Viral Video: ಪ್ರವಾಸಿ ತಾಣದ ನಡುರಸ್ತೆಯೊಂದರಲ್ಲಿ ಮಂಗಗಳ ಗ್ಯಾಂಗ್ ವಾರ್; ಆಹಾರದ ಕೊರತೆ ಕಾರಣವಿರಬಹುದೆಂದ ತಜ್ಞರು!

Viral Video: ಪ್ರವಾಸಿ ತಾಣದ ನಡುರಸ್ತೆಯೊಂದರಲ್ಲಿ ಮಂಗಗಳ ಗ್ಯಾಂಗ್ ವಾರ್; ಆಹಾರದ ಕೊರತೆ ಕಾರಣವಿರಬಹುದೆಂದ ತಜ್ಞರು!
ಫೇಸ್​ಬುಕ್​ನಲ್ಲಿ ಪ್ರತ್ಯಕ್ಷದರ್ಶಿ ಹಂಚಿಕೊಂಡಿರುವ ಚಿತ್ರ (Credits: Wisrut Suwanphak/ facebook)

Thailand: ಬಹುತೇಕ ಜನರು ಚಲನಚಿತ್ರಗಳಲ್ಲಿ ಗ್ಯಾಂಗ್ ವಾರ್​ಗಳನ್ನು ನೋಡಿರುತ್ತೀರಿ. ಆದರೆ ನಿಜ ಜೀವನದಲ್ಲಿ ಗ್ಯಾಂಗ್ ವಾರ್ ರಸ್ತೆ ಮಧ್ಯೆಯೇ ನಡೆದರೆ ಹೇಗಿರಬಹುದು? ಅದೂ ಸಹ ಪ್ರಾಣಿಗಳ ನಡುವೆ! ದುರಂತವೆಂದರೆ ತಜ್ಞರು ಹೇಳುವ ಪ್ರಕಾರ ಈ ಘಟನೆ ನಡೆದಿರುವುದು ಆಹಾರದ ಸಮಸ್ಯೆಯ ಕಾರಣಕ್ಕಾಗಿರಬಹುದು ಎಂದು... ಸಂಪೂರ್ಣ ಘಟನೆಯ ವಿವರ ಇಲ್ಲಿದೆ; ಮುಂದೆ ಓದಿ.

TV9kannada Web Team

| Edited By: shivaprasad.hs

Jul 29, 2021 | 7:06 PM


ಥೈಲ್ಯಾಂಡ್​​ನಲ್ಲಿ ರಸ್ತೆ ಮಧ್ಯೆಯೇ ಗ್ಯಾಂಗ್​ವಾರ್ ನಡೆದಿದೆ. ಆದರೆ ಇದು ಮನುಷ್ಯ- ಮನುಷ್ಯರ ನಡುವೆ ಅಲ್ಲ. ಬದಲಾಗಿ ನೂರಾರು ಮಂಗಗಳ ನಡುವೆ. ಮಂಗಗಳ ಈ ಭಯಂಕರ ಗ್ಯಾಂಗ್ ವಾರ್​ನಿಂದಾಗಿ ಟ್ರಾಫಿಕ್ ಜಾಮ್ ಸಹ ಆಗಿದೆ. ಇದರ ವಿಡಿಯೊ ಈಗ ವೈರಲ್ ಆಗಿದ್ದು ನೆಟ್ಟಿಗರು ಮಂಗಗಳ ವಾರ್​ಗೆ ಹುಬ್ಬೇರಿಸಿದ್ದಾರೆ. ಈ ಘಟನೆಯನ್ನು ವಿಸ್ರುತ್ ಸುವನ್​ಫಾಕ್(Wisrut Suwanphak) ಎಂಬುವವರು ವಿಡಿಯೊದಲ್ಲಿ ಸೆರೆಹಿಡಿದು ಫೇಸ್​ಬುಕ್​ನಲ್ಲಿ ಹಂಚಿಕೊಂಡಿರುವುದರಿಂದ ಬೆಳಕಿಗೆ ಬಂದಿದೆ. ಈ ಘಟನೆ ಲೋಪ್​ಬುರಿಯ(Lopburi) ಪ್ರಾಂಗ್ ಸಮ್ ಯೋಟ್(Prang Sam Yot)​ ಸಮೀಪ ನಡೆದಿರಬಹುದು ಎಂದು ಹೇಳಲಾಗುತ್ತಿದ್ದು, ಈ ಸ್ಥಳವು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇದರ ಸಮೀಪವೇ ನೂರಾರು ಮಂಗಗಳು ಆಶ್ರಯ ಪಡೆದಿವೆ ಹಾಗೂ ಆಹಾರಕ್ಕಾಗಿ ಪ್ರವಾಸಿಗರನ್ನೇ ಆಶ್ರಯಿಸಿವೆ. ಆದರೆ ಕೊರೊನಾ ಕಾರಣದಿಂದಾಗಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದು, ಮಂಗಗಳಿಗೆ ಆಹಾರದ ಸಮಸ್ಯೆ ಉಂಟಾಗಿರಬಹುದು. ಅದರಿಂದಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ವಿಡಿಯೊದಲ್ಲಿ ಕಾಣುತ್ತಿರುವ ಪ್ರಕಾರ ಎರಡು ಗುಂಪಿನ ಸಾವಿರಾರು ಮಂಗಗಳು ರಸ್ತೆಯ ಜಂಕ್ಷನ್​ ಒಂದರಲ್ಲಿ ಪರಸ್ಪರ ಜಗಳ ಕಾಯುತ್ತಿವೆ. ಕೆಲವು ಬೈಕ್ ಸವಾರರು ಹಾಗೂ ಕಾರು ಸವಾರರು ಗಾಡಿಯನ್ನು ಮಧ್ಯೆ ನಿಲ್ಲಿಸಿ ತಮ್ಮ ವಾಹನದಿಂದ ಮಂಗಗಳನ್ನು ದೂರ ಕಳುಹಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಮಂಗಗಳಿರುವುದರಿಂದ ಯಾರಿಗೂ ವಾಹನದಿಂದ ಇಳಿದು ಬಂದು ಅವುಗಳನ್ನು ಬೆದರಿಸಲು ಧೈರ್ಯವಾಗಲಿಲ್ಲ.

ಫೇಸ್​ಬುಕ್​ನಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್:

ವಿಡಿಯೊ ಸೆರೆ ಹಿಡಿದ ವ್ಯಕ್ತಿ ಸ್ಥಳೀಯ ಮಾಧ್ಯಮಕ್ಕೆ ನೀಡಿರುವ ಮಾಹಿತಿಯ ಪ್ರಕಾರ, ಆ ಪ್ರದೇಶದಲ್ಲಿ ಮಂಗಗಳ ಗಲಾಟೆಗಳು ಸಾಮಾನ್ಯ. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಂಗಗಳು ಕಿತ್ತಾಡಲು ತೊಡಗಿರುವುದನ್ನು ನೋಡಿರುವುದು ಇದೇ ಮೊದಲು ಎಂದಿದ್ದಾರೆ. ಆದ್ದರಿಂದಲೇ ಈ ಘಟನೆಯನ್ನು ಗ್ಯಾಂಗ್ ವಾರ್​ಗೆ ಹೋಲಿಸಿದ್ದಾಗಿ ಅವರು ತಿಳಿಸಿದ್ದಾರೆ. ಇಂತಹ ಘಟನೆ ನಡೆಯುವಾಗ ಅವುಗಳನ್ನು ತಡೆಯುವುದೂ ಅಸಾಧ್ಯ ಎಂದಿರುವ ಅವರು, ವಾಹನಗಳ ಶಬ್ಧಗಳು ಅವುಗಳನ್ನು ಮತ್ತಷ್ಟು ಕೆರಳಿಸಬಹುದೇ ವಿನಃ ಚದುರಿಸಲಾಗದು ಎಂದಿದ್ದಾರೆ. ಈ ಘಟನೆಯ ಪರಿಣಾಮವನ್ನು ವಿವರಿಸಿರುವ ಪ್ರತ್ಯಕ್ಷದರ್ಶಿ, ಮಂಗಗಳ ಗಲಾಟೆಯಿಂದಾಗಿ ಹಲವಾರು ಮಂಗಗಳಿಗೆ ಗಾಯಗಳಾಗಿದ್ದು, ರಸ್ತೆಯಲ್ಲಿ ರಕ್ತ ಚೆಲ್ಲಿತ್ತು ಎಂದಿದ್ದಾರೆ.

ರಾಷ್ಟ್ರೀಯ ಉದ್ಯಾನವನಗಳ ವಕ್ತಾರರೊಬ್ಬರು ಸ್ಥಳೀಯ ಮಾಧ್ಯಮಕ್ಕೆ ನೀಡಿರುವ ಮಾಹಿತಿಯಂತೆ, ಲೋಪ್​ಬುರಿಯಲ್ಲಿ(Lopburi) ಇತ್ತೀಚೆಗೆ ಮಂಗಗಳ ಘರ್ಷಣೆ ವರದಿಯಾಗುತ್ತಿವೆ. ಇದು ಅಪರೂಪವೇನಲ್ಲ. ಎರಡು ಗುಂಪುಗಳ ನಡುವೆ ಅಧಿಕಾರಕ್ಕಾಗಿ, ಆಹಾರಕ್ಕಾಗಿ ಅಥವಾ ಸಂತಾನೋತ್ಪತ್ತಿಯ ಕಾರಣದಿಂದಾಗಿ ಇಂತಹ ಘಟನೆಗಳು ಸಂಭವಿಸುತ್ತವೆ ಎಂದು ಅವರು ತಿಳಿಸಿದ್ದಾರೆ.

ಗಲಾಟೆಯ ಮತ್ತೊಂದು ವಿಡಿಯೊ ಇಲ್ಲಿದೆ:

ಇಂತಹ ಘಟನೆ ಥೈಲ್ಯಾಂಡ್​ನಲ್ಲಿ ವರದಿಯಾಗುತ್ತಿರುವುದು ಇದೇ ಮೊದಲೇನಲ್ಲ. 2020ರ ಪ್ರಾರಂಭದಲ್ಲೂ ಇಂತಹ ಘಟನೆ ವರದಿಯಾದಾಗ, ಅದರ ಕುರಿತ ಸುದ್ದಿಗಳು ಮುಖ್ಯ ಮಾಧ್ಯಮದಲ್ಲಿ ಬಹಳಷ್ಟು ಚರ್ಚೆಯನ್ನು ಹುಟ್ಟುಹಾಕಿದ್ದವು. ಕರೊನಾ ಸಾಂಕ್ರಾಮಿಕದ ಕಾರಣ ಅವುಗಳಿಗೆ ಆಹಾರ ಪೂರೈಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂಬ ವಾದ ಒಂದೆಡೆಯಿಂದ ಕೇಳಿ ಬಂದಿದ್ದರೆ, ಪ್ರವಾಸೋದ್ಯಮ ಮಂಗಗಳ ಮೂಲ ಸ್ವಭಾವವನ್ನೇ ನಾಶಗೊಳಿಸಿವೆ. ಆಹಾರಕ್ಕಾಗಿ ಮಂಗಗಳು ಮನುಷ್ಯರನ್ನು ಆಶ್ರಯಿಸುವುದು ಒಳ್ಳೆಯ ಬೆಳವಣಿಗೆಯಲ್ಲ ಎಂಬ ಮತ್ತೊಂದು ವಾದ ಕೇಳಿ ಬಂದಿತ್ತು. ಈಗ ಕೊರೊನಾ ಎರಡನೇ ಅಲೆಯ ಕಾರಣದಿಂದಾಗಿ ಒಂದು ವರ್ಷದ ನಂತರ ಪರಿಸ್ಥಿತಿ ಮರುಕಳಿಸಿದೆ. ಥೈಲ್ಯಾಂಡ್ ಸರ್ಕಾರ ಈ ಘಟನೆಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: Video: ಕಾಲಿನ ಸ್ವಾಧೀನ ಕಳೆದುಕೊಂಡ ಮಗ ‘ಅಪ್ಪಾ, ನಾನೂ ಎಲ್ಲರಂತೆ ನಡೆಯಬೇಕು…’ ಎಂದಾಗ ಇಂಜಿನಿಯರ್ ತಂದೆ ಮಾಡಿದ್ದೇನು?

ಇದನ್ನೂ ಓದಿ: ಕೃಷ್ಣಮೃಗಗಳ ಹಿಂಡು ಪಾರ್ಕಿನಲ್ಲಿ ಜಿಗಿಯುತ್ತಾ ರಸ್ತೆ ದಾಟುವ ದೃಶ್ಯ ನೋಡಿ ಮೋಡಿಗೊಳಗಾದ ಪ್ರಧಾನಿ ಮೋದಿ, ‘ಅದ್ಭುತ’ ಅಂತ ಉದ್ಗರಿಸಿದರು!

(Two large group of monkeys involved in a big fight at Thailand video goes Viral)

Follow us on

Most Read Stories

Click on your DTH Provider to Add TV9 Kannada