ಪ್ರಾಣಿಗಳು ಮತ್ತು ಪಕ್ಷಿಗಳು ಯಾವತ್ತೂ ನಮ್ಮ ಗಮನ ಸೆಳೆಯುವಲ್ಲಿ ಸೋಲುವುದೇ ಇಲ್ಲ. ನಮ್ಮ ಸುತ್ತಮುತ್ತ ಇರುವ ಈ ಜೀವಿಗಳ ಚಿಂತೆ, ಒತ್ತಡ, ದ್ವೇಷ, ಅಸೂಯೆ ಇರದ ಖುಷಿಯ ಬದುಕನ್ನು ನೋಡುವುದೇ ಚಂದ. ನಿಷ್ಕಲ್ಮಶ ಮನಸ್ಸಿನ ಈ ಜೀವಿಗಳು ಒಂದೊಂದು ಸಲ ಅವುಗಳ ತುಂಟಾಟ, ಬುದ್ಧಿವಂತಿಕೆಯ ಕಾರಣದಿಂದಲೂ ನಮ್ಮ ಗಮನವನ್ನು ಸೆಳೆಯುತ್ತವೆ. ಇಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇಂತಹ ವಿಡಿಯೋಗಳನ್ನು ನೋಡುತ್ತಿದ್ದರೆ ಮತ್ತೆ ಮತ್ತೆ ನೋಡಬೇಕೆಂದೆನಿಸುತ್ತದೆ. ಸದ್ಯ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿದ್ದು, ಹಕ್ಕಿಯೊಂದು ಪಾರ್ಕಿನಲ್ಲಿ ಸ್ವಚ್ಛಂದವಾಗಿ ಆಟವಾಡುತ್ತಾ, ಜೀವನದಲ್ಲಿ ಒಬ್ಬಂಟಿಯಾಗಿದ್ದರೆ ಏನಂತೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನಿಮ್ಮಲ್ಲಿ ನೀವು ಖುಷಿಯನ್ನು ಕಾಣುತ್ತಾ ಜೀವನದ ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತಾ ಕಳೆಯಬೇಕು ಎಂಬುದನ್ನು ತೋರಿಸಿಕೊಟ್ಟಿದೆ. ಈ ಅಪರೂಪದ ದೃಶ್ಯ ಇದೀಗ ನೆಟ್ಟಿಗರ ಮನ ಗೆದ್ದಿದೆ.
ಈ ವಿಡಿಯೋವನ್ನು Science girl ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಉದ್ಯಾನವನದಲ್ಲಿ ಆಟವಾಡುತ್ತಾ ಮೋಜು ಮಾಡಿದ ಹುಡ್ ಕಾಗೆ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವಿಡಿಯೋದಲ್ಲಿ ಹಕ್ಕಿಯೊಂದು ಪಾರ್ಕಿನಲ್ಲಿ ಸ್ವಚ್ಛಂದವಾಗಿ ಆಟವಾಡುತ್ತಿರುವ ದೃಶ್ಯವನ್ನು ಕಾಣಬಹುದು.
Hooded crow having fun in the park
pic.twitter.com/h8E7hnPyHe— Science girl (@gunsnrosesgirl3) January 30, 2024
ವೈರಲ್ ವಿಡಿಯೋದಲ್ಲಿ ಪಾರ್ಕಿನಲ್ಲಿ ಸುತ್ತಮುತ್ತ ಯಾರು ಇಲ್ಲದಿದ್ದಾಗ ಬಂದಂತಹ ಹಕ್ಕಿಯೊಂದು ಅಲ್ಲಿದ್ದಂತಹ ಸಿಸಾ (Seesaw) ಆಟಿಕೆಯಲ್ಲಿ ಒಬ್ಬಂಟಿಯಾಗಿ ಆಟವಾಡುತ್ತಿರುವ ಸುಂದರ ದೃಶ್ಯವನ್ನು ಕಾಣಬಹುದು. ಹೌದು ಆ ಹಕ್ಕಿಯು ಸ್ನೇಹಿತರು ಇಲ್ಲದೆ ಒಬ್ಬಂಟಿಯಾಗಿದ್ದರೆ ಏನಂತೆ, ನಾನು ಒಂಟಿಯಾಗಿಯೇ ಆಟವಾಡುತ್ತಾ, ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತಾ ಕಳೆಯುವೇ ಎನ್ನುತ್ತಾ ಈ ಹಕ್ಕಿ ತನ್ನದೇ ಖುಷಿಯ ವಾತಾವರಣವನ್ನು ಸೃಷ್ಟಿಸಿಕೊಂಡು ಆಟವಾಡುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ನಾನು, ನೀನು, ಹಿಂದಿರುವವರು ಯಾರು? ಶ್ವಾನಗಳ ಜೊತೆ ಸೈಕಲ್ ಸವಾರಿ
ಜನವರಿ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಮೂವತ್ತು ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಕಾಗೆಗಳು ಅತ್ಯಂತ ಬುದ್ಧಿವಂತ ಪಕ್ಷಿಗಳಲ್ಲಿ ಒಂದಾಗಿದೆ, ಅವುಗಳು ಮನುಷ್ಯರಂತೆಯೇ ವರ್ತಿಸುತ್ತವೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪ್ರಾಣಿ ಮತ್ತು ಪಕ್ಷಿಗಳು ಮುಕ್ತವಾಗಿ ವಿಹಾರಿಸುತ್ತಾ, ಪ್ರತಿ ಕ್ಷಣವನ್ನು ಆನಂದಿಸಲು ಸುಂದರ ಸ್ಥಳಗಳು ಇನ್ನೂ ಇವೆ ಎಂಬುದನ್ನು ನೋಡಲು ಖುಷಿಯಾಗುತ್ತಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಬ್ಬಬ್ಬಾ ಕಾಗಕ್ಕನ ಮೋಜಿವ ಆಟವನ್ನು ನೋಡಲು ಬಹಳ ಸಂತೋಷವಾಗುತ್ತಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ವಿಡಿಯೋ ಬಹಳ ಅದ್ಭುತವಾಗಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ