‘ಮೋದಿ, ಯೋಗಿಯವರನ್ನು ನನ್ನ ಮದುವೆಗೆ ಕರೆಯುತ್ತೇನೆ’ ಎನ್ನುತ್ತಿದ್ದಾನೆ ಉತ್ತರಪ್ರದೇಶದ ಈ ಯುವಕ
Uttar Pradesh : 2.3 ಅಡಿ ಎತ್ತರದ ಈ ವ್ಯಕ್ತಿಗೆ ಅಂತೂ 3 ಅಡಿ ಎತ್ತರದ ಸಂಗಾತಿ ಸಿಕ್ಕಿದ್ದಾಳೆ. ಮದುವೆಗೆ ಶೇರ್ವಾನಿ ಹೊಲಿಸುವಲ್ಲಿ ಈತ ನಿರತನಾಗಿದ್ದಾನೆ. ಇನ್ನೇನು ಪ್ರಧಾನಮಂತ್ರಿಯವರನ್ನು ಆಮಂತ್ರಿಸಲು ದೆಹಲಿಗೆ ಹೊರಡಲಿದ್ದಾನೆ.
Viral : ಮದುವೆ ಎಂದರೆ ಸುಮ್ಮನೆಯೇ? ಯಾರ್ಯಾರನ್ನೆಲ್ಲ ಕರೆಯಬೇಕು ಎನ್ನುವ ಪಟ್ಟಿಯೇ ನಿಮಗಿಂತ ಉದ್ದ ಇರುತ್ತದೆ. ಆದರೆ ಇದೀಗ ಮದುವೆಯಾಗಲು ಹೊರಟಿರುವ ಈ ವ್ಯಕ್ತಿಯ ಪಟ್ಟಿ ಮಾತ್ರ ಅವನಿಗಿಂತ ಬಹಳ ದೊಡ್ಡದಿದೆ! ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಅಜೀಂ ಮನ್ಸೂರಿ ಎಂಬ ವ್ಯಕ್ತಿ ನವೆಂಬರ್ 7 ರಂದು ಮದುವೆಯಾಗಲಿದ್ದಾನೆ. ತನ್ನ ಮದುವೆಗೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಆಹ್ವಾನಿಸಬೇಕೆಂದುಕೊಂಡಿದ್ದಾನೆ.
ಅಜೀಂನ ಎತ್ತರ 2.3 ಅಡಿ ಎನ್ನುವುದು ಒಂದು ಕಡೆ ಮತ್ತು ತನ್ನ ಮದುವೆಗೆ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು ಬರಬೇಕು ಎನ್ನುವುದು ಇನ್ನೊಂದು ಕಡೆ. ಈ ಎರಡು ವಿಶೇಷಗಳಿಂದ ಅಜೀಂ ಈಗ ಮಾಧ್ಯಮದ ಕೇಂದ್ರಬಿಂದುವಾಗುತ್ತಿದ್ದಾನೆ. ‘ನನ್ನ ಮದುವೆ ನವೆಂಬರ್ 7ರಂದು ನಡೆಯಲಿದೆ. ಮೋದಿ ಮತ್ತು ಯೋಗಿ ಅವರಿಗೆ ಆಮಂತ್ರಣ ಕೊಟ್ಟು ಆಹ್ವಾನಿಸಲು ದೆಹಲಿಗೆ ಹೋಗಲಿದ್ದೇನೆ’ ಎಂದು ಎಎನ್ಐಗೆ ಈತ ತಿಳಿಸಿದ್ದಾನೆ.
ಆದರೆ ಇಷ್ಟು ಕುಳ್ಳ ವ್ಯಕ್ತಿ ಅಜೀಮ್ಗೆ ಸಹಜವಾಗಿ ಮದುವೆ ಎನ್ನುವುದು ಕನಸಿನ ಮಾತೇ. ಸಾಕಷ್ಟು ವರ್ಷಗಳಿಂದ ಅವರು ಸಂಗಾತಿಯ ಹುಡುಕಾಟದಲ್ಲಿದ್ದ. ಕೊನೆಗೂ ಇವನಿಗೆ ಸಂಗಾತಿ ಸಿಕ್ಕಿದ್ದಾಳೆ. ಈ ಪರಿಶ್ರಮದ ಹಿಂದೆ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಒಳಗೊಂಡಂತೆ, ಅನೇಕ ರಾಜಕಾರಣಿಗಳು, ಅಧಿಕಾರಿಗಳು ಇದ್ದಾರೆ. ಇವರೆಲ್ಲರೂ ಇವರಿಗೆ ಸಂಗಾತಿಯನ್ನು ಹುಡುಕಲು ಸಹಾಯ ಮಾಡಿದ್ದಾರೆ.
ಅಜೀಂನ ಸಂಗಾತಿ ಬುಷಾರಾ ಹಾಪುರ್ ಮೂಲದವಳು. 2021ರಲ್ಲಿ ಪರಸ್ಪರ ಭೇಟಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈಕೆಯ ಎತ್ತರ 3 ಅಡಿ. ಪದವಿ ಮುಗಿಸಿ ಮದುವೆಯಾಗುವುದಾಗಿ ಆಕೆ ನಿರ್ಧರಿಸಿದ್ದಳು. ಆ ಪ್ರಕಾರ ಈಗ ಮದುವೆ ಏರ್ಪಾಡಾಗಿದೆ. ಅಜೀಮ್ ಕಾಸ್ಮೆಟಿಕ್ ಅಂಗಡಿಯನ್ನು ಹೊಂದಿದ್ದಾನೆ. ತಕ್ಕಮಟ್ಟಿಗೆ ಸಂಪಾದನೆಯೂ ಇದೆ. ಐದು ಜನ ಅಣ್ಣಂದಿರಿದ್ದಾರೆ. ಶಾಲೆಯಲ್ಲಿ ಸಹಪಾಠಿಗಳು, ಶಿಕ್ಷಕರಿಂದ ಅವಮಾನ ಮತ್ತು ತಮಾಷೆಯನ್ನು ಅನುಭವಿಸಿ ಐದನೇ ಕ್ಲಾಸಿಗೆ ಶಾಲೆಯನ್ನು ಬಿಟ್ಟಿದ್ದಾನೆ.
ಇದೀಗ ಮದುವೆಯ ಭರ್ಜರಿ ತಯಾರಿಯಲ್ಲಿದ್ದಾನೆ. ಮದುವೆಗಾಗಿ ವಿಶೇಷವಾದ ಶೇರ್ವಾನಿ ಮತ್ತು ಸೂಟ್ಗಳನ್ನು ಹೊಲಿಸುತ್ತಿದ್ದಾನೆ.
ಪ್ರಧಾನಮಂತ್ರಿಗಳು ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಇವರಿಬ್ಬರ ಮದುವೆಗೆ ಬರುತ್ತಾರಾ, ಏನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:11 pm, Wed, 2 November 22