Viral : ಯಾವ ಯಾವ ವಯಸ್ಸಿನಲ್ಲಿ ಯಾರ್ಯಾರಿಗೆ ಎಂಥ ಸಿನೆಮಾಗಳು ಬೇಕೋ ಅಂಥವುಗಳನ್ನು ನೋಡುವುದು ಸಾಮಾನ್ಯ. ಆದರೆ ಹಣ್ಣಣ್ಣು ಅಜ್ಜಿಯೊಬ್ಬಳು ಮಾರ್ವೆಲ್ ಸಿನೆಮಾಗಳ ಹುಚ್ಚು ಹಿಡಿಸಿಕೊಂಡಿದ್ದು ಯಾಕೆ? ಅಚ್ಚರಿಯಾಗುತ್ತಿದೆಯಾ? ನೆಟ್ಟಿಗರಿಗೂ ನಗು ಮತ್ತು ಕುತೂಹಲ ತಡೆಯಲಾಗುತ್ತಿಲ್ಲ. ಈಕೆ ಈ ಸಿನೆಮಾಗಳನ್ನು ನೋಡುತ್ತಿರುವುದಷ್ಟೇ ಅಲ್ಲ ನೋಟ್ ಕೂಡ ಮಾಡಿಕೊಳ್ಳುತ್ತಿದ್ದಾಳೆ. ನಂತರ ತನ್ನ ಮೊಮ್ಮಕ್ಕಳೊಂದಿಗೆ ಈ ಕುರಿತು ಚರ್ಚಿಸುವ ಇರಾದೆ ಆಕೆಯದು. ನೋಡಿ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಏಕೆಂದರೆ Gen Z ಅಂದರೆ ಈಗಿನ ಪೀಳಿಗೆಯ ಮಕ್ಕಳು ಮಾರ್ವೆಲ್ ಸೀರೀಸ್ನ ಭಯಂಕರ ಅಭಿಮಾನಿಗಳು. ಅಪ್ಪಟ ಮನರಂಜನೆ, ಸಾಹಸಪ್ರಧಾನ ವಿಷಯಗಳನ್ನು ಈ ಸಿನೆಮಾಗಳು ಹೊಂದಿರುತ್ತವೆ. ಆದರೆ ಇಂಥ ಸಿನೆಮಾಗಳನ್ನು ಅಜ್ಜಿ ಯಾಕೆ ಇಷ್ಟೊಂದು ತನ್ಮಯರಾಗಿ ನೋಡಲು ಶುರು ಮಾಡಿದ್ದಾಳೆ ಎನ್ನುವುದೇ ಪ್ರಶ್ನೆ.
ಈತನಕ 4 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ಎಂಥಾ ಮುದ್ದಾದ ಅಜ್ಜಿ ಇವರು, ನೋಟ್ಸ್ ಕೂಡ ತೆಗೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಹುಚ್ಚು ಹಿಡಿದಿದೆಯಾ ಈ ಅಜ್ಜಿಗೆ ಎಂದು ತಮಾಷೆ ಮಾಡಿದ್ದಾರೆ ಕೆಲವರು.
ವಯಸ್ಸಾದಂತೆ ಜಗತ್ತಿನಿಂದ ದೂರವಾಗುತ್ತಿದ್ದೇನೆ ಎಂಬ ಆತಂಕ, ಭಯ ಕಾಡುವುದು ಸಾಮಾನ್ಯ. ಜಗತ್ತಷ್ಟೇ ಅಲ್ಲ, ತನ್ನ ಸುತ್ತಮುತ್ತಲಿನವರೊಂದಿಗೆ, ಸ್ವಂತದವರೊಂದಿಗೆ ಕೂಡ. ಆಗ ಗೊಣಗಾಟ, ಕೋಪ, ಕಿರಿಕಿರಿ ಮತ್ತು ಮೌನದೊಂದಿಗೆ ವಯಸ್ಸಾದವರು ಆಗಾಗ ತಮ್ಮ ಅಸಹಾಯಕತೆ, ನೋವನ್ನು ವ್ಯಕ್ತಪಡಿಸುತ್ತಿರುತ್ತಾರೆ. ಆದರೆ ಈ ಅಜ್ಜಿ ಹಾಗೆಲ್ಲ ಮಾಡದೆ, ಎಳೆಯರೊಂದಿಗೆ ಮನಸ್ಸು, ಆಲೋಚನೆಯನ್ನು ಜೋಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಳೆ. ಹೀಗಾದರೂ ಮೊಮ್ಮಕ್ಕಳೊಂದಿಗೆ ಮಾತನಾಡಬಹುದಲ್ಲ ಎಂಬ ಆಸೆ ಇರಬಹುದು. ಇದರಲ್ಲಿ ನಗುವ ವಿಷಯ ಏನೂ ಇಲ್ಲ. ಇದು ಹೃದಯಕ್ಕೆ ಸಂಬಂಧಿಸಿದ್ದು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:56 pm, Thu, 10 November 22