ವಿಶೇಷವಾಗಿ ಮಳೆಯ ಸಂದರ್ಭದಲ್ಲಿ ವಾಹನ ಚಲಾಯಿಸುವಾಗ ಪ್ರತಿಯೊಂದು ಸಣ್ಣ ವಿಷಯಕ್ಕೂ ವಿಶೇಷ ಗಮನ ನೀಡಬೇಕಾಗುತ್ತದೆ. ಏಕೆಂದ್ರೆ ಮಳೆಯಿಂದಾಗಿ ರಸ್ತೆ ಗುಂಡಿ, ಗೋಚರದ ಕೊರತೆ, ಜಾರು ಮೇಲ್ಮೈಗಳ ಕಾರಣದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸುತ್ತವೆ. ಇದೇ ಕಾರಣಕ್ಕೆ ಮಳೆಯ ಸಂದರ್ಭಗಳಲ್ಲಿ ರಸ್ತೆಗಳಲ್ಲಿ ನಿಧಾನವಾಗಿ ವಾಹನಗಳನ್ನು ಚಲಾಯಿಸಬೇಕು ಹಾಗೂ ವಾಹನ ಚಲಾಯಿಸುವಾಗ ಬಹಳ ಜಾಗರೂಕರಾಗಿರಬೇಕು. ಇದೇ ರೀತಿ ಮೊನ್ನೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾದ ದಿಢೀರ್ ಮಳೆಯಿಂದಾಗಿ ಕೊಡಗಿನ ಬೋಯಿಕೇರಿ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದಂತಹ ಮಾರುತಿ 800 ಕಾರು ಸ್ಕಿಡ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ನೇರವಾಗಿ ಪಕ್ಕದ ಸಣ್ಣ ಕಂದಕಕ್ಕೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
@kodaguConnect ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಮೊನ್ನೆ ಸುರಿದ ದಿಢೀರ್ ಮಳೆಯಿಂದಾಗಿ ಕೊಡಗಿನ ಬೋಯಿಕೇರಿ ತಿರುವಿನ ರಸ್ತೆಯಲ್ಲಿ ವಾಹನಗಳು ನಿಧಾನಕ್ಕೆ ಹೋಗುತ್ತಿದ್ದ ವೇಳೆಯಲ್ಲಿ ಮುಂದೆಯಿಂದ ವೇಗವಾಗಿ ಬಂದಂತಹ ಮಾರುತಿ 800 ಕಾರು ಸ್ಕಿಡ್ ಆಗಿ, ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಕ್ಕದ ಸಣ್ಣ ಕಂದಕ್ಕೆ ಹೋಗಿ ಬೀಳುವಂತಹ ಭೀಕರ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ನಮ್ಮ ಕೊಡಗು ಪ್ರವಾಸಿ ತಾಣವೇ ಹೊರತು, ಕಸದ ತೊಟ್ಟಿಯಲ್ಲ, ಪ್ರವಾಸಿಗರಿಗೆ ಚಳಿ ಬಿಡಿಸಿದ ಯುವಕ
Unintentional drifting during unseasonal rains.
At Boikeri. pic.twitter.com/692oSWNwg0
— Kodagu Connect (@KodaguConnect) January 4, 2024
ಜನವರಿ 04 ರಂದು ಹಂಚಿಕೊಳ್ಳಲಾದ ಈ ವಿಡಿಯೋಗೆ ಹಲವಾರು ಕಮೆಂಟ್ಸ್ಗಳು ಹರಿದು ಬಂದಿವೆ. ಒಬ್ಬ ಬಳಕೆದಾರರು ʼವಾಹನವನ್ನು ವೇಗವಾಗಿ ಚಲಾಯಿಸಿದ ಪರಿಣಾಮ ಕಾರು ಸ್ಕಿಡ್ ಆಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂತಹ ತಿರುವಿನ ಪ್ರದೇಶಗಳಲ್ಲಿ ನಿಧಾನವಾಗಿ ಬಹಳ ಜಾಗರೂಕತೆಯಿಂದ ವಾಹನ ಚಲಾಯಿಸಿʼ ಎಂದು ಸಲಹೆ ನೀಡಿದ್ದಾರೆ. ಇನ್ನೂ ಅನೇಕರು ಮಳೆಯ ಸಂದರ್ಭದಲ್ಲಿ ಇಷ್ಟು ವೇಗವಾಗಿ ವಾಹನ ಚಲಾಯಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ