
Delhi : ಭಾರತವು ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಭಾರತಕ್ಕೆ ಬಾಹ್ಯಾಕಾಶದಿಂದ ಶುಭಾಶಯವನ್ನು ಕೋರಿದ್ದಾರೆ ಇಟಲಿಯ ಗಗನಯಾತ್ರಿ ಸಮಂತಾ ಕ್ರಿಸ್ಟೋಫೊರೆಟ್ಟಿ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ISRO ಗೆ ಗಗನಯಾನ ಯೋಜನೆಗೆ ಅವರು ಶುಭಕೋರಿದ್ದಾರೆ. 2023ರಲ್ಲಿ ನಡೆಯಲಿರುವ ಭಾರತದ ಪ್ರಥಮ ಮಾನವ ಬಾಹ್ಯಾಕಾಶ ಯಾತ್ರೆಯ ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸಿದ್ದಾರೆ. 1 ನಿಮಿಷ, 13 ಸೆಕೆಂಡುಗಳ ಈ ವಿಡಿಯೋದಲ್ಲಿ ಸಮಂತಾ, ನಾಸಾ ಮತ್ತು ಇಸ್ರೋ ನಡುವೆ ನಡೆಯುತ್ತಿರುವ ಭೂವೀಕ್ಷಣೆ ಕಾರ್ಯಾಚರಣೆ ಕುರಿತು ಹೇಳಿದ್ದಾರೆ. ಭವಿಷ್ಯದಲ್ಲಿ ಬಾಹ್ಯಾಕಾಶ ಸಂಶೋಧನೆಗಳಿಗಾಗಿ ನಾಸಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದೊಂದಿಗಿನ ಪಾಲುದಾರಿಕೆಯನ್ನು ವಿಸ್ತರಿಸಲಿದೆ ಎಂದಿದ್ದಾರೆ. ಭವಿಷ್ಯದ ಬಾಹ್ಯಾಕಾಶ ಸಂಶೋಧನೆಯನ್ನು ಒಟ್ಟಾಗಿ ಮಾಡುವುದು ನಮ್ಮೆಲ್ಲರ ಗುರಿಯಾಗಿದೆ ಎಂದೂ ತಿಳಿಸಿದ್ದಾರೆ. ಈ ಸಂದೇಶವನ್ನು ಅಮೆರಿಕದ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
‘ಗಗನಯಾನ’ ಸಿದ್ಧತೆ ಪೂರ್ಣಗೊಂಡಿದ್ದು, ಭಾರತೀಯರು ಮುಂದಿನ ವರ್ಷ ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಕಳೆದ ತಿಂಗಳು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. 2023 ರಲ್ಲಿ ನಡೆಯಲಿರುವ ಮಿಷನ್ನ ಪ್ರಯೋಗಗಳನ್ನು ಈ ವರ್ಷದ ಅಂತ್ಯದ ವೇಳೆಗೆ ನಡೆಸಲಾಗುವುದು ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದರು.
‘ಮುಂದಿನ ವರ್ಷ ಭಾರತೀಯ ಮೂಲದ ಒಬ್ಬರು ಅಥವಾ ಇಬ್ಬರು ಬಾಹ್ಯಾಕಾಶಕ್ಕೆ ಹೋಗಬಹುದು ಅದಕ್ಕಾಗಿ ನಮ್ಮ ‘ಗಗನಯಾನ ಯೋಜನೆಗೆ’ ಸಿದ್ಧತೆ ನಡೆದಿದೆ. ಅದಕ್ಕೂ ಮೊದಲು ಈ ವರ್ಷಾಂತ್ಯದೊಳಗೆ ಎರಡು ಪ್ರಯೋಗಗಳನ್ನು ನಡೆಸಲಾಗುವುದು. ಎರಡನೇ ಪ್ರಯೋಗದಲ್ಲಿ ಮಹಿಳಾ ರೋಬೋಟ್ (ಗಗನಯಾತ್ರಿ) ವ್ಯೋಮಮಿತ್ರಳನ್ನು ಕಳುಹಿಸಲಾಗುವುದು.’ ಎಂದು ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಮತ್ತಷ್ಟು ಸುದ್ದಿಗಾಗಿ ಕ್ಲಿಕ್ ಮಾಡಿ