ಬೇರೆ ಮಕ್ಕಳು 15 ನೇ ವಯಸ್ಸಲ್ಲಿ 10 ನೇ ತರಗತಿಯಲ್ಲಿದ್ದರೆ 10 ವರ್ಷದ ಪೋರಿ ಪಿಕ್ಸೀ ಕರ್ಟಿಸ್ ಆ ವಯಸ್ಸಿಗೆ ಕೆಲಸದಿಂದ ರಿಟೈರಾಗಲಿದ್ದಾಳೆ!

ಬೇರೆ ಮಕ್ಕಳು 15 ನೇ ವಯಸ್ಸಲ್ಲಿ 10 ನೇ ತರಗತಿಯಲ್ಲಿದ್ದರೆ 10 ವರ್ಷದ ಪೋರಿ ಪಿಕ್ಸೀ ಕರ್ಟಿಸ್ ಆ ವಯಸ್ಸಿಗೆ ಕೆಲಸದಿಂದ ರಿಟೈರಾಗಲಿದ್ದಾಳೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 07, 2021 | 4:57 PM

ಪಿಕ್ಸೀ ಮತ್ತು ಅವಳ ಅಮ್ಮ ಇದೇ ವರ್ಷ ಮೇನಲ್ಲಿ ಪಿಕ್ಸೀಸ್ ಫಿಜೆಟ್ಸ್ ಹೆಸರಿನ ಒಂದು ಬಣ್ಣಬಣ್ಣದದ ಆಟಿಕೆಗಳ ಕಂಪನಿ ಆರಂಭಿಸಿದರು. ಈ ಉದ್ದಿಮೆ ಮೊದಲ ತಿಂಗಳು ನಡೆಸಿದ ವಹಿವಾಟು ಎಷ್ಟು ಗೊತ್ತಾ? ಬರೋಬ್ಬರಿ ರೂ. 80 ಲಕ್ಷ!

ನಮ್ಮ ದೇಶದಲ್ಲಿ ಎಸ್ ಎಸ್ ಎಲ್ ಸಿ 16ನೇ ವಯಸ್ಸಿಗೆ ಮುಗಿಯುತ್ತದೆ. ನೀವು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಮತ್ತು ಚುನಾವಣೆಯಲ್ಲಿ ಮತ ಚಲಾಯಿಸಲು ವಯಸ್ಸು 18 ಆಗಿರಬೇಕು. ನೌಕರಿಗೆ ಸೇರಬೇಕಾದರೆ ವಯಸ್ಸು ಕನಿಷ್ಟ 21 ದಾಟಿರಬೇಕು ಮತ್ತು ಎಲ್ಲರಿಗೂ ಗೊತ್ತಿರುವ ಹಾಗೆ ರಿಟೈರ್ ಆಗೋದು 60ನೇ ವಯಸ್ಸಿಗೆ. ಆದರೆ, ನಾವು ನಿಮಗೆ ಒಂದು ಹುಡುಗಿಯ ಕತೆಯನ್ನು ಇಂದು ಹೇಳಲಿದ್ದೇವೆ. ಅವಳ ವಯಸ್ಸು ಈಗ 10 ಮತ್ತು ಇನ್ನೈದು ವರ್ಷಗಳಲ್ಲಿ ಅಂದರೆ ತನ್ನ 15 ನೇ ವಯಸ್ಸಿಗೆ ರಿಟೈರ್ ಆಗಿ ವಿಶ್ರಾಂತಿ ಜೀವನ ನಡೆಸಬೇಕೆಂಬ ಯೋಚನೆಯಲ್ಲಿದ್ದಾಳೆ. ಓದಿನಿಂದ ಅಲ್ಲ ಮಾರಾಯ್ರೇ, ಕೆಲಸದಿಂದ!! ತಮಾಷೆ ಮಾಡ್ತಿದ್ದೀರಾ ಅಂತ ಕೇಳಬೇಡಿ. ಇದು ಸತ್ಯ, ವಾಸ್ತವ.

ಮಕ್ಕಳ ಆಟಿಕೆಗಳು ಮತ್ತು ಕೇಶವಿನ್ಯಾಸ ಪ್ರಸಾದನಗಳ ಉತ್ಪಾದಿಸುವ ಕಂಪನಿಯ ಸಾಮ್ರಾಜ್ಞಿಯಾಗಿರುವ ಆಸ್ಟ್ರೇಲಿಯದ 10-ವರ್ಷ ವಯಸ್ಸಿನ ಪಿಕ್ಸೀ ಕರ್ಟಿಸ್ ಇನ್ನೈದು ವರ್ಷಗಳ ನಂತರ ರಿಟೈರಾಗಲಿದ್ದಾಳೆ ಎಂದು ಅವಳ ತಾಯಿ ಮತ್ತು ಈ ಕಂಪನಿಯ ನಿರ್ದೇಶಕಿ ರಾಕ್ಸಿ ಜೆಸಿಂಕೊ ಹೇಳಿದ್ದಾರೆ.

ಪಿಕ್ಸೀ ಮತ್ತು ಅವಳ ಅಮ್ಮ ಇದೇ ವರ್ಷ ಮೇನಲ್ಲಿ ಪಿಕ್ಸೀಸ್ ಫಿಜೆಟ್ಸ್ ಹೆಸರಿನ ಒಂದು ಬಣ್ಣಬಣ್ಣದದ ಆಟಿಕೆಗಳ ಕಂಪನಿ ಆರಂಭಿಸಿದರು. ಈ ಉದ್ದಿಮೆ ಮೊದಲ ತಿಂಗಳು ನಡೆಸಿದ ವಹಿವಾಟು ಎಷ್ಟು ಗೊತ್ತಾ? ಬರೋಬ್ಬರಿ ರೂ. 80 ಲಕ್ಷ!

ಆಸ್ಟ್ರೇಲಿಯಾದ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಜೆಸಿಂಕೊ, ಮಗಳ ಆದಾಯ ಮತ್ತು ಆಕೆ ಉದ್ದಿಮೆಯನ್ನು ನಡೆಸುತ್ತಿರುವ ರೀತಿಯ ಹಿನ್ನೆಲೆಯಿಂದ ನೋಡಿದರೆ ತಾನು ಬೇಗ ರಿಟೈರಾದರೂ ಆಶ್ಚರ್ಯಪಡಬೇಕಿಲ್ಲ ಅಂತ ಹೇಳಿದ್ದಾರೆ.

 

View this post on Instagram

 

A post shared by Pixie Curtis (@pixiecurtis)

‘ಆಕೆ ಉದ್ದಿಮೆಯನ್ನು ನಡೆಸುತ್ತಿರುವ ವಿಧಾನ ಅತ್ಯಂತ ರೋಮಾಂಚಕಾರಿಯಾಗಿದೆ. ಆಕೆಯಲ್ಲಿರುವ ವ್ಯವಹಾರ ಚತುರತೆ ಮತ್ತು ಬುದ್ಧಿಮತ್ತೆ ನನಗೆ ಈ ವಯಸ್ಸಿನಲ್ಲೂ ಇಲ್ಲ, ಬದುಕಿನಲ್ಲಿ ಯಶ ಕಾಣಬೇಕೆಂಬ ಉಮೇದಿ ಮಾತ್ರ ನನ್ನಲ್ಲಿತ್ತು,’ ಎಂದು ಜೆಸಿಂಕೋ ಹೇಳಿದ್ದಾರೆ.

‘ನಾನು 14 ರ ಪ್ರಾಯದವಳಾಗಿದ್ದಾಗ, ಮ್ಯಾಕ್ಡೋನಾಲ್ಡ್ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಆ ದಿನಗಳಲ್ಲಿ ನನಗೆ ಅದೇ ದೊಡ್ಡ ಸಂಗತಿಯಾಗಿತ್ತು. ಪಿಕ್ಸೀಯಲ್ಲಿರುವ ಉದ್ಯಮಶೀಲತೆ, ವ್ಯಾವಹಾರಿಕ ಚಾತುರ್ಯ ನನಗೆ ಪ್ರೇರಣೆ ಒದಗಿಸುತ್ತವೆ. ಅವೆಲ್ಲವನ್ನು ನಾನು ಅವಳಿಂದ ಕಲಿತಿದ್ದೇನೆ, ಆದರೆ ಅವಳಿಗೆ ಹುಟ್ಟಿನಿಂದಲೇ ದಕ್ಕಿವೆ. ಇದೇ ನನ್ನಲ್ಲಿ ಸಂತೃಪ್ತಿಯ ಭಾವ ಮೂಡಿಸುವ ಅಂಶವಾಗಿದೆ,’ ಎಂದು ಜೆಸಿಂಕೋ ಹೇಳಿದ್ದಾರೆ.

ಪಿಕ್ಸೀ ಇನ್ನೂ ಮಗುವಾಗಿದ್ದಾಗಲೇ, ಜೆಸಿಂಕೋ ಕೇಶ ವಿನ್ಯಾಸಕ್ಕೆ ಸಂಬಂಧಿಸಿದ ಹಲವಾರು ಪ್ರಸಾದನಗಳನ್ನು ಪಿಕ್ಸೀ ಬೋವ್ಸ್ ಹೆಸರಲ್ಲಿ ಲಾಂಚ್ ಮಾಡಿದ್ದರು.
ಆಟಿಕೆ ಮತ್ತು ಪ್ರಸಾದನ ಸಾಮಗ್ರಿಗಳು ಪಿಕ್ಸೀಸ್ ಪಿಕ್ಸ್ ವೆಬ್ಸೈಟ್ ನಲ್ಲಿ ಲಭ್ಯವಿವೆ. ಇವುಗಳೊಂದಿಗೆ ಗೋಂದು, ಸಾಕ್ಸ್, ಹೆಡ್ ಕಿಟ್ ಮತ್ತು ಮಕ್ಕಳ ಅಗತ್ಯದ ಸಾಮಾನುಗಳು ಅದರಲ್ಲಿ ಸಿಗುತ್ತವೆ.

ಇದನ್ನೂ ಓದಿ:   Viral Video: ಕಾಡು ಬೆಕ್ಕನ್ನು ಬೆದರಿಸಿದ ಪುಟ್ಟ ನಾಯಿ ಮರಿ; ವಿಡಿಯೋ ಆಯ್ತು ವೈರಲ್​