Lucknow: ತಾನು ತಯಾರಿಸುವ ಮೊಮೊದ (Momo) ವೈಶಿಷ್ಟ್ಯತೆಯನ್ನು ಇಂಗ್ಲಿಷ್ನಲ್ಲಿ ಹೇಳುತ್ತಾ, ಗ್ರಾಹಕರನ್ನು ಸೆಳೆಯುತ್ತಿದ್ದಾರೆ ಈ ವ್ಯಕ್ತಿ. ಲಕ್ನೋದ ಬೀದಿಯಲ್ಲಿ ಬಾದಾಮ್ ಚಟ್ನಿ, ಶೇಝ್ವಾನ್ ಸಾಸ್ ಜೊತೆ ಶುಚಿಯಾದ ಮತ್ತು ಸ್ವಾದಿಷ್ಠವಾದ ಮೊಮೊ ಸವಿಯಲು ಗ್ರಾಹಕರನ್ನು ಆಹ್ವಾನಿಸುತ್ತಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು ನೆಟ್ಟಿಗರು ಕುತೂಹಲದಿಂದ ಈ ವಿಡಿಯೋ ನೋಡುತ್ತಿದ್ದಾರೆ ಮತ್ತು ಚರ್ಚಿಸುತ್ತಿದ್ದಾರೆ. ಇಂಗ್ಲಿಷ್ ಪ್ರೊಫೆಸರ್ (English) ಹೀಗೇಕೆ ಬೀದಿಯಲ್ಲಿ ಮೊಮೊ ಮಾರುವುದೆ? ಎಂದು ಅಚ್ಚರಿಯಿಂದ ಕುತೂಹಲದಿಂದ ಕುಹಕದಿಂದ ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನೂ ಓದಿ : Viral Optical Illusion: ಈ ಚಿತ್ರದಲ್ಲಿರುವ ಇನ್ನೊಂದು ನಾಯಿಯನ್ನು ಕಂಡುಹಿಡಿಯಬಹುದೆ?
ಆ. 17ರಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಈ ವಿಡಿಯೋ ಅನ್ನು ಈತನಕ 6ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ನಾನು ಮನೆಯಲ್ಲಿ ಮಾಡಿದ ರುಚಿಯಾದ ಶುಚಿಯಾದ ಮೊಮೊ ಇವು. ಇವುಗಳೊಳಗೆ ತುಂಬಿದ ಖಾದ್ಯವನ್ನು ನೋಡಿ ಮತ್ತು ಹಿಟ್ಟಿನಿಂದ ತಯಾರಿಸಿದ ತೆಳುವಾದ ಪದರಗಳನ್ನು ನೋಡಿ. ಇದರೊಂದಿಗೆ ಸವಿಯಲು ವಿಶಿಷ್ಟವಾದ ಚಟ್ನಿ, ಸಾಸ್ ಇದೆ. ಎರಡು ಗಂಟೆಗಳಲ್ಲಿ ಖಾಲಿಯಾಗುತ್ತವೆ ಎಂದು ನಿರರ್ಗಳವಾಗಿ ಇಂಗ್ಲಿಷ್ನಲ್ಲಿ ಹೇಳುತ್ತಿದ್ದಾರೆ. ಈ ವಿಡಿಯೋ ನೋಡಿದ ಯಾರಿಗೂ ಇವರ ಕಥೆ ಏನಿರಬಹುದು ಎಂಬ ಕುತೂಹಲ ಉಂಟಾಗುವುದು ಸಹಜ.
‘ಈ ಇಂಗ್ಲಿಷ್ ಪ್ರೊಫೆಸರ್ ಬಾದಾಮ್ ಚಟ್ನಿ, ಶೇಝ್ವಾನ್ ಸಾಸ್ನೊಂದಿಗೆ ಮನೆಯಲ್ಲಿ ತಯಾರಿಸಿದ ಮೊಮೊ ಮಾರುತ್ತಿದ್ದಾರೆ, ಎರಡು ಗಂಟೆಗಳಲ್ಲಿ ಎಲ್ಲ ಮೊಮೊ ಮಾರಾಟವಾಗುತ್ತವೆ’ ಎಂದು ಈ ವಿಡಿಯೋಗೆ ನೋಟ್ ಬರೆದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ನೆಟ್ಟಿಗರೊಬ್ಬರು, ‘ಇವರು ಪ್ರೊಫೆಸರ್ ಅಲ್ಲ. ಸಣ್ಣ ವ್ಯಾಪಾರವನ್ನು ಆರಂಭಿಸಿದ ಸಾಮಾನ್ಯ ವ್ಯಕ್ತಿ. ತಮ್ಮ ಹೆಂಡತಿಗೆ ಸಹಾಯ ಮಾಡುತ್ತಿದ್ದಾರೆ, ಅಲ್ಲದೆ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸುವ ಉದ್ದೇಶವಿಟ್ಟುಕೊಂಡು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಅಪಪ್ರಚಾರ ಮಾಡಬೇಡಿ. ಈ ವ್ಯಕ್ತಿಯನ್ನು ನಾನು ಮುಖಾಮುಖಿಯಾಗಿ ಭೇಟಿಯಾಗಿದ್ದೇನೆ. ಒಂದು ಭಾನುವಾರದ ಸಂಜೆ ನಾನು ನನ್ನ ಕುಟುಂಬದೊಂದಿಗೆ ಈ ರಸ್ತೆಯಲ್ಲಿ ಹೋಗುತ್ತಿರುವಾಗ ಅಕಸ್ಮಾತ್ ಕಣ್ಣಿಗೆ ಬಿದ್ದರು.’ ಎಂದಿದ್ದಾರೆ.
ಇದನ್ನೂ ಓದಿ: Viral Video: ಬೀದಿನಾಯಿಯ ಬಗ್ಗೆ ಕರುಣೆ ತೋರಿದ ಮಹಿಳೆಯನ್ನು ಶ್ಲಾಘಿಸುತ್ತಿರುವ ನೆಟ್ಟಿಗರು
ಪ್ರೊಫೆಸರ್ ಅಲ್ಲವೆಂದರೆ ಅವರು ಎಂಜಿನಿಯರ್ ಆಗಿರಬೇಕು ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ಅಷ್ಟೊಂದು ಬಿಸಿಬಿಸಿಯಾದ ಮೊಮೊಗಳನ್ನು ಪ್ಲಾಸ್ಟಿಕ್ ಡಬ್ಬಿಯಲ್ಲಿ ಪ್ಯಾಕ್ ಮಾಡುತ್ತಿರುವುದನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಚೆನ್ನಾಗಿದೆ ಎಂದಿದ್ದಾರೆ ಇನ್ನೊಬ್ಬರು. ಈ ವಿಡಿಯೋ ಅನ್ನು ಎಂದಿಗೂ ಇಂಗ್ಲಿಷ್ ವಿದ್ಯಾರ್ಥಿಗಳಿಗೆ ತೋರಿಸಬೇಡಿ, ನಾನಂತೂ ಇದನ್ನು ನೋಡಿ ಸತ್ತೇ ಹೋದೆ ಎಂದಿದ್ದಾರೆ ಮತ್ತೊಬ್ಬರು. ಇವರ ಬದುಕಿನ ಯಾವ ದುರಂತವರು ಅವರನ್ನು ಈ ರೀತಿ ಮೊಮೊ ಮಾರಲು ಎಡೆಮಾಡಿತೋ? ಎಂದಿದ್ದಾರೆ ಮಗದೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:58 pm, Mon, 28 August 23