AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನದಿ ಸ್ವಚ್ಛಗೊಳಿಸಿ ವೈರಲ್ ಆಗಿದ್ದ ಮಧ್ಯಪ್ರದೇಶದ ಬಿಟ್ಟು ತಬಾಹಿಗೆ ನೆದರ್ಲೆಂಡ್ಸ್​ ಕಂಪನಿಯಿಂದ ಉದ್ಯೋಗದ ಆಫರ್!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ 'ಬಿಟ್ಟು ತಬಾಹಿ' ಎಂಬ ಯುವಕನ ನಿಜವಾದ ಹೆಸರು ಸುರೇಂದ್ರ ಸಿಂಗ್ ಚೌಧರಿ. 20 ವರ್ಷದ ಈ ಯುವಕ ಮಧ್ಯಪ್ರದೇಶದ ರಾಜಗಢ್ ಜಿಲ್ಲೆಯ ಬಿಯಾವೋರಾ ಪಟ್ಟಣದ ನಿವಾಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಇನ್​ಫ್ಲುಯೆನ್ಸರ್​​ಗಳಿದ್ದಾರೆ. ಆದರೆ ಬಿಟ್ಟು ತಬಾಹಿ ಅವರೆಲ್ಲರಿಗಿಂತಲೂ ಬಹಳ ಭಿನ್ನ. ತ್ಯಾಜ್ಯಗಳಿಂದ ತುಂಬಿದ್ದ ನದಿಯನ್ನು ಸ್ವಚ್ಛಗೊಳಿಸಿದ್ದ ಅವರ ವಿಡಿಯೋ ಭಾರೀ ವೈರಲ್ ಆಗಿತ್ತು. ಇದೇ ರೀತಿ ಹಲವು ನದಿ, ಕೆರೆಗಳ ಶುದ್ಧೀಕರಣದಲ್ಲಿ ತೊಡಗಿರುವ ಈ ಯುವಕನ ಕಾರ್ಯಕ್ಕೆ ಮೆಚ್ಚಿ ನೆದರ್ಲೆಂಡ್​​ನಿಂದ ಉದ್ಯೋಗದ ಆಫರ್ ಬಂದಿದೆ!

ನದಿ ಸ್ವಚ್ಛಗೊಳಿಸಿ ವೈರಲ್ ಆಗಿದ್ದ ಮಧ್ಯಪ್ರದೇಶದ ಬಿಟ್ಟು ತಬಾಹಿಗೆ ನೆದರ್ಲೆಂಡ್ಸ್​ ಕಂಪನಿಯಿಂದ ಉದ್ಯೋಗದ ಆಫರ್!
Bittu TabahiImage Credit source: TV9
ಸುಷ್ಮಾ ಚಕ್ರೆ
|

Updated on:Sep 05, 2026 | 6:28 PM

Share

ನವದೆಹಲಿ, ಸೆಪ್ಟೆಂಬರ್ 5: ಮಧ್ಯಪ್ರದೇಶದ 20 ವರ್ಷದ ಯುವಕನೊಬ್ಬ ತೀವ್ರವಾಗಿ ಕಲುಷಿತಗೊಂಡಿದ್ದ ನದಿಯನ್ನು ಸ್ವಚ್ಛಗೊಳಿಸಲು ನಡೆಸಿದ ಶ್ರಮವು ಅಂತರ್ಜಾಲದಲ್ಲಿ ವ್ಯಾಪಕ ಗಮನ ಸೆಳೆದ ಬೆನ್ನಲ್ಲೇ, ಆತನಿಗೆ ನಿರೀಕ್ಷಿಸದ ದೊಡ್ಡ ಅದೃಷ್ಟ ಖುಲಾಯಿಸಿದೆ. ‘ಬಿಟ್ಟು ತಬಾಹಿ’ ಎಂದೇ ಜನಪ್ರಿಯರಾಗಿರುವ ಸುರೇಂದ್ರ ಸಿಂಗ್ ಚೌಧರಿ ಎಂಬ ಯುವಕ, ಅಜ್ನಾರ್ ನದಿಯಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಪಾಚಿ ಹಾಗೂ ಜಮಾ ಆಗಿದ್ದ ಕಸವನ್ನು ಒಂಟಿಯಾಗಿ ತೆರವುಗೊಳಿಸುತ್ತಿದ್ದರು. ಈ ಕಾರ್ಯವು ‘ದಿ ಓಷನ್ ಕ್ಲೀನಪ್’ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಬೋಯನ್ ಸ್ಲ್ಯಾಟ್ ಅವರ ಗಮನ ಸೆಳೆದಿದೆ.

ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್ ಬಿಟ್ಟು ತಬಾಹಿ ಅಲಿಯಾಸ್ ಸುರೇಂದ್ರ ಸಿಂಗ್ ಚೌಧರಿ ಅತ್ಯಂತ ಕಲುಷಿತಗೊಂಡಿದ್ದ ಮಧ್ಯಪ್ರದೇಶದ ಅಜ್ನಾರ್ ನದಿಯನ್ನು ಸ್ವತಃ ತಾವೊಬ್ಬರೇ ನಿರಂತರವಾಗಿ ಶ್ರಮಿಸಿ ಸ್ವಚ್ಛಗೊಳಿಸಿದ ವಿಡಿಯೋಗಳು ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದವು. ಈ ಕಾರ್ಯವನ್ನು ಮೆಚ್ಚಿ ನೆದರ್ಲೆಂಡ್ಸ್ ಮೂಲದ ಜಾಗತಿಕ ಪರಿಸರ ಸಂಸ್ಥೆ ‘ದಿ ಓಷನ್ ಕ್ಲೀನಪ್’ನ ಸಿಇಒ ಬೋಯನ್ ಸ್ಲ್ಯಾಟ್ ನೇರವಾಗಿ ಉದ್ಯೋಗದ ಆಫರ್ ನೀಡಿದ್ದಾರೆ.

ಸುರೇಂದ್ರ ಸಿಂಗ್ ಈ ವರ್ಷದ ಜನವರಿಯಿಂದ ಅಜ್ನಾರ್ ನದಿಯಲ್ಲಿದ್ದ ಪ್ಲಾಸ್ಟಿಕ್ ಬಾಟಲಿಗಳು, ಹಳೆಯ ಬಟ್ಟೆಗಳು, ಪಾಚಿ ಹಾಗೂ ಟನ್‌ಗಟ್ಟಲೆ ಕಸವನ್ನು ಸ್ವತಃ ಕೈಯಾರೆ ತೆರವುಗೊಳಿಸಲು ಪ್ರಾರಂಭಿಸಿದರು. ಈ ನದಿಯನ್ನು ಸ್ವಚ್ಛಗೊಳಿಸುವ ಅಭಿಯಾನಕ್ಕಾಗಿ ಅವರು ತಮ್ಮ ಕೈಯಿಂದಲೇ ಸುಮಾರು 30,000 ರೂ. ವೆಚ್ಚ ಮಾಡಿದ್ದಾರೆ.

ಇದನ್ನೂ ಓದಿ: ಮಾನಸಿಕ ಅಸ್ವಸ್ಥ ಮಹಿಳೆ ಮೇಲಿನ ದೌರ್ಜನ್ಯ ತಡೆದ ಬೀದಿ ನಾಯಿ, ವಿಡಿಯೋ ವೈರಲ್

ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಹಂಚಿಕೊಳ್ಳುತ್ತಿದ್ದ ವಿಡಿಯೋಗಳು ಕ್ರಮೇಣ ಲಕ್ಷಾಂತರ ವೀಕ್ಷಣೆಗಳನ್ನು ಪಡೆದವು. ನದಿಯ ‘ಸ್ವಚ್ಛತೆಗೆ ಮೊದಲು’ ಮತ್ತು ‘ಸ್ವಚ್ಛತೆಯ ನಂತರದ’ ಫೋಟೋಗಳು ವೈರಲ್ ಆಗಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದವು.

ವಿದೇಶದಿಂದ ಉದ್ಯೋಗದ ಆಫರ್:

ನೆದರ್ಲೆಂಡ್ಸ್​ ಮೂಲದ ‘ದಿ ಓಷನ್ ಕ್ಲೀನಪ್’ ಸಂಸ್ಥೆಯ 29 ವರ್ಷದ ಡಚ್ ಸಂಶೋಧಕ ಹಾಗೂ ಸಿಇಒ ಬೋಯನ್ ಸ್ಲ್ಯಾಟ್, ಸುರೇಂದ್ರ ಅವರ ನದಿ ಸ್ವಚ್ಛತೆಯ ಪೋಸ್ಟ್‌ಗೆ ನೇರವಾಗಿ ಸ್ಪಂದಿಸಿ ನಮ್ಮೊಂದಿಗೆ ಬಂದು ಕೆಲಸ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ. ಸಮುದ್ರಗಳು ಮತ್ತು ನದಿಗಳಲ್ಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸುವ ವಿಶ್ವಪ್ರಸಿದ್ಧ ಸಂಸ್ಥೆಯಿಂದ ಬಂದ ಈ ಆಫರ್, ಸುರೇಂದ್ರ ಅವರ ಜೀವನವನ್ನೇ ಬದಲಾಯಿಸಬಲ್ಲ ಮಹತ್ವದ ಮೈಲಿಗಲ್ಲಾಗಿದೆ.

ಬೋಯನ್ ಸ್ಲ್ಯಾಟ್ ಯಾರು?:

ಬೋಯನ್ ಸ್ಲ್ಯಾಟ್ ಅವರು ನೆದರ್ಲೆಂಡ್ಸ್ ಮೂಲದ ಲಾಭರಹಿತ ಸಂಸ್ಥೆಯಾದ ‘ದಿ ಓಷನ್ ಕ್ಲೀನಪ್’ನ ಸಂಸ್ಥಾಪಕ ಮತ್ತು ಸಿಇಒ. ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಪ್ರಕಾರ, “ಬೋಯನ್ ಸ್ಲ್ಯಾಟ್ ಒಬ್ಬ ಡಚ್ ಸಂಶೋಧಕ ಹಾಗೂ ಉದ್ಯಮಿಯಾಗಿದ್ದು, ಜಾಗತಿಕ ಪರಿಸರ ಸಮಸ್ಯೆಗಳನ್ನು ಪರಿಹರಿಸಲು ಬೃಹತ್ ಯೋಜನೆಗಳನ್ನು ರೂಪಿಸುವಲ್ಲಿ ಆಸಕ್ತಿ ಹೊಂದಿದ್ದಾರೆ. ಸುರೇಂದ್ರ ಅವರ ಕೆಲಸದ ಕುರಿತಾದ ಪೋಸ್ಟ್‌ಗೆ ಬೋಯನ್ ಸ್ಲ್ಯಾಟ್ “ನಮ್ಮೊಂದಿಗೆ ಬಂದು ಕೆಲಸ ಮಾಡಿ” ಎಂದು ಕಾಮೆಂಟ್ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

‘ದಿ ಓಷನ್ ಕ್ಲೀನಪ್’ ನೆದರ್ಲೆಂಡ್ಸ್ ಮೂಲದ ಸಂಸ್ಥೆಯಾಗಿದ್ದು, ಸಾಗರಗಳಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಲು ಆಧುನಿಕ ತಂತ್ರಜ್ಞಾನ ಹಾಗೂ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತದೆ. 2040ರ ವೇಳೆಗೆ ಸಾಗರಗಳಲ್ಲಿ ತೇಲುವ ಶೇ. 90ರಷ್ಟು ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ತೆರವುಗೊಳಿಸುವುದು ಈ ಸಂಸ್ಥೆಯ ಗುರಿಯಾಗಿದೆ.

ಆನಂದ್ ಮಹೀಂದ್ರಾರಿಂದಲೂ ಮೆಚ್ಚುಗೆ:

ಇದಕ್ಕೂ ಮುನ್ನ, ಸುರೇಂದ್ರ ಅವರು ಕೇವಲ ‘ಲೈಕ್ಸ್’ ಮತ್ತು ‘ಫಾಲೋವರ್ಸ್’ ಪಡೆಯಲು ಈ ಕೆಲಸ ಮಾಡುತ್ತಿದ್ದಾರೆ ಎಂದು ಕೆಲವರು ಟೀಕಿಸಿದಾಗ, ಪ್ರಸಿದ್ಧ ಉದ್ಯಮಿ ಆನಂದ್ ಮಹೀಂದ್ರಾ ಸುರೇಂದ್ರ ಪರವಾಗಿ ಧ್ವನಿ ಎತ್ತಿದ್ದರು. “ಸಾಮಾಜಿಕ ಜಾಲತಾಣಗಳು ವ್ಯರ್ಥ ವಿಷಯಗಳನ್ನು ಉತ್ತೇಜಿಸುತ್ತವೆ ಎಂದು ನಾವು ದೂರುತ್ತೇವೆ. ಹಾಗಿರುವಾಗ ‘ಲೈಕ್ಸ್’ ಪಡೆಯುವ ಬಯಕೆಯು ಪರಿಸರ ಸ್ವಚ್ಛಗೊಳಿಸುವಂತಹ ಒಂದು ಒಳ್ಳೆಯ ಕೆಲಸಕ್ಕೆ ಪ್ರೇರಣೆಯಾದರೆ ಅದರಲ್ಲಿ ತಪ್ಪೇನೂ ಇಲ್ಲ” ಎಂದು ಆನಂದ್ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:27 pm, Sat, 5 September 26

Follow Us