Blood Group and Personality: ನಮ್ಮ ದೇಶದಲ್ಲಿ ನಮ್ಮ ಗುಣಸ್ವಭಾವಗಳನ್ನು ತಿಳಿದುಕೊಳ್ಳಲು ರಾಶಿ ನಕ್ಷತ್ರಗಳ ಮೊರೆ ಹೋಗುವ ಕ್ರಮವಿನ್ನೂ ಚಾಲ್ತಿಯಲ್ಲಿದೆ. ಜೊತೆಗೆ ಮದುವೆಯಾಗುವವರ ಗುಣಸ್ವಭಾಗಳ ಹೊಂದಾಣಿಕೆ ಅಂದಾಜಿಸಲೂ ಜಾತಕ, ಜ್ಯೋತಿಷ್ಯ ಕೇಳುವುದಿದೆ. ಆದರೆ ಜಪಾನಿಯರು ಯಾವತ್ತೂ ವಿಭಿನ್ನವಾಗಿ ಆಲೋಚಿಸುವಂಥವರು ಮತ್ತು ಹಾಗೆಯೇ ಬದುಕಿನ ಕ್ರಮಗಳನ್ನು ಅಳವಡಿಸಿಕೊಳ್ಳುತ್ತ ಜೀವನವನ್ನು ಆಸಕ್ತಿಕರವಾಗಿ, ಸ್ವಾರಸ್ಯಮಯವಾಗಿ ರೂಪಿಸಿಕೊಳ್ಳುವವರು. ಹಾಗಾಗಿ ಜಪಾನ್ನಲ್ಲಿ ಪರಿಚಯವಾದಾಗ ಎಲ್ಲ ವಿವರಗಳನ್ನೂ ಕೇಳುವಂತೆ ಸಹಜವಾಗಿ ಪರಸ್ಪರರ ರಕ್ತದ ಗುಂಪುಗಳನ್ನೂ ಕೇಳುವುದು ರೂಢಿಯಲ್ಲಿದೆ. ಉದ್ಯೋಗಸ್ಥಳದಲ್ಲಿ ಉದ್ಯೋಗಿಯ ಸಾಮರ್ಥ್ಯವನ್ನು ನಿರ್ಣಯಿಸಲು ಮತ್ತು ಮದುವೆಯಾಗುವ ಜೋಡಿಗಳ ಹೊಂದಾಣಿಕೆ ನಿರ್ಣಯಿಸುವ ಸಾಧನವೆಂಬಂತೆ ಈ ಕ್ರಮವನ್ನು ಪರಿಗಣಿಸಲಾಗುತ್ತದೆ. ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ಆಧಾರಗಳಿಲ್ಲದಿದ್ದರೂ ಅನೇಕರು ಈ ‘ಫುರುಕಾವಾ ಪರಿಕಲ್ಪನೆ’ (Furukawa) ಯನ್ನು ನಂಬುತ್ತ ಬಂದಿದ್ದಾರೆ.
Ketsueki-gata ಎಂದರೆ ಆಯಾ ವ್ಯಕ್ತಿಯ ರಕ್ತದ ಗುಂಪು ಆಧರಿಸಿ ಅವರ ವ್ಯಕ್ತಿತ್ವವನ್ನು ವಿಶ್ಲೇಷಿಸುವ ಪರಿಕಲ್ಪನೆ. ಇದು 1930 ರ ದಶಕದಿಂದಲೂ ಜನಪ್ರಿಯತೆ ಗಳಿಸಿದೆ. ಜಪಾನಿನ ಪ್ರಾಧ್ಯಾಪಕ ಟೋಕೆಜಿ ಫುರುಕಾವಾ ಈ ಕುರಿತು ಸಂಶೋಧನಾ ಪ್ರಬಂಧವನ್ನೂ ಮಂಡಿಸಿದ್ದಾರೆ. ಆದರೆ ಈ ವಿಧಾನಕ್ಕೆ ಯಾವುದೇ ರೀತಿಯ ವೈಜ್ಞಾನಿಕ ಆಧಾರವಿಲ್ಲವೆಂದೂ ಹೇಳಲಾಗುತ್ತದೆ. ಆದರೂ ಇದನ್ನು ಓದುತ್ತಿರುವ ನಿಮ್ಮಲ್ಲಿ ನಿಮ್ಮ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಲ್ಲುವುದೆ?
Blood Group A : ಸೂಕ್ಷ್ಮಸ್ವಭಾವ, ಚಾತುರ್ಯ, ಸಹಕಾರ ಮನೋಭಾವ ಹೊಂದಿರುವ ಇವರು ತೀವ್ರ ಭಾವಜೀವಿಗಳಾಗಿರುತ್ತಾರೆ. ಇವರಿಗೆ ಅತಿಯಾದ ತಾಳ್ಮೆ ಇರುವುದರಿಂದ ಯಾರೊಂದಿಗೂ ಅನವಶ್ಯಕ ವಾಗ್ವಾದ, ವೈಮನಸ್ಯಕ್ಕೆ ಬೀಳದೆ ಬೀಳದೆ ಪ್ರಾಮಾಣಿಕತೆ, ಪ್ರೀತಿಯಿಂದಲೇ ಸಂದರ್ಭವನ್ನು ನಿಭಾಯಿಸುವವರಾಗಿರುತ್ತಾರೆ. ಆದರೆ ಕೆಲವೊಮ್ಮೆ ಅತೀಸೂಕ್ಷ್ಮವಾಗಿಯೂ ವರ್ತಿಸಬಲ್ಲವರಾಗಿರುತ್ತಾರೆ. ದಯಾಮ, ವಿಶ್ವಾಸಾರ್ಹ, ಸಂವೇದನಾಶೀಲ ಮತ್ತು ಪರಿಪೂರ್ಣದೆಡೆ ಇವರ ತುಡಿತವಿರುತ್ತದೆ. ತೆಗೆದುಕೊಂಡ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸುತ್ತಾರೆ. ಆದರೆ ಯಾವುದೇ ವಿಷಯದ ಬಗ್ಗೆ ನಿರ್ಧಾರಕ್ಕೆ ಬರಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಹಟದ ಸ್ವಭಾವ ಇವರದಾಗಿರುತ್ತದೆಯಾದರೂ ತಮ್ಮ ಜೀವನವನ್ನು ವ್ಯವಸ್ಥಿತವಾಗಿ ರೂಪಿಸಿಕೊಳ್ಳುವ ಸಾಮರ್ಥ್ಯವೂ ಇವರಿಗಿರುತ್ತದೆ. ಪ್ರತಿಯೊಂದರಲ್ಲೂ ಅಚ್ಚುಕಟ್ಟುತನವನ್ನು ಅಪೇಕ್ಷಿಸುತ್ತಾರೆ. ಹಾಗಾಗಿ ಇವರ ದೇಹದಲ್ಲಿ ಕಾರ್ಟಿಸಲ್ (Stress Harmone) ಅತಿವೇಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಗೊಳ್ಳುತ್ತದೆ, ಒತ್ತಡಕ್ಕೆ ಬೀಳುತ್ತಾರೆ. ನಿಷ್ಠೆ, ಸ್ಥಿರತೆ ಇವರಿಗಿದೆಯಾದರೂ ಗೀಳು, ಅತಿಸೂಕ್ಷ್ಮತೆ, ನಿರಾಶಾವಾದಿತನ ಇವರನ್ನು ಬೇಗ ಆವರಿಸಿಬಿಡುತ್ತದೆ. ಇತರರಲ್ಲಿ ಇವರಿಗೆ ವಿಶ್ವಾಸ ಮೂಡುವ ತನಕ ತಮ್ಮ ಭಾವನೆಗಳನ್ನು ಅವರೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಒಟ್ಟಾರೆ ಸ್ನೇಹದಲ್ಲಿ ವಿಶ್ವಾಸ ಇವರಿಗೆ ಮುಖ್ಯ.
ಇದನ್ನೂ ಓದಿ : Multiple personality disorder: ಕಾಡುವ ಬಹುವ್ಯಕ್ತಿತ್ವ ಅಸ್ವಸ್ಥತೆಯ ಲಕ್ಷಣಗಳ ಬಗ್ಗೆ ಇಲ್ಲಿದೆ ಮಾಹಿತಿ
Blood Group B : ಇವರು ಅತ್ಯಂತ ಸೃಜನಶೀಲ ವ್ಯಕ್ತಿತ್ವ ಉಳ್ಳವರು ಮತ್ತು ಕ್ಷಿಪ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದವರು. ಆದರೆ ಇತರರ ಆದೇಶಗಳನ್ನು ಇವರು ಸುಲಭವಾಗಿ ಸ್ವೀಕರಿಸಲಾರರು. ತಾವಂದುಕೊಂಡಂತೆ ತಮ್ಮದೇ ರೀತಿಯಲ್ಲಿ ಹಿಡಿದ ಕೆಲಸವನ್ನು ಕಾರ್ಯಗತಗೊಳಿಸುವವರು. ತಾವು ಮಾಡುವ ಎಲ್ಲ ಕೆಲಸಗಳು ಅತ್ಯುತ್ತಮವಾಗಿಯೇ ಇರಬೇಕೆಂಬ ನಿರೀಕ್ಷೆ ಮತ್ತು ಅದಕ್ಕೆ ತಕ್ಕಂಥ ಅಮಿತೋತ್ಸಾಹ ಇವರದಾಗಿರುತ್ತದೆ. ಚಿಂತನಶೀಲ ಮನೋಭಾವ ಇವರದಾಗಿದ್ದುದರಿಂದ ಇತರರನ್ನು ಸಹಾನುಭೂತಿಯಿಂದ ಕಾಣುತ್ತಾರೆ. ಆದರೂ ಇವರಲ್ಲಿ ಸ್ವಾರ್ಥ ಮತ್ತು ಅಸಹಕಾರ ಗುಣಕ್ಕೇನು ಕೊರತೆ ಇಲ್ಲ. ಈ ಕಾರಣದಿಂದಾಗಿಯೇ ತಾವಾಗಿಯೇ ತಮ್ಮನ್ನು ಒಂಟಿತನಕ್ಕೆ ದೂಡಿಕೊಳ್ಳುತ್ತಾರೆ. ಹಾಗಾಗಿ ಇವರಲ್ಲಿ ಕ್ಷಮಾಗುಣ ಕಡಿಮೆ. ಕೆಲವೊಮ್ಮೆ ಬೇಜವಾಬ್ದಾರಿತನ, ಅಸಹಕಾರ, ಅಸ್ಥಿರರಂತೆಯೂ ವರ್ತಿಸಬಲ್ಲರು. ಇದನ್ನು ಹೊರತುಪಡಿಸಿ ಸದಾ ಕುತೂಹಲಿ, ಶಾಂತಚಿತ್ತರು, ಸಾಹಸ ಮತ್ತು ತೀವ್ರ ಭಾವಜೀವಿಗಳು, ಹರ್ಷಚಿತ್ತರು. ಆದ್ದರಿಂದಲೇ ಇವರನ್ನು ವಿಶ್ವಾಸಾರ್ಹ ಸ್ನೇಹಿತರು ಸುತ್ತುವರಿದಿರುತ್ತಾರೆ.
Blood Group AB : ಇವರಲ್ಲಿ A ಮತ್ತು B ವ್ಯಕ್ತಿತ್ವದವರ ಗುಣಸ್ವಭಾವಗಳನ್ನು ಮಿಳಿತಗೊಂಡಿದೆ. ದ್ವಂದ್ವ ಮತ್ತು ಜಟಿಲ ಮನೋಭಾವ ಇವರಲ್ಲಿ ಸಂಕೋಚವೂ ಇರುತ್ತದೆ. ಅದನ್ನು ತೊಡೆದು ಹಾಕುವಂಥ ಛಲವೂ ಇರುತ್ತದೆ. ತಮ್ಮ ನಿಜವಾದ ವ್ಯಕ್ತಿತ್ವವನ್ನು ಅಪರಿಚಿತರಿಗೆ ಗೊತ್ತಾಗದಂತೆ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಹಾಗಾಗಿ ನೀವು ಅವರನ್ನು ಸಂಪೂರ್ಣವಾಗಿ ಸುಲಭಕ್ಕೆ ಅರ್ಥ ಮಾಡಿಕೊಳ್ಳುವುದು ಕಷ್ಟ. ಆದರೆ ಬಹಳ ಸುಲಭಕ್ಕೆ ಸ್ನೇಹವನ್ನು ಸಂಪಾದಿಸುವ ಚಾಕಚಕ್ಯತೆಯೂ ಅವರಲ್ಲಿ ಧಾರಾಳವಾಗಿಯೇ ಇರುತ್ತದೆ. ಇತರರೊಂದಿಗೆ ವ್ಯವಹರಿಸುವಾಗ ಬಹಳ ಎಚ್ಚರದಲ್ಲಿ ಇರುವ ಇವರಿಗೆ ಸಹಾನುಭೂತಿ ಹೆಚ್ಚು. ಹಾಗಾಗಿಯೇ ವಿಶ್ಲೇಷಣಾತ್ಮಕ ಮತ್ತು ತಾರ್ಕಿಕ ಕೌಶಲ ಹೊಂದಿರುತ್ತಾರೆ. ಆದರೆ, ಸದಾ ಸೃಜನಶೀಲದೆಡೆ ತುಡಿಯುವ ಇವರು ಆಕರ್ಷಕ, ಸಂತುಲಿತ, ಕನಸಿನ ಬೆನ್ನಟ್ಟುವ, ತರ್ಕಬದ್ಧ, ವಿಶ್ವಾಸಾರ್ಹ ವ್ಯಕ್ತಿ ಹೇಗೋ ಅಷ್ಟೇ ಸಂಕೀರ್ಣ, ದುರ್ಬಲ, ಬೇಜವಾಬ್ದಾರಿ, ಸ್ವಯಂಕೇಂದ್ರಿತ, ಕ್ಷಮಾಗುಣವಿಲ್ಲದ, ಅತಿಯಾಗಿ ವಿಶ್ಲೇಷಿಸುವವರು ಆಗಿರುವಂಥವರು.
ಇದನ್ನೂ ಓದಿ : Personality on the basis of birthday: ನೀವು ಹುಟ್ಟಿದ ವಾರ ಯಾವುದು? ಅದರ ಆಧಾರದಲ್ಲಿ ನಿಮ್ಮ ಸ್ವಭಾವ ಹೀಗಿರುತ್ತದೆ
Blood Group O : ಇವರು ಧೈರ್ಯಶಾಲಿಗಳು. ಸ್ವತಂತ್ರ ವ್ಯಕ್ತಿತ್ವದವರು. ಉನ್ನತ ವಿದ್ಯಾಭ್ಯಾಸ ಮತ್ತು ಸಾಧನೆಯ ಕಡೆ ಹೆಚ್ಚು ಗಮನ ಕೊಡುತ್ತಾರೆ. ಅದಕ್ಕಾಗಿ ಎಲ್ಲವನ್ನೂ ಎದುರಿಸುತ್ತಾರೆ. ಅತ್ಯುತ್ತಮ ನಾಯಕತ್ವ ಗುಣವನ್ನು ಹೊಂದಿರುವ ಇವರು ಸಣ್ಣಪುಟ್ಟ ವಿಷಯಗಳಿಂದ ವಿಚಲಿತಗೊಳ್ಳಲಾರರು. ಆದರೆ ಇತರರಿಗೆ ವಿಶೇಷವಾಗಿ A ರಕ್ತ ಗುಂಪಿನ ಜನರಿಗೆ ಇವರು ಸ್ವಾರ್ಥಿಗಳಂತೆ ತೋರುತ್ತಾರೆ. ಉದಾರತೆ, ದಯೆ, ಪ್ರೀತಿ ಇವರಲ್ಲಿ ಇರುವುದರಿಂದ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವುದು, ಬದಲಾವಣೆ ಮಾಡಿಕೊಳ್ಳುವುದು ಇವರಿಗೆ ಸಾಧ್ಯವಿದೆ. ಕಠಿಣ ಸನ್ನಿವೇಶಗಳಲ್ಲಿ, ತ್ವರಿತವಾಗಿ ತಮ್ಮನ್ನು ತಾವು ಚೇತರಿಸಿಕೊಳ್ಳುವ, ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಳ್ಳುವ ಶಕ್ತಿ ಇವರಲ್ಲಿ ಹೆಚ್ಚೇ ಇದೆ. ಆತ್ಮವಿಶ್ವಾಸ, ಶಾಂತ, ಪ್ರಜ್ಞಾಪೂರ್ವಕ, ನಿಷ್ಠಾವಂತ, ಭಾವೋದ್ರಿಕ್ತ, ಸ್ವತಂತ್ರ, ವಿಶ್ವಾಸಾರ್ಹ, ನಿರಾತಂಕ, ಶ್ರದ್ಧಾವಂತರಾಗಿರುವ ಇವರು ಕಾಲಕ್ಕೆ ತಕ್ಕಂತೆ ಪರಿವರ್ತನೆ ತಂದುಕೊಳ್ಳುತ್ತಾರೆ. ಅಲ್ಲದೆ ಇವರು ಬಲಶಾಲಿ, ಸಹಿಷ್ಣು. ಆದರೆ ಅಪ್ರಾಮಾಣಿಕರನ್ನು ಇವರು ಹತ್ತಿರ ಸೇರಿಸಿಕೊಳ್ಳಲಾರರು. ಇಷ್ಟೆಲ್ಲ ಇದ್ದರೂ ಇವರಲ್ಲಿಯೂ ಅಸೂಯೆ, ಸ್ವಕೇಂದ್ರಿತ ಮನೋಭಾವ, ಅಹಂಕಾರ, ಸಂವೇದನಾರಹಿತ ನಡೆವಳಿಕೆಗಳೂ ಆಗಾಗ ಪ್ರದರ್ಶನಗೊಳ್ಳುತ್ತಿರುತ್ತವೆ.
ಯಾರು ಯಾರೊಂದಿಗೆ ಹೊಂದಿಕೊಳ್ಳಬಹುದು?
Published On - 3:02 pm, Mon, 13 June 22