7 ವರ್ಷದ ಈ ಪೋರಿಗೆ ದೀಪಾವಳಿಗೆ ಬಂದ ಹಣವನ್ನು ಮ್ಯೂಚುವಲ್ ಫಂಡ್ನಲ್ಲಿ ತೊಡಗಿಸುವ ಆಶಯ
Mutual Fund : ‘ಈ ಹಣವನ್ನು 10 ವರ್ಷಗಳವರೆಗೆ ಹೂಡಿಕೆ ಮಾಡಲಿದ್ದೇನೆ. ಆದರೆ ಮ್ಯೂಚುವಲ್ ಫಂಡ್ ಯಾವಾಗಲೂ ಲಾಭ ತಂದುಕೊಡುತ್ತದೆ ಎಂದು ಹೇಳಲಾಗದು, ಕೆಲವೊಮ್ಮೆ ನಷ್ಟವೂ ಸಂಭವಿಸುತ್ತಿರುತ್ತದೆ’ ಎಂದಿದ್ದಾಳೆ ಬಾಲೆ.
Viral Video : ಐದಾರು ವಯಸ್ಸಿಗೆ ಬರುತ್ತಿದ್ದಂತೆ ನಿಮ್ಮ ಮನೆಗಳಲ್ಲಿ ಪುಟ್ಟ ಕುಡಿಕೆಯನ್ನು ಕೊಟ್ಟು ಇದರಲ್ಲಿ ನೀನು ಹಣವನ್ನು ಕೂಡಿಡು ಎಂದು ಕೊಟ್ಟಿದ್ದು ನಿಮಗೆ ನೆನಪಿರಬಹುದು. ಈಗಿನ ಮಕ್ಕಳ ಭಾಷೆಯಲ್ಲಿ ಹೇಳಬೇಕೆಂದರೆ ಪಿಗ್ಗಿ ಬ್ಯಾಂಕ್. ಹೀಗೆ ಹಣ ಕೂಡಿಟ್ಟ ಮಕ್ಕಳ ಆಸೆ ಸಾಮಾನ್ಯವಾಗಿ ಚಾಕೋಲೇಟ್, ಬಟ್ಟೆ, ಪುಸ್ತಕ ಇತ್ಯಾದಿ ವಸ್ತುಗಳನ್ನು ಖರೀದಿಸುವತ್ತ ಇರುತ್ತದೆ. ಆದರೆ ಇದೀಗ ವೈರಲ್ ಆಗುತ್ತಿರುವ ಈ 7ರ ಬಾಲೆಯ ಬಳಿಯೂ ಒಂದಿಷ್ಟು ಉಳಿತಾಯದ ಹಣವಿದೆ. ಆದರೆ ಆಕೆಗೆ ಈ ಹಣವನ್ನು ಮ್ಯೂಚುವಲ್ ಫಂಡ್ಗಳಲ್ಲಿ ತೊಡಗಿಸುವುದಾಗಿ ಅಭಿಲಾಶೆ ವ್ಯಕ್ತಪಡಿಸಿದ್ದಾಳೆ. ನೋಡಿ ಈ ವೈರಲ್ ವಿಡಿಯೋ.
What my daughter intends to do with her Diwali Shagun envelops? pic.twitter.com/Edwg81ZUPH
— Swati Dugar (@SwatiDugar_) October 25, 2022
ಪೇಟಿಎಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ್ ಶೇಖರ್ ಶರ್ಮಾ ಈ ಟ್ವೀಟ್ ಅನ್ನು ಮರುಟ್ವೀಟ್ ಮಾಡಿ, ಇತ್ತೀಚಿನ ದಿನಗಳಲ್ಲಿ ವಿನಾಕಾರಣ ಖರ್ಚನ್ನು ಕಡಿಮೆ ಮಾಡಿ, ಉಳಿತಾಯದ ಹಣವನ್ನು ಮ್ಯೂಚುವಲ್ ಫಂಡ್ಗಳಲ್ಲಿ ತೊಡಗಿಸಲು ಜನರು ಆಸಕ್ತಿ ವಹಿಸುತ್ತಿದ್ದಾರೆ. ಈ ವಿಡಿಯೋ ನೋಡಿ, ಇಲ್ಲಿರುವ 7 ವರ್ಷದ ಮಗುವಿಗೂ ಇದೆಲ್ಲ ಅರ್ಥವಾಗುತ್ತಿದೆ ಎಂದಿದ್ದಾರೆ.
ಈ ಮೂಲ ವಿಡಿಯೋ ಹಂಚಿಕೊಂಡಿದ್ದು ಸ್ವಾತಿ ಡುಗಾರ್ ಎಂಬ ಟ್ವಿಟರ್ ಖಾತೆದಾರರು. ಸ್ವಾತಿಯವರ ಮಗಳೇ ಈ ಪೋರಿ. ದೀಪಾವಳಿಯಂದು ಅವಳಿಗೆ ಉಡುಗೊರೆ ರೂಪದಲ್ಲಿ ಬಂದ ಹಣದ ಬಗ್ಗೆ ಯೋಚಿಸಿದ ಈಕೆ ಈ ಹಣವನ್ನು ಉಳಿತಾಯ ಮಾಡಿ ಮ್ಯೂಚುವಲ್ ಫಂಡ್ನಲ್ಲಿ ತೊಡಗಿಸಬೇಕು ಎಂದು ಹೇಳಿದ್ದಾಳೆ. ಅಷ್ಟೇ ಅಲ್ಲ ಅದಕ್ಕೆ ಕಾರಣವನ್ನೂ ವಿವರಿಸಿದ್ದಾಳೆ. ಈ ಹಣವನ್ನು 10 ವರ್ಷಗಳವರೆಗೆ ಹೂಡಿಕೆ ಮಾಡಲಿದ್ದೇನೆ ಎಂದೂ ಹೇಳಿದ್ದಾಳೆ. ಆದರೆ ಮ್ಯೂಚುವಲ್ ಫಂಡ್ ಯಾವಾಗಲೂ ಲಾಭ ತಂದುಕೊಡುತ್ತದೆ ಎಂದು ಹೇಳಲಾಗದು, ಕೆಲವೊಮ್ಮೆ ನಷ್ಟವೂ ಸಂಭವಿಸುತ್ತಿರುತ್ತದೆ ಎಂದಿರುವ ಈಕೆಗೆ ಈ ಬಗ್ಗೆ ಅರಿವು ಚೆನ್ನಾಗಿಯೇ ಇದೆ.
ನೆಟ್ಟಿಗರು ಈಕೆಯ ಆರ್ಥಿಕ ತಿಳಿವಳಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ನಾನು ಒಂದನೇ ಕ್ಲಾಸಿನಲ್ಲಿದ್ಧಾಗಲೇ ಮ್ಯೂಚುವಲ್ ಫಂಡ್ ಮಾಡಿದ್ದೆ. ಅದನ್ನು ಈ ವಿಡಿಯೋ ನೆನಪಿಸುತ್ತಿದೆ’ ಎಂದಿದ್ದಾರೆ ಒಬ್ಬರು.
ನೀವೂ ಇದೀಗ ಮ್ಯೂಚುವಲ್ ಫಂಡ್ ಬಗ್ಗೆ ಆಲೋಚಿಸುತ್ತಿದ್ದೀರಾ? ನೋಡಿ ಮತ್ತೆ ಈ ಬಾಲೆಯ ಸಲಹೆ ಕೇಳುತ್ತೀರೋ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:17 pm, Wed, 26 October 22