ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ(Russia-Ukraine War) ಸತತ 6ನೇ ದಿನವೂ ಮುಂದುವರೆದಿದೆ. ಈ ನಡುವೆ ರಷ್ಯಾ ಉಕ್ರೇನ್ ರಾಜಧಾನಿ ಕೀವ್ ಮೇಲೆ ಬಾಂಬ್ ದಾಳಿ(Bomb Attack) ನಡೆಸುತ್ತಿದೆ. ಅನೇಕ ಭಾರತೀಯ ವಿದ್ಯಾರ್ಥಿಗಳು ಮನೆಗೆ ಮರಳಲು ಇತರ ದೇಶಗಳಿಗೆ ಪ್ರಯಾಣಿಸುತ್ತಿದ್ದಾರೆ. ಪ್ರಯಾಣಕ್ಕೂ ಮುನ್ನ ವಿಮಾನಕ್ಕೆ ಕಾಯಲು ರೊಮೇನಿಯಾ ಸೇರಿದಂತೆ ಇತರ ದೇಶಗಳಲ್ಲಿ ಸಂತ್ರಸ್ತರಿಗಾಗಿ ಸ್ಥಾಪಿಸಲಾದ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಅಲ್ಲಿನ ಭಾರತೀಯ ಜನರನ್ನು ಸ್ಥಳಾಂತರಿಸಲು ಕೇಂದ್ರ ಸರ್ಕಾರ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಿಶೇಷವಾಗಿ ರೊಮೇನಿಯಾದಿಂದ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಯೋಜಿಸುತ್ತಿದೆ. ಅಲ್ಲಿನ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದು, ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಮೂವರು ಕೇಂದ್ರ ಸಚಿವರನ್ನು ಬೇರೆ ದೇಶಗಳಿಗೆ ಕಳುಹಿಸಲು ಕ್ರಮ ಕೈಗೊಂಡಿದೆ. ಈ ನಡುವೆ ಶಿಬಿರದಲ್ಲಿ ವಿದ್ಯಾರ್ಥಿನಿಯೊಬ್ಬಳ ಹುಟ್ಟುಹಬ್ಬವನ್ನು(Birthday) ಕೇಕ್ ಕತ್ತರಿಸಿ ಆಚರಿಸಲಾಗಿದೆ. ಇದರ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು ಎಲ್ಲೆಡೆ ವೈರಲ್ ಆಗಿದೆ.
ಉಕ್ರೇನ್ ಸಂತ್ರಸ್ತರಿಗಾಗಿ ರೊಮೇನಿಯಾದ ಬುಕಾರೆಸ್ಟ್ ನಲ್ಲಿ ಸ್ಥಾಪಿಸಿರುವ ಶಿಬಿರದಲ್ಲಿ ಭಾರತೀಯ ವಿದ್ಯಾರ್ಥಿನಿಯ ಹುಟ್ಟುಹಬ್ಬವನ್ನು ಸಂಘಟಕರು ಹಾಗೂ ಸಂತ್ರಸ್ತರು ಆಯೋಜಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ. ಆಕೆಯ ಜೊತೆಗೆ ಹಲವಾರು ವಿದ್ಯಾರ್ಥಿಗಳು ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ. ಶಿಬಿರದಲ್ಲಿ ವಿದ್ಯಾರ್ಥಿನಿಯ ಹುಟ್ಟುಹಬ್ಬ ಎಂದು ತಿಳಿದು ಅಲ್ಲಿದ್ದವರು ಆಕೆಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಯುದ್ಧದ ನಾಡಿನಿಂದ ಮನೆಗೆ ಹೋಗಲು ಅಳುತ್ತಾ ಕಾಯುತ್ತಿದ್ದ ಆಕೆಗೆ ಎಲ್ಲರೂ ಸೇರಿ ಸರ್ಪ್ರೈಸ್ ಕೊಟ್ಟಿದ್ದಾರೆ. ಶಿಬಿರದಲ್ಲಿ ಅವಳಿಗೆ ಕೇಕ್ ಕತ್ತರಿಸಿ ಶುಭ ಹಾರೈಸಿ, ಆಶೀರ್ವದಿಸಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದೆ. ಎಲ್ಲರೂ ಆಕೆಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.
ರೊಮೇನಿಯಾದಿಂದ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರ ವಿಮಾನಯಾನ ಸಚಿವ ಸಿಂಧ್ಯಾ ಅವರನ್ನು ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರೊಮೇನಿಯಾದ ಪ್ರಧಾನಿ ನಿಕೋಲ್ ಐಯೊನೆಲ್ ಸಿಯುಕಾ ಅವರನ್ನು ಸಂಪರ್ಕಿಸಿದ್ದಾರೆ. ವೀಸಾ ಇಲ್ಲದೆ ರೊಮೇನಿಯಾ ಮೂಲಕ ಪ್ರಯಾಣಿಸಲು ಭಾರತೀಯ ಪ್ರಜೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಮತ್ತು ವಿಮಾನ ಸೇವೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಪ್ರಧಾನಿ ಮೋದಿ ಶ್ರೀ ನಿಕೋಲೇ–ಐಯೋನೆಲ್ ಸಿಯುಕಾ ಅವರಿಗೆ ಧನ್ಯವಾದ ಹೇಳಿದ್ದಾರೆ. ಈ ವೇಳೆ ಉಕ್ರೇನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಪ್ರಧಾನಿ ಕಳವಳ ವ್ಯಕ್ತಪಡಿಸಿ, ಬಿಕ್ಕಟ್ಟಿನ ಕುರಿತು ಸೌಹಾರ್ದಯುತವಾಗಿ ಚರ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:
Video: ಯುದ್ಧದ ಮಧ್ಯೆ ವೈರಲ್ ಆಯ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರ ಡ್ಯಾನ್ಸ್ ವಿಡಿಯೋ