AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗುರಿ’ ಮುಟ್ಟಲು ಒಂದು ಸಂಘಟನೆಗೆ ಅಸಾಧ್ಯ, ಖಾಸಗಿ ಉದ್ಯಮವೂ ಬೇಕು: ಇಸ್ರೋ ಉದ್ಯೋಗಿಗಳ ಅಸಮಾಧಾನಕ್ಕೆ ಪವನ್ ಗೋಯೆಂಕಾ ಉತ್ತರ

ವರ್ಷಕ್ಕೆ 50 ರಾಕೆಟ್ ಉಡಾವಣೆ ಮಾಡುವ ಮಹತ್ವಾಕಾಂಕ್ಷೆ ಗುರಿ ತಲುಪಲು ಇಸ್ರೋ ಒಂದರಿಂದ ಆಗಲ್ಲ ಎಂದು ಪವನ್ ಗೋಯಂಕಾ ಹೇಳಿದ್ಧಾರೆ. ಗುರಿ ಮುಟ್ಟಬೇಕಾದರೆ ಸರ್ಕಾರ ಮತ್ತು ಖಾಸಗಿ ಉದ್ಯಮಗಳು ಒಟ್ಟಿಗೆ ಕೆಲಸ ಮಾಡಬೇಕು ಎಂದು In-SPACe ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ. ಇಸ್ರೋ ಅಭಿವೃದ್ಧಿಪಡಿಸಿದ ರಾಕೆಟ್ ತಂತ್ರಜ್ಞಾನಗಳನ್ನು ಸರ್ಕಾರವು ಖಾಸಗಿ ಸಂಸ್ಥೆಗಳಿಗೆ ವಹಿಸುತ್ತಿರುವುದಕ್ಕೆ ಅಸಮಾಧಾನ ಎದ್ದ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.

‘ಗುರಿ’ ಮುಟ್ಟಲು ಒಂದು ಸಂಘಟನೆಗೆ ಅಸಾಧ್ಯ, ಖಾಸಗಿ ಉದ್ಯಮವೂ ಬೇಕು: ಇಸ್ರೋ ಉದ್ಯೋಗಿಗಳ ಅಸಮಾಧಾನಕ್ಕೆ ಪವನ್ ಗೋಯೆಂಕಾ ಉತ್ತರ
ಜಿಎಸ್​ಎಲ್​ವಿ ರಾಕೆಟ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 06, 2026 | 5:02 PM

Share

ನವದೆಹಲಿ, ಸೆಪ್ಟೆಂಬರ್ 6: ಮುಂದಿನ ದಿನಗಳಲ್ಲಿ ವರ್ಷಕ್ಕೆ 50 ಉಡಾವಣೆ ಮಾಡುವ ಮಹತ್ವಾಕಾಂಕ್ಷಿ ಗುರಿ ಇದೆ. ಇದನ್ನು ಮುಟ್ಟಲು ಇಸ್ರೋ ಸಂಘಟನೆಯೊಂದರಿಂದ ಅಸಾಧ್ಯ. ಖಾಸಗಿ ಉದ್ಯಮವೂ ಕೈಜೋಡಿಸಬೇಕಾಗುತ್ತದೆ ಎಂದು ಉದ್ಯಮಿ ಹಾಗೂ ಇನ್​ಸ್ಪೇಸ್ (In-SPACe) ಛೇರ್ಮನ್ ಪವನ್ ಕೆ ಗೋಯಂಕಾ ಹೇಳಿದ್ದಾರೆ. ಇಸ್ರೋ ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ರಾಷ್ಟ್ರೀಯ ಆಸ್ತಿಯಾಗಿದ್ದು ಅದನ್ನು ಖಾಸಗಿ ಕ್ಷೇತ್ರಕ್ಕೆ ವಹಿಸಿರುವುದನ್ನು ಪ್ರಶ್ನಿಸಿ ಇಸ್ರೋ ಉದ್ಯೋಗಿಗಳ ಕೆಲ ಸಂಘಟನೆಗಳು ತಗಾದೆ ಎತ್ತಿವೆ. ಈ ಹಿನ್ನೆಲೆಯಲ್ಲಿ ಪವನ್ ಗೋಯೆಂಕಾ ಅವರು ಸರ್ಕಾರದ ನಡೆಯನ್ನು ಸಮರ್ಥಿಸಿ, ವಿವರಣೆ ಕೊಟ್ಟಿದ್ದಾರೆ.

‘ಐದು ವರ್ಷಗಳ ಹಿಂದೆ ಭಾರತವು ಬಾಹ್ಯಾಕಾಶ ಕ್ಷೇತ್ರವನ್ನು ಮುಕ್ತಗೊಳಿಸಿದಾಗ ಎರಡು ಸ್ಪಷ್ಟ ಉದ್ದೇಶಗಳಿದ್ದುವು: ಇಸ್ರೋ ಹೊಸ ಸಾಧನೆಗಳನ್ನು ಮಾಡಬೇಕು, ಮತ್ತು ಖಾಸಗಿ ಉದ್ಯಮವು ವಿಸ್ತರಣೆ ಮಾಡಲು ಶಕ್ತವಾಗಬೇಕು. ಇವತ್ತು ಆ ಎರಡೂ ಉದ್ದೇಶ ಈಡೇರುವ ನಿಟ್ಟಿನಲ್ಲಿ ಬೆಳವಣಿಗೆ ಆಗುತ್ತಿರುವುದನ್ನು ಕಾಣಬಹುದು’ ಎಂದು ಪವನ್ ಗೋಯೆಂಕಾ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಹೇಳಿದ್ದಾರೆ.

‘ಇಸ್ರೋ ಇದೀಗ ಭೂ ಪರಿವೀಕ್ಷಣಾ ಉಪಗ್ರಹವಾದ ಇಒಎಸ್-05 ಉಡಾವಣೆ ಮಾಡಿದೆ. ಇದು ಆರಂಭ ಮಾತ್ರ. ಇದೇ ವೇಳೆ, ಐದು ವರ್ಷದ ಹಿಂದೆ ಬೆರಳೆಣಿಯಷ್ಟಿದ್ದ ಸ್ಪೇಸ್ ಸ್ಟಾರ್ಟಪ್​ಗಳ ಸಂಖ್ಯೆ ಇವತ್ತು 450ಕ್ಕೂ ಹೆಚ್ಚಿದೆ. ಖಾಸಗಿ ಉದ್ಯಮವು ರಾಕೆಟ್ ಅನ್ನು ಕಕ್ಷೆಗೆ ಕಳುಹಿಸಿದ್ದಾಗಿದೆ. ಈಗ 2030ರಷ್ಟರಲ್ಲಿ ವರ್ಷಕ್ಕೆ 50 ರಾಕೆಟ್ ಉಡಾವಣೆ ಆಗುವ ಗುರಿ ಇದೆ. ಇದನ್ನು ಒಂದು ಸಂಘಟನೆ ಮಾತ್ರದಿಂದ ಈಡೇರಿಸಲು ಸಾಧ್ಯವಿಲ್ಲ. ಸರ್ಕಾರ ಮತ್ತು ಖಾಸಗಿ ಉದ್ಯಮ ಎರಡೂ ಕೂಡ ಒಟ್ಟುಗೂಡಿ ಮುನ್ನಡೆಯಬೇಕು’ ಎಂದು ಅವರು ತಿಳಿಸಿದ್ದಾರೆ.

ಪವನ್ ಗೋಯೆಂಕಾ ಅವರ ಎಕ್ಸ್ ಪೋಸ್ಟ್

ಇದನ್ನೂ ಓದಿ: ಭಾರತದ ಫಾರೆಕ್ಸ್ ನಿಧಿ 740 ಬಿಲಿಯನ್ ಡಾಲರ್; ಹೊಸ ಸಾರ್ವಕಾಲಿಕ ದಾಖಲೆ; ಒಂದೇ ವಾರದಲ್ಲಿ ಲಕ್ಷ ಕೋಟಿ ರೂ ಹೆಚ್ಚಳ

ಇಸ್ರೋ ಉದ್ಯೋಗಿಗಳ ಸಂಘಟನೆಗಳ ಆತಂಕವೇನು?

ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೂ ತೆರೆದಿರುವ ವಿಚಾರದಲ್ಲಿ ಕೆಲ ಅಂಶಗಳ ಬಗ್ಗೆ ಇಸ್ರೋ ನೌಕರರ ಸಂಘಟನೆಗಳು ಸ್ಪಷ್ಟನೆ ಬಯಸಿವೆ. ಹಾಗೆಯೇ, ಇಸ್ರೋ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳು ರಾಷ್ಟ್ರೀಯ ಸಂಪತ್ತಾಗಿದ್ದು, ಅವನ್ನು ಖಾಸಗಿಯವರಿಗೆ ವರ್ಗಾವಣೆ ಮಾಡುವುದು ಎಷ್ಟು ಸರಿ ಎಂದೂ ಈ ಸಂಘಟನೆಗಳು ಪ್ರಶ್ನೆ ಮಾಡಿವೆ. ಈ ಸಂಬಂಧ ಇಸ್ರೋ ಛೇರ್ಮನ್ ವಿ ನಾರಾಯಣನ್ ಅವರಿಗೆ ಪತ್ರ ಬರೆದು ಕೇಳಿವೆ.

ಇಸ್ರೋ ನೌಕರರ ಪ್ರಮುಖ ಕಾಳಜಿ ಮತ್ತು ಬೇಡಿಕೆಗಳು

  • ತಂತ್ರಜ್ಞಾನ ರಾಷ್ಟ್ರೀಯ ಸಂಪತ್ತು: ದಶಕಗಳಿಂದ ಇಸ್ರೋದ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಸತತ ಪರಿಶ್ರಮದಿಂದ ಅಭಿವೃದ್ಧಿಪಡಿಸಿದ ತಂತ್ರಜ್ಞಾನ, ರಾಕೆಟ್ ವಿನ್ಯಾಸಗಳು ಹಾಗೂ ಉಡ್ಡಯನ ಅಂಗಳಗಳು (Launch infrastructures) ಸಾರ್ವಜನಿಕ ಮತ್ತು ರಾಷ್ಟ್ರೀಯ ಸಂಪತ್ತಾಗಿವೆ. ಇವುಗಳನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸುವಾಗ ಸೂಕ್ತ ಪಾರದರ್ಶಕತೆ ಕಾಯ್ದುಕೊಳ್ಳಬೇಕು.
  • ನೌಕರರ ಉದ್ಯೋಗ ಭದ್ರತೆ: ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಸಂಸ್ಥೆಗಳ (In-SPACe & NSIL ಮೂಲಕ) ಪ್ರವೇಶ ಹೆಚ್ಚಾಗುತ್ತಿರುವುದರಿಂದ, ಇಸ್ರೋದ ಹಾಲಿ ಉದ್ಯೋಗಿಗಳ ಭವಿಷ್ಯ ಮತ್ತು ಉದ್ಯೋಗ ಭದ್ರತೆಯ ಕುರಿತು ಸರ್ಕಾರ ಸ್ಪಷ್ಟ ನಿಯಮಾವಳಿಗಳನ್ನು ರೂಪಿಸಬೇಕು.
  • ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ: ಇಸ್ರೋ ಸಂಸ್ಥೆಯನ್ನು ಕೇವಲ ವಾಣಿಜ್ಯಿಕ ಉಡ್ಡಯನಗಳಿಗೆ ಸೀಮಿತಗೊಳಿಸದೆ, ಮೂಲಭೂತ ಬಾಹ್ಯಾಕಾಶ ಸಂಶೋಧನೆ (Basic Space Research) ಮತ್ತು ಆಳ ಬಾಹ್ಯಾಕಾಶ ಪರಿಶೋಧನೆಗೆ (Deep Space Exploration) ಹೆಚ್ಚಿನ ಅನುದಾನ ನೀಡಬೇಕು.

ಇದನ್ನೂ ಓದಿ: ವೈ-ಫೈ ಇರುವ ಎಸಿ ಖರೀದಿಸುವುದು ಉತ್ತಮವೇ? ಇದರ ಪ್ರಯೋಜನಗಳೇನು?

ಭಾರತೀಯ ಬಾಹ್ಯಾಕಾಶ ವಲಯದ ಬೆಳವಣಿಗೆಗೆ ಖಾಸಗಿ ಭಾಗವಹಿಸುವಿಕೆ ಅಗತ್ಯವಾಗಿದ್ದರೂ, ಅದು ಸರ್ಕಾರಿ ಸಂಸ್ಥೆಯಾದ ಇಸ್ರೋದ ಅಸ್ತಿತ್ವ ಮತ್ತು ನೌಕರರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಇರಬೇಕು ಎಂದು ನೌಕರರು ಮನವಿ ಮಾಡಿದ್ದಾರೆ.

ಇತ್ತೀಚೆಗಷ್ಟೇ In-SPACe ಮುಖ್ಯಸ್ಥ ಪವನ್ ಕೆ ಗೋಯೆಂಕಾ ಅವರು ಇಸ್ರೋ ಮತ್ತೆಂದೂ ರಾಕೆಟ್ ತಯಾರಿಸುವುದಿಲ್ಲ ಎನ್ನುವಂತಹ ಹೇಳಿಕೆ ನಿಡಿದ್ದರು. ಇದಕ್ಕೆ ಇಸ್ರೋ ಉದ್ಯೋಗಿಗಳು ಸ್ಪಷ್ಟನೆ ಕೇಳಿರುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us