ಭಾರತೀಯರು ಕೈಯಲ್ಲಿ ಊಟ ಮಾಡೋದನ್ನು ಅಣಕಿಸಿದ ಅಮೆರಿಕನ್ ವ್ಯಕ್ತಿಗೆ ತಿಳಿವಳಿಕೆ ಹೇಳಿದ ಸಂಜೀವ್ ಸನ್ಯಾಲ್

ಭಾರತದಲ್ಲಿ ಸಾಂಪ್ರದಾಯಿಕವಾಗಿ ಕೈಯಿಂದ ಊಟ ಮಾಡಲಾಗುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ಫೋರ್ಕ್, ಚಮಚ, ಚಾಕು ಇತ್ಯಾದಿಯನ್ನು ಬಳಸಿ ತಿನ್ನಲಾಗುತ್ತದೆ. ಆದರೆ, ಭಾರತೀಯರು ಕೈಯಿಂದ ಊಟ ಮಾಡುತ್ತಿರುವ ವಿಡಿಯೋವನ್ನು ಅಮೆರಿಕನ್ ವ್ಯಕ್ತಿಯೊಬ್ಬ ಟ್ವೀಟ್ ಮಾಡಿ ಅಪಹಾಸ್ಯ ಮಾಡಿದ್ದಾನೆ. ಆರ್ಥಿಕ ತಜ್ಞ ಸಂಜೀವ್ ಸನ್ಯಾಲ್ ಆ ವ್ಯಕ್ತಿಗೆ ತಿಳಿವಳಿಕೆ ನೀಡಲು ಯತ್ನಿಸಿದ್ದಾರೆ.

ಭಾರತೀಯರು ಕೈಯಲ್ಲಿ ಊಟ ಮಾಡೋದನ್ನು ಅಣಕಿಸಿದ ಅಮೆರಿಕನ್ ವ್ಯಕ್ತಿಗೆ ತಿಳಿವಳಿಕೆ ಹೇಳಿದ ಸಂಜೀವ್ ಸನ್ಯಾಲ್
ಸಂಜೀವ್ ಸನ್ಯಾಲ್ ಅವರ ಎಕ್ಸ್ ಪೋಸ್ಟ್ ಪ್ರತಿಕ್ರಿಯೆ
Image Credit source: ICG and Sanjeev Sanyal's X account

Updated on: Sep 06, 2026 | 6:26 PM

ನವದೆಹಲಿ, ಸೆಪ್ಟೆಂಬರ್ 6: ಭಾರತೀಯರು ಸಾಂಪ್ರದಾಯಿಕವಾಗಿ ಕೈಯಲ್ಲಿ ಊಟ ಮಾಡುವ ಪದ್ಧತಿಯನ್ನು ಅಪಹಾಸ್ಯ ಮಾಡುವ ಅಥವಾ ವಿಮರ್ಶಿಸುವ ಪಾಶ್ಚಿಮಾತ್ಯ ಮನಸ್ಥಿತಿಗೆ ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ (EAC-PM) ಸದಸ್ಯ ಹಾಗೂ ಖ್ಯಾತ ಆರ್ಥಿಕ ತಜ್ಞ ಸಂಜೀವ್ ಸನ್ಯಾಲ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತೀಯ ಸಂಸ್ಕೃತಿಯಲ್ಲಿ ಆಹಾರವನ್ನು ಸ್ಪರ್ಶಿಸಿ ಸೇವಿಸುವುದು ಕೇವಲ ಅಭ್ಯಾಸವಲ್ಲ, ಅದು ಆಹಾರದೊಂದಿಗಿನ ಸಂಪರ್ಕ ಮತ್ತು ಸಭ್ಯತೆಯ ಸಂಕೇತವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

“ನಿಮ್ಮ ಆಹಾರವನ್ನು ಸ್ಪರ್ಶಿಸಲು ನಿಮಗೆ ಅಸಹ್ಯ ಅಥವಾ ಕಷ್ಟವೆನಿಸಿದರೆ, ನೀವು ಅದನ್ನು ತಿನ್ನಲು ಯೋಗ್ಯರಲ್ಲ ಅಥವಾ ಅದನ್ನು ಸೇವಿಸಬಾರದು” ಎಂದು ಸನ್ಯಾಲ್ ಮಾರ್ಮಿಕವಾಗಿ ಹೇಳಿದ್ದಾರೆ. @akafaceUS ಎನ್ನುವ ಎಕ್ಸ್ ಬಳಕೆದಾರನೊಬ್ಬ ಭಾರತೀಯ ಸಾಂಪ್ರದಾಯಿಕ ಊಟದ ಶೈಲಿಯ ವಿಡಿಯೋವನ್ನು ಹಂಚಿಕೊಂಡು, ಅವರೆಲ್ಲರೂ ಯಾಕೆ ಕೈಯಿಂದ ತಿನ್ನುತ್ತಾರೆ ಎಂದು ಕುಹಕವಾಡಿದ್ದಾನೆ. ಅದಕ್ಕೆ ಸನ್ಯಾಲ್ ಉತ್ತರ ಕೊಟ್ಟಿದ್ದಾರೆ.

ಇದನ್ನೂ ಓದಿ: ನದಿ ಸ್ವಚ್ಛಗೊಳಿಸಿ ವೈರಲ್ ಆಗಿದ್ದ ಮಧ್ಯಪ್ರದೇಶದ ಬಿಟ್ಟು ತಬಾಹಿಗೆ ನೆದರ್ಲೆಂಡ್ಸ್​ ಕಂಪನಿಯಿಂದ ಉದ್ಯೋಗದ ಆಫರ್

ಬಾಯಿಗೆ ಹಾಕುತ್ತಿರುವಿರಾದರೆ ಕೊಳಕಾದ ಕೈ ಬದಲು ಲೋಹದ ಉಪಕರಣ ಬಳಸಬಹುದಲ್ಲ ಎಂದು ಮತ್ತೊಬ್ಬರು ಕೇಳಿದ ಪ್ರಶ್ನೆಗೂ ಸನ್ಯಾಲ್ ಅವರು, ಲೋಹ ಉಪಕರಣ ತೊಳೆಯುವಷ್ಟೇ ಸುಲಭವಾಗಿ ಕೈಯನ್ನೂ ತೊಳೆಯಬಹುದು ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ಸಂಜೀವ್ ಸನ್ಯಾಲ್ ಎಕ್ಸ್ ಪೋಸ್ಟ್

ಚಮಚ-ಫೋರ್ಕ್ ಬಳಕೆಯ ಮೇಲಿನ ಅಪಹಾಸ್ಯ: ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರತಿಯೊಂದಕ್ಕೂ ಚಮಚ, ಫೋರ್ಕ್ (Fork) ಮತ್ತು ಕತ್ತರಿ ಬಳಸುವುದು ನಾಗರಿಕತೆಯ ಸಂಕೇತ ಎಂದು ಭಾವಿಸಲಾಗುತ್ತದೆ. ಆದರೆ, ಭಾರತದಲ್ಲಿ ಕೈಗಳಿಂದ ಊಟ ಮಾಡುವುದು ಸಾವಿರಾರು ವರ್ಷಗಳ ಶುಚಿತ್ವ ಮತ್ತು ಸಂಸ್ಕೃತಿಯ ಭಾಗವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜಾಗತಿಕ ವೇದಿಕೆಯಲ್ಲಿ ಸಂಸ್ಕೃತಿಯ ಹೆಮ್ಮೆ: ಜಾಗತಿಕ ಮಟ್ಟದಲ್ಲಿ ಭಾರತದ ಆಚಾರ-ವಿಚಾರಗಳನ್ನು ಕೀಳಾಗಿ ನೋಡುವ ಮನಸ್ಥಿತಿಯನ್ನು ತಳ್ಳಿಹಾಕಿದ ಅವರು, ಭಾರತೀಯ ಪದ್ಧತಿಗಳು ತರ್ಕಬದ್ಧ ಹಾಗೂ ನೈರ್ಮಲ್ಯದಿಂದ ಕೂಡಿವೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ‘ಗುರಿ’ ಮುಟ್ಟಲು ಒಂದು ಸಂಘಟನೆಗೆ ಅಸಾಧ್ಯ, ಖಾಸಗಿ ಉದ್ಯಮವೂ ಬೇಕು: ಇಸ್ರೋ ಉದ್ಯೋಗಿಗಳ ಅಸಮಾಧಾನಕ್ಕೆ ಪವನ್ ಗೋಯೆಂಕಾ ಉತ್ತರ

ಸನ್ಯಾಲ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ಪಡೆದುಕೊಂಡಿದ್ದು, ಹಲವು ನೆಟ್ಟಿಗರು ಭಾರತೀಯ ಆಹಾರ ಪದ್ಧತಿಯ ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಬೆಂಬಲಿಸಿ ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us