ಓ ದೇವರೇ ಈ ಹೆಂಗಸರು ಯಾಕೆ ಹೀಗೆ, ಎಲ್ಲಾ ವಿಷಯದಲ್ಲೂ ಗಾಸಿಪ್ ಮಾಡುತ್ತಾರೆ, ಯಾವುದೇ ಸೀಕ್ರೆಟ್ ವಿಷಯಗಳಿರಲಿ ಅದನ್ನೇಲ್ಲಾ ಎಲ್ಲರ ಬಳಿ ಹೇಳಿಕೊಂಡು ತಿರುಗುತ್ತಾರೆ. ಇವರುಗಳು ಯಾಕೆ ಹೀಗೆ ಎಂದು ಹಲವರು ಹೇಳುವುದುಂಟು. ಒಂದು ಲೆಕ್ಕದಲ್ಲಿ ಇದು ನಿಜ ಕೂಡ ಅಲ್ವಾ. ಗಂಡಸರಿಗೆ ಹೋಲಿಸಿದರೆ, ಮಹಿಳೆಯರ ಬಾಯಿಯಲ್ಲಿ ಯಾವುದೇ ಗುಟ್ಟಿನ ವಿಷಯಗಳು ನಿಲ್ಲುವುದಿಲ್ಲ. ಆ ವಿಚಾರವನ್ನು ಯಾರ ಬಳಿಯಾದರೂ ಹೇಳಿಕೊಂಡುಬಿಡುತ್ತಾರೆ. ಹೀಗೆ ಮಹಿಳೆಯರ ಬಾಯಲ್ಲಿ ಯಾವ ಗುಟ್ಟು ಸಹ ನಿಲ್ಲಲ್ಲ ಎಂಬ ಬಗೆಗಿನ ಅನೇಕ ಹಾಸ್ಯಾಸ್ಪದ ಟ್ರೋಲ್ಸ್, ಮೇಮ್ಸ್ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಅಷ್ಟಕ್ಕೂ ಈ ಹೆಂಗಸರು ಗುಟ್ಟುಗಳನ್ನು ಏಕೆ ಗುಟ್ಟಾಗಿಯೇ ಇಟ್ಟುಕೊಳ್ಳದೆ, ಎಲ್ಲರ ಬಳಿ ಹೇಳಿಕೊಂಡುಬಿಡುತ್ತಾರೆ ಎಂಬುದು ಗೊತ್ತಾ? ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆರ್.ಜೆ ಸೌಮ್ಯ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೆಂಗಸರ ಬಾಯಲ್ಲಿ ಗುಟ್ಟುಗಳು ಏಕೆ ನಿಲ್ಲೋದಿಲ್ಲ ಎಂಬ ವಿಚಾರದ ಕುತೂಹಲಕಾರಿ ಕಥೆಯ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹೆಂಗಸರ ಬಾಯಲ್ಲಿ ಗುಟ್ಟು ಏಕೆ ನಿಲ್ಲಲ್ಲ, ಇದಕ್ಕೂ ಮಹಭಾರತಕ್ಕೂ ಇರೋ ಸಂಬಂಧ ಏನು ಎಂಬುದನ್ನು ಬಹಳ ಅರ್ಥಪೂರ್ಣವಾಗಿ ವಿವರಿಸಿದ್ದಾರೆ.
ವಿಡಿಯೋದಲ್ಲಿ ಹೆಂಗಸರ ಬಾಯಲ್ಲಿ ಗುಟ್ಟು ಏಕೆ ನಿಲ್ಲಲ್ಲ ಎಂದರೆ ಇದು ಮಹಿಳೆಯರಿಗೆ ಯುಧಿಷ್ಟಿರ ಕೊಟ್ಟಂತಹ ಶಾಪವೆಂದು ಹೇಳುತ್ತಾರೆ. ಮತ್ತು ಈ ಶಾಪದ ಕಾರಣವನ್ನು ಸಹ ವಿವರಿಸುತ್ತಾರೆ. ಅದೇನೆಂದರೆ, ಮಹಾಭಾರತ ಯುದ್ಧ ಕೊನೆಗೊಂಡ ನಂತರ ಪಾಂಡವರು ದೃತರಾಷ್ಟನ ಬಳಿ ಬರುತ್ತಾರೆ. ಬಳಿಕ ಯುಧಿಷ್ಟಿರ ಯುದ್ಧದಲ್ಲಿ ಮಡಿದವರ ಮತ್ತು ಕಾಣೆಯಾದವರ ಸಂಖ್ಯೆಯನ್ನು ಪಡೆದುಕೊಂಡು, ಯುದ್ಧದಲ್ಲಿ ಸಾವನ್ನಪ್ಪಿದವರನ್ನೆಲ್ಲಾ ಶಾಸ್ತ್ರ ಸಂಪ್ರದಾಯದ ಪ್ರಕಾರ ಸುಟ್ಟು, ಗಂಗೆಯಲ್ಲಿ ಅವರ ಶ್ರಾದ್ಧ ಕಾರ್ಯ ಮಾಡಿ ತರ್ಪಣ ಬಿಡುತ್ತಾನೆ. ಆ ಸಂದರ್ಭದಲ್ಲಿ ಕೌರವ ಸ್ತ್ರೀಯರು ತಮ್ಮ ತಮ್ಮ ಪತಿಯರಿಗೆ ಉದಕ ನೀಡುತ್ತಿರುತ್ತಾರೆ. ಆದರೆ ಕರ್ಣನಿಗೆ ಯಾರು ತರ್ಪಣ ಬಿಡದಂತಾದಾಗ ಕುಂತಿ ಪಾಂಡವರಿಗೆ ಮೆಲ್ಲನೆ ಹೇಳುತ್ತಾಳೆ, ʼಕರ್ಣ ನಿಮ್ಮ ಜೇಷ್ಠ ಸಹೋದರ, ಅವನಿಗೂ ಒಂದು ತರ್ಪಣ ಬಿಡಿ ಎಂದು.
ಇದನ್ನೂ ಓದಿ: ಪ್ರೇಮಿಯನ್ನು ಮೆಚ್ಚಿಸಲು, 4 ವರ್ಷಗಳ ಕಾಲ ಕಣ್ಣು ಮುಚ್ಚಲು ಸಾಧ್ಯವಾಗದಂತಹ ಭಯಾನಕ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ
ಮೊದಲೇ ಪುತ್ರರು ಮತ್ತು ಹಿತೈಷಿಗಳನ್ನು ಕಳೆದುಕೊಂಡು ದುಃಖದಲ್ಲಿದ್ದ ಪಾಂಡವರಿಗೆ ಕುಂತಿಯ ಈ ಮಾತು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಕರ್ಣ ನಮ್ಮ ಸಹೋದರ ಹೇಗಾಗುತ್ತಾನೆ ಎಂದು ಪಾಂಡವರು ಕುಂತಿಯ ಬಳಿ ಪ್ರಶ್ನೆ ಮಾಡುತ್ತಾರೆ. ಆಗ ಕುಂತಿ ತನ್ನ ಹಿಂದಿನ ಕಥೆಯನ್ನು ಹೇಳುತ್ತಾಳೆ. ಈ ಕಥೆಯನ್ನು ಕೇಳಿ ತೀವ್ರ ಆಘಾತಕ್ಕೊಳಗಾದ ಯುಧಿಷ್ಠಿರ, ಅಮ್ಮ ನೀವು ಈ ಸತ್ಯವನ್ನು ಮೊದಲೇ ಹೇಳಿದ್ದರೆ, ಈ ಮಹಾನ್ ಯುದ್ಧ ನಡೆಯುವುದೇ ತಪ್ಪಿ ಹೋಗುತ್ತಿತ್ತು. ಇದನ್ನು ಏಕೆ ಮುಚ್ಚಿಟ್ಟೆ ಎಂದು ತಾಯಿಯ ಬಳಿ ಯುಧಿಷ್ಠಿರ ದುಃಖದಿಂದ ಕೇಳಿಕೊಳ್ಳುತ್ತಾನೆ. ಹೀಗೆ ಕೊನೆಯಲ್ಲಿ ಯುಧಿಷ್ಠಿರ ಸೋದರ ತರ್ಪಣ ಬಿಟ್ಟ ಮೇಲೆ ʼಇನ್ನೂ ಮುಂದೆ ಹೆಂಗಸರ ಬಾಯಲ್ಲಿ ಯಾವುದೇ ಗುಟ್ಟುಗಳು ನಿಲ್ಲೊದು ಬೇಡ ಅಂತʼ ಕೋಪದಿಂದ ತಾಯಿ ಕುಲಕ್ಕೆ ಶಾಪ ನೀಡುತ್ತಾನೆ. ಈ ಕಾರಣದಿಂದಲೇ ಮಹಿಳೆಯರ ಬಾಯಲ್ಲಿ ಯಾವುದೇ ಗುಟ್ಟುಗಳು ನಿಲ್ಲಲ್ಲ ಎಂದು ಆರ್.ಜೆ. ಸೌಮ್ಯ ವಿವರಿಸುತ್ತಾರೆ.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 1.6 ಮಿಲಿಯನ್ ವೀಕ್ಷಣೆಗಳನ್ನು ಮತ್ತು 94.3 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಬಂದಿವೆ. ಒಬ್ಬ ಬಳಕೆದಾರರು ʼಈ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ಈ ಶಾಪ ಎಲ್ಲಾ ನಿಜಾನ ಎಂದು ಕೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: