Viral: ಹಲ್ಲಿಕುತ್ತಿಗೆ; ಸೌಂದರ್ಯ ಚಿಕಿತ್ಸೆಯೊಂದರ ವಿಫಲಕಥೆ
Facebook : ಫೇಸ್ಬುಕ್ನಲ್ಲಿರುವ ಬ್ಯೂಟಿಷಿಯನ್ ಸಲಹೆ ಮೇರೆಗೆ ಈಕೆ ಜೋತುಬಿದ್ದ ತನ್ನ ಗದ್ದವನ್ನು ಸರಿಪಡಿಸಿಕೊಳ್ಳಲು ಸೌಂದರ್ಯ ಚಿಕಿತ್ಸೆಗೆ ಮೊರೆಹೋದರು. ನಂತರ...
Viral: ಎಷ್ಟೇ ವಯಸ್ಸಾಗಿದ್ದರೂ ಯಾವ ಕಾಲಕ್ಕೂ ಫಿಟ್ ಅಂಡ್ ಫೈನ್ ಆಗಿಯೇ ಕಾಣಿಸಿಕೊಳ್ಳಬೇಕೆಂಬ ಉಳ್ಳವರ ಈ ಖಯಾಲಿಗೆ ತಕ್ಕಂತೆ ಕಾಸ್ಮೆಟಿಕ್ ಪ್ರಪಂಚದಲ್ಲಿ ಅನೇಕ ರೀತಿಯ ಸೌಂದರ್ಯ ಚಿಕಿತ್ಸೆಗಳು ಪ್ರಚಲಿತದಲ್ಲಿವೆ. ಅಮೆರಿಕದ 59 ವರ್ಷದ ಜೇನ್ ಬೌಮನ್ ಎಂಬ ಮಹಿಳೆ ತನ್ನ ಗದ್ದದ ಕೆಳಗಿನ ಚರ್ಮವನ್ನು ಬಿಗಿಗೊಳಿಸಿಕೊಳ್ಳಲು ರೂ. 40, 591 ಸುರಿದು ಚಿಕಿತ್ಸೆಯೇನೋ ಮಾಡಿಸಿಕೊಂಡರು. ಆದರೆ ಅವರ ಕತ್ತು ಈಗ ಹಲ್ಲಿಯ ಚರ್ಮದಂತೆ ಕಾಣತೊಡಗಿದೆ. ತೂಕವನ್ನು ಇಳಿಸಿಕೊಂಡ ನಂತರ ಜೋತುಬಿದ್ದ ಕೆಳಗದ್ದವನ್ನು ಸರಿಮಾಡಿಕೊಳ್ಳುವ ಇರಾದೆಯಿಂದ ಈಕೆ ಚಿಕಿತ್ಸೆಯ ಮೊರೆ ಹೋಗಿದ್ದರು.
ಚಿಕಿತ್ಸೆಯ ನಂತರ ಗದ್ದದಿಂದ ಹಿಡಿದು ಕತ್ತಿನವರೆಗೂ ಮೂಡಿದ ಕೆಂಪು ಚುಕ್ಕೆಗಳನ್ನು ಕನ್ನಡಿಯಲ್ಲಿ ನೋಡಿಕೊಂಡ ಜೇಮ್ ಬೌಮನ್ ಭಯದಿಂದ ಹೌಹಾರಿದ್ದಲ್ಲದೆ ಚಿಂತಾಕ್ರಾಂತರೂ ಆಗಿದ್ದಾರೆ. ಫೈಬ್ರೊಪ್ಲಾಸ್ಟ್ ಪ್ಲಾಸ್ಮಾ ಎಂಬ ಶಸ್ತ್ರಚಿಕಿತ್ಸೆಯ ಮೂಲಕ ಚರ್ಮ ಬಿಗಿಗೊಳಿಸಿಕೊಳ್ಳುವ ಈ ಚಿಕಿತ್ಸೆಗೆ ಇವರು ಒಳಪಡುವ ಮೊದಲು ಫೇಸ್ಬುಕ್ನಲ್ಲಿರುವ ಬ್ಯೂಟಿಷಿಯನ್ ಮೂಲಕ ಈ ಕುರಿತು ಸಲಹೆ ಪಡೆದಿದ್ದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ.
‘ಆ ದಿನ ಚಿಕಿತ್ಸೆ ನಂತರ ಚರ್ಮವು ಸುಟ್ಟುಹೋಗುತ್ತಿದೆಯೇನೋ ಎಂಬಂತೆ ಉರಿಯಲಾರಂಭಿಸಿತು. ಚಿಕಿತ್ಸಕರಿಗೆ ಈ ಬಗ್ಗೆ ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ. ನಂತರ ಉರಿಯನ್ನು ಶಮನಗೊಳಿಸಿಕೊಳ್ಳಲು ಕ್ರೀಮ್ ಹಚ್ಚಿಕೊಂಡೆ. ಕುತ್ತಿಗೆಯ ಉದ್ದಕ್ಕೂ ಕೆಂಪುಕಲೆಗಳು ಮೂಡಿದವು. ಬಹಳ ಬೇಸರದಲ್ಲಿ ಈ ಚಿಕಿತ್ಸೆಯ ಕುರಿತು ನನ್ನ ಕೆಟ್ಟ ಅನುಭವವನ್ನು ಬರೆದು ದಾಖಲಿಸಿದೆ, ಈ ಬಗ್ಗೆ ವಕೀಲರಿಗೂ ತಿಳಿಸಿದೆ. ಆದರೆ ನನ್ನ ವಿರುದ್ಧವೇ ಚಿಕಿತ್ಸಕರು ವಕೀಲರ ಬಳಿ ಕೇಸ್ ಫೈಲ್ ಮಾಡಿದ್ದಾರೆ. ಚಿಕಿತ್ಸೆ ಪಡೆದು ವಾರಗಳಾದರೂ ಈ ಭಯಾನಕ ಚುಕ್ಕೆಗಳ ಹೊರತಾಗಿ ಯಾವುದೇ ಬದಲಾವಣೆ ಆಗಿಲ್ಲವೆನ್ನುವುದು ಒಂದೆಡೆಯಾದರೆ, ನನ್ನ ಕುತ್ತಿಗೆಯ ಮೇಲಿರುವ ನೂರಾರು ಚುಕ್ಕೆಗಳಿಂದ ನಾನು ಹಲ್ಲಿಯಂತೆ ಕಾಣುತ್ತಿದ್ದೇನೆ. ’ ಎಂದು ಡೈಲಿ ಮೇಲ್ಗೆ ಜೇಮ್ ತಿಳಿಸಿದ್ದಾರೆ.
ಈ ಅಚಾತುರ್ಯಕ್ಕೆ ಒಳಗಾದ ನಂತರ ಮನೆಯಿಂದ ಹೊರಬರಲು ಅವರಿಗೆ ಸಂಕೋಚವೆನ್ನಿಸುತ್ತಿದೆ, ಬಂದರೂ ಸ್ಕಾರ್ಫ್ ಧರಿಸುತ್ತಿದ್ದಾರೆ. ಈ ಸೌಂದರ್ಯ ಚಿಕಿತ್ಸೆ ಒಟ್ಟಾರೆಯಾಗಿ ನನಗೆ ಸಂಕಟಕ್ಕೀಡು ಮಾಡಿದೆ ಎಂದು ಹೇಳಿಕೊಂಡಿದ್ಧಾರೆ.
ಇನ್ನಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:41 pm, Thu, 11 August 22