ಮದ್ವೆಯಾಗದಿದ್ರೆ ನಷ್ಟಕ್ಕಿಂತ ಲಾಭವೇ ಹೆಚ್ಚಂತೆ, ವೈರಲ್ ಆಯ್ತು ಮಹಿಳೆಯ ಪೋಸ್ಟ್
ಮದುವೆ ಎನ್ನುವುದು ಹೆಣ್ಣಿನ ಜೀವನದಲ್ಲಿ ತಿರುವಿನ ಘಟ್ಟ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಆಕೆಯ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಎಲ್ಲವನ್ನು ಒಪ್ಪಿಕೊಂಡು ಹೊಂದಿಕೊಂಡು ಬದುಕಬೇಕಾಗುತ್ತದೆ. ಹಾಗೆಯೇ ಜವಾಬ್ದಾರಿಯೂ ಹೆಚ್ಚಾಗುತ್ತದೆ. ಇದೀಗ ಮಹಿಳೆಯೊಬ್ಬರು ಮದುವೆಯ ಬಳಿಕ ಹೆಣ್ಣಿಗೆ ಎಷ್ಟೆಲ್ಲಾ ಕಷ್ಟಗಳು ಇವೆ ಹಾಗೂ ಮದುವೆಯಾದರೆ ಆಗುವ ಪ್ರಯೋಜನಗಳ ಬಗ್ಗೆ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಈ ಮಹಿಳೆಯ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ.

ಮದುವೆ (marriage) ಎರಡು ಕುಟುಂಬದ ಬೆಸುಗೆ ಎರಡು ಮನಸ್ಸುಗಳ ಮಿಲನ. ಅದೇ ರೀತಿ ಹೆಣ್ಣಿನ ಜೀವನದ ಪ್ರಮುಖ ಘಟ್ಟ ಕೂಡ ಆಗಿದೆ. ಹೊಸ ಮನೆ, ಹೊಸ ಜನರು, ಹೊಸ ಜೀವನಕ್ಕೆ ಹೊಂದಿಕೊಂಡು ಅದರಲ್ಲೇ ಖುಷಿ ಕಾಣಬೇಕಾಗುತ್ತದೆ. ದಿನ ಕಳೆದಂತೆ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಹೀಗಾದಾಗ ಯಾಕಾದ್ರೂ ಮದುವೆಯಾದೆ ಎನ್ನುವ ಒಂದೇ ಒಂದು ಯೋಚನೆ ಆ ಕ್ಷಣಕ್ಕೆ ಬಂದು ಹೋಗದೇ ಇರದು. ಆದರೆ ಇದೀಗ ಮಹಿಳೆಯೊಬ್ಬರು ಮದುವೆಯಾಗದೇ ಇದ್ದರೆ ಏನೆಲ್ಲಾ ಲಾಭಗಳಿವೆ, ಮದುವೆಯಾದರೆ ಏನೆಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗಬೇಕೆಂದು ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದು, ಆನ್ಲೈನ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕುವಂತೆ ಮಾಡಿದೆ.
Asksindianwomen ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಮಹಿಳೆಯೊಬ್ಬರು ಪೋಸ್ಟ್ ಮಾಡಿದ್ದು, ಅವಿವಾಹಿತ ಮಹಿಳೆಯರ ಪ್ರಯೋಜನಗಳನ್ನು ಪಟ್ಟಿಮಾಡಿದ್ದಾರೆ. ಈ ಪೋಸ್ಟ್ ನಲ್ಲಿ, ನಾನು ಸಂಪಾದಿಸುತ್ತಿದ್ದೇನೆ ಎಂದು ಭಾವಿಸೋಣ. ನಾನು ಅವಿವಾಹಿತಳಾಗಿ ಇದ್ದರೆ ನನ್ನ ತಾಯಿ ಮಾಡಿದ ಒಂದು ಕಪ್ ಕಾಫಿಯೊಂದಿಗೆ ನನ್ನ ದಿನ ಆರಂಭವಾಗುತ್ತದೆ. ತಿಂಡಿ ತಿಂದು ರೆಡಿಯಾಗುತ್ತೇನೆ. ದಿನವಿಡೀ ಆಫೀಸಿನ ಕೆಲಸ ಮಾಡಿ ನಂತರದಲ್ಲಿ ವಿಶ್ರಾಂತಿ ಪಡೆಯುತ್ತೇನೆ. ಇನ್ನು ಮದುವೆಯಾದರೆ ಅಡುಗೆ, ಬಟ್ಟೆ ತೊಳೆಯುವುದು ಎಲ್ಲಾ ಹೊರೆಯೂ ತಲೆ ಮೇಲೆ ಬೀಳುತ್ತದೆ. ತನಗಾಗಿ ಮಾತ್ರ ತನ್ನ ಕುಟುಂಬದವರ ಕೆಲಸವನ್ನು ತಾನೇ ಮಾಡಬೇಕಾಗುತ್ತದೆ.
ಇದನ್ನೂ ಓದಿ : Fact Check: ಇಂಡೋನೇಷ್ಯಾ ಬಾಲಿಯಲ್ಲಿ ನೀರೊಳಗೆ ವಿಷ್ಣುವಿನ ದೇವಾಲಯ ಪತ್ತೆ?: ಸುಳ್ಳು, ಇದು AI ವಿಡಿಯೋ
ಒಂದು ವೇಳೆ ನೀವೇನಾದ್ರೂ ಸಂಪಾದಿಸುತ್ತೀರಿ ಅಂತಾದ್ರೆ ಮನೆ ಕೆಲಸದಾಕೆಯನ್ನು ನೇಮಿಸಿಕೊಳ್ಳಬಹುದು. ಅದು ನನ್ನ ಸಂಬಳದಿಂದಲೂ ಸಾಧ್ಯವಿದೆ. ಮದುವೆಯಾದ್ರೆ ಹುಡುಗನ ಕುಟುಂಬವು ನನ್ನನ್ನು ಮನೆ ಕೆಲಸಕ್ಕಾಗಿ ಸಂಪೂರ್ಣವಾಗಿ ಬಳಸಿಕೊಳ್ಳುತ್ತಾರೆ. ನಾನು ಮಾಡುವ ಕೆಲಸಕ್ಕೆ ಯಾವುದೇ ಸಂಬಳವಿರುವುದಿಲ್ಲ. ನನ್ನನ್ನು ಯಾವುದೇ ಸಂಬಳವಿಲ್ಲದೇ ಸೇವಕಿಯಾಗಿ ನೇಮಿಸಿಕೊಳ್ಳಲಾಗುತ್ತದೆ. ಇದರಿಂದ ನನಗೇನು ಪ್ರಯೋಜನ ಎಂದು ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
ಈ ಪೋಸ್ಟ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದು ಈ ಮಹಿಳೆಯ ಮಾತನ್ನು ಒಪ್ಪಿಕೊಂಡಿದ್ದಾರೆ. ಬಳಕೆದಾರರೊಬ್ಬರು, ನೀವು ಹೇಳುವುದು ಸರಿಯೇ , ಆದರೆ ನಿಮ್ಮೆಲ್ಲ ಮಾತನ್ನು ನಿಮ್ಮ ಹೆತ್ತವರು ಒಪ್ಪಬೇಕಲ್ಲವೇ ಎಂದಿದ್ದಾರೆ. ಮತ್ತೊಬ್ಬರು, ಮದುವೆಯಾದ ಬಳಿಕ ನೀವು ನಿಮ್ಮ ಸಂಗಾತಿಯೊಂದಿಗೆ ಪ್ರತ್ಯೇಕ ಮನೆಯಲ್ಲಿ ವಾಸಮಾಡಿ. ಇಬ್ಬರೂ ಉದ್ಯೋಗದಲ್ಲಿರುತ್ತೀರಿ, ಮನೆ ಕೆಲಸವನ್ನು ಇಬ್ಬರೂ ಸಮಾನವಾಗಿ ಹಂಚಿಕೊಳ್ಳಿ, ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಉತ್ತರ ಸಿಕ್ಕಿದಂತೆ ಆಯಿತು ಅಂದುಕೊಂಡಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವು, ನಿಮ್ಮ ಸಂಗಾತಿ ಹಾಗೂ ಆ ವ್ಯಕ್ತಿಯ ಕುಟುಂಬದವರು ಹೇಗೆ ಎನ್ನುವುದರ ಮೇಲೆ ನಿಂತಿರುತ್ತದೆ ಎಂದಿದ್ದಾರೆ. ಇನ್ನೊರ್ವ ಬಳಕೆದಾರರು, ಲೆಕ್ಕಾಚಾರವಿರಬೇಕು, ಆದರೆ ಯಾವುದು ಕೂಡ ಅತಿಯಾಗಬಾರದು ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ