ಜಗತ್ತಿನ ಅತ್ಯಂತ ಕೊಳಕು ಮನುಷ್ಯ ಇರಾನಿನ ಅಮೌ ಹಾಜಿ ನಿಧನ
World’s Dirtiest Man : ಸ್ನಾನ ಮಾಡಿದರೆ, ಶುಚಿಯಾದುದನ್ನು ಸೇವಿಸಿದರೆ ಆರೋಗ್ಯ ಹದಗೆಡುತ್ತದೆ ಎಂದು ಭಾವಿಸಿದ್ದ 96ರ ಈ ಮನುಷ್ಯ. 60 ವರ್ಷಗಳ ಕಾಲ ಸ್ನಾನ ಮಾಡದೆ ರಸ್ತೆಬದಿ ಸತ್ತ ಪ್ರಾಣಿಗಳನ್ನು ತಿನ್ನುತ್ತ ಇಷ್ಟು ವರ್ಷ ಬದುಕಿದ್ದ!
Viral : ಏನಾದರೂ ಸಾಧನೆ ಮಾಡುತ್ತ ಸದಾ ಸುದ್ದಿಯಲ್ಲಿರುವುದು ಮತ್ತು ಪ್ರಚಾರ ಪಡೆಯುವುದು ಒಳ್ಳೆಯದು. ಇದು ಸಾಕಷ್ಟು ಕ್ಷೇತ್ರ ಮತ್ತು ವಿಚಾರಗಳಿಗೆ ಅನ್ವಯಿಸುತ್ತದೆ. ಆದರೆ ಕೊಳಕುತನಕ್ಕೆ!? ಈ ವಿಷಯವಾಗಿಯೂ ಸುದ್ದಿಯಾದವರು ನಮ್ಮ ನಡುವೆ ಇದ್ದರು. ಆದರೀಗ ಕಾಲನ ಕರೆಗೆ ಓಗೊಟ್ಟು ಹೊರಟರು. ಅವರೇ ಜಗತ್ತಿನ ಅತ್ಯಂತ ಕೊಳಕು ಮನುಷ್ಯ ಇರಾನ್ನ ಅಮೌ ಹಾಜಿ. ತಮ್ಮ 94ನೇ ವಯಸ್ಸಿನಲ್ಲಿ ಮರಣವನ್ನಪ್ಪಿದ್ದಾನೆ. ಇವರು ನೀರು ಮತ್ತು ಸೋಪು ಬಳಸಿ ಸ್ನಾನ ಮಾಡದೆ ಸುಮಾರು 60 ವರ್ಷಗಳೇ ಕಳೆದಿದ್ದವು. ಇದು ವಿಚಿತ್ರವಾದರೂ ಸತ್ಯ.
ದಕ್ಷಿಣ ಪ್ರಾಂತ್ಯದ ಫಾರ್ಸ್‌ನ ದೇಜ್ಗಾ ಎಂಬ ಗ್ರಾಮದಲ್ಲಿ ಈ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇವರು ಸುಮಾರು 60 ವರ್ಷಗಳಿಂದ ಸಾಬೂನು ಮುಟ್ಟಿರಲಿಲ್ಲ ಸ್ನಾನವನ್ನೂ ಮಾಡಿರಲಿಲ್ಲ. ಇವರನ್ನು ಶುಚಿಗೊಳಿಸಲು ಹಳ್ಳಿಗರು ಪ್ರಯತ್ನಿಸಿದರೂ ಅನೇಕ ಬಾರಿ ಅದು ವಿಫಲಗೊಂಡಿದೆ ಮತ್ತು ಇವರು ಹೀಗಿದ್ದಿರಲು ಕಾರಣ ಇವರ ತಾರುಣ್ಯದಲ್ಲಿ ಘಟಿಸಿದ ಯಾವುದೋ ಒಂದು ಘಟನೆ. ಆ ಘಟನೆಯಿಂದ ಇವರು ಭಾವನಾತ್ಮಕವಾಗಿ ಘಾಸಿಗೊಂಡಿದ್ದರು. ಬದುಕಿನಲ್ಲಿ ನಿರಾಸಕ್ತಿ ತಾಳಿದ್ದಷ್ಟೇ ಅಲ್ಲ ನಿತ್ಯ ವಿಚಿತ್ರ ಜೀವನಶೈಲಿಯ ಬಗ್ಗೆ ವಿಚಿತ್ರ ನಂಬಿಕೆಯನ್ನು ಬೆಳೆಸಿಕೊಂಡುಬಿಟ್ಟಿದ್ದರು.
ರಸ್ತೆಬದಿ ಕಾರು, ವಾಹನಗಳಿಂದ ಅಪಘಾತಕ್ಕೆ ತುತ್ತಾಗಿ ತೀರಿಹೋದ ಪ್ರಾಣಿಗಳೇ ಇವರ ಆಹಾರವಾಗಿತ್ತು. ಪ್ರಾಣಿಗಳ ಮಲ ತುಂಬಿದ ಪೈಪ್ ಅನ್ನು ಸಿಗರೇಟಿನಂತೆ ಸೇದುತ್ತಿದ್ದರು. ಅಕಸ್ಮಾತ್ ಶುಚಿಯನ್ನು ರೂಢಿಸಿಕೊಂಡರೆ ತಾನು ಅನಾರೋಗ್ಯಕ್ಕೆ ಈಡಾಗುತ್ತೇನೆ ಎನ್ನುವುದು ಇವರ ನಂಬಿಕೆಯಾಗಿತ್ತು. ಹಾಗಾಗಿ ತನ್ನ ದಿನಚರಿಯನ್ನು ಹೀಗೆ ಇಷ್ಟೊಂದು ಕೊಳಕು ರೀತಿಯಲ್ಲಿ ರೂಢಿಸಿಕೊಂಡಿದ್ದರು. ಒಟ್ಟೊಟ್ಟಿಗೆ ನಾಲ್ಕೈದು ಸಿಗರೇಟುಗಳನ್ನು ಸೇದುವ ಇವರ ಫೋಟೋ ಅನ್ನು 2014ರಲ್ಲಿ ದಿ ಟೆಹ್ರಾನ್ ಟೈಮ್ಸ್ ಪ್ರಕಟಿಸಿತ್ತು.
ಇವರ ಈ ಕೆಟ್ಟಾತಿಕೆಟ್ಟ ಅವಸ್ಥೆಯಿಂದ ಹೊರತರಲು ಹಳ್ಳಿಗರು ಕೆಲ ತಿಂಗಳುಗಳ ಹಿಂದೆಯೂ ಮನವೊಲಿಸಿ ಸ್ನಾನ ಮಾಡಿಸಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವೇ ಆಗಲಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ದುಃಖ ಎನ್ನುವುದು ಮನುಷ್ಯನನ್ನು ಎಂಥ ವಿಕಾರಕ್ಕೂ, ಅಸಹಜಕ್ಕೂ ತಳ್ಳಬಹುದು ಎನ್ನುವುದಕ್ಕೆ ಈ ವ್ಯಕ್ತಿಗಿಂತ ದೊಡ್ಡ ಉದಾಹರಣೆ ಜಗತ್ತಿನಲ್ಲಿದೆಯೇ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:37 am, Wed, 26 October 22