿಲ್ಲ ಎಂದು ಹೇಳಿದ. ಹೀಗಾಗಿ, ನಾನು ಫೋಟೋಗ್ರಾಫರ್ ಆಗಿರಲು ಸಿದ್ಧನಿಲ್ಲ. ಇಡೀ ದಿನವನ್ನು ವೇಸ್ಟ್ ಮಾಡಿದ್ದೇನೆ. ಇನ್ನು ಈ ಫೋಟೋಗಳನ್ನು ಕೂಡ ನಿನಗೆ ಕೊಡುವುದಿಲ್ಲ. ನನಗೆ ಕುಡಿಯಲು ನೀರು, ತಿಂಡಿ, ಕುಳಿತುಕೊಳ್ಳಲು ಜಾಗವೂ ಇಲ್ಲದೆ 300 ರೂ.ಗೆ ಕಷ್ಟಪಡಬೇಕಾದ ಅನಿವಾರ್ಯತೆ ನನಗಿರಲಿಲ್ಲ ಎಂದು ಆತ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಫೋಟೋಗ್ರಾಫರ್ ಮಾಡಿದ ರೀತಿ ಸರಿಯಾಗಿದೆ ಎಂದಿದ್ದಾರೆ. ಊಟ, ತಿಂಡಿಯನ್ನೂ ಕೊಡದೆ ಮನುಷ್ಯರನ್ನು ನಡೆಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಅವರಿಗಿಂತಲೂ ನಾಯಿಗಳೇ ನಿಯತ್ತಾಗಿರುತ್ತವೆ. ನೀವು ಮಾಡಿರುವುದು ಸರಿಯಾಗೇ ಇದೆ ಎಂದು ಹಲವು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Viral News: ಅಕ್ಕನ ಸಮಾಧಿ ಬಿಟ್ಟು ಕದಲದ ಬೆಕ್ಕು; ಮನ ಕಲಕುವ ವಿಡಿಯೋ ವೈರಲ್
Shocking News: ಆಪರೇಷನ್ ವೇಳೆ ಅತ್ತಿದ್ದಕ್ಕೆ ಹೆಚ್ಚುವರಿ ಬಿಲ್; ಅಳೋದೂ ತಪ್ಪಾ? ಎಂದ ಮಹಿಳೆ