ಲಸಿಕೆ ಹಾಕಿಸಿಕೊಳ್ಳದಿರಲು ಜನರಿಂದ ಏನೆಲ್ಲ ನಾಟಕಗಳು, ಕೊಪ್ಪಳದ ಈ ಮಹಿಳೆ ಆಸ್ಕರ್ ಪ್ರಶಸ್ತಿಗೆ ಅರ್ಹಳು!!
ಸಿಬ್ಬಂದಿ ತನಗೆ ಲಸಿಕೆ ಹಾಕುವ ತಯಾರಿ ಮಾಡುತ್ತಿರುವುದು ಗಮನಕ್ಕೆ ಬಂದಕೂಡಲೇ ಪುನ: ಆವೇಷಕ್ಕೊಳಗಾದವಳಂತೆ ತನ್ನ ತಲೆಯನ್ನು ಗಿರಗಿರ ತಿರುಗಿಸಲಾರಂಭಿಸುತ್ತಾಳೆ!
ಲಸಿಕೆ ಹಾಕಿಸಿಕೊಳ್ಳದಿರುವುದಕ್ಕೆ ಜನ ಏನೆಲ್ಲ ಮಾಡುತ್ತಾರೆ ಅನ್ನುವುದಕ್ಕೆ ಒಂದು ಝಲಕ್ ಇಲ್ಲಿದೆ. ವಿಡಿಯೋನಲ್ಲಿ ಕಾಣುತ್ತಿರುವ ಮಹಿಳೆಯ ಹೆಸರು ವೆಂಕಮ್ಮ ಆದರೆ ಆಡು ಭಾಷೆಯಲ್ಲಿ ಅದು ಯಂಕಮ್ಮ ಆಗಿಬಿಡುತ್ತದೆ. ಗ್ರಾಮಗಳಲೆಲ್ಲ ಹಾಗೇನೇ, ಗ್ರಾಮರ್ ಗಾಳಿಗೆ ತೂರಿಕೊಂಡು ಹೋಗುತ್ತದೆ. ವಿಡಿಯೋನಲ್ಲಿ ನಿಮಗೆ ಕಾಣುತ್ತಿರುವ ಊರು ಹಿರೇಖೇಡ್ ಅಂತ, ಇದು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನಲ್ಲಿರುವ ಒಂದು ಚಿಕ್ಕ ಗ್ರಾಮ. ನಿಮಗೆ ಗೊತ್ತಿದೆ, ಜನರಿಗೆ ಲಸಿಕೆ ಹಾಕಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ಭೇಟಿ ನೀಡುತ್ತಿದ್ದಾರೆ. ಅವರಿಂದ ಲಸಿಕೆ ಹಾಕಿಸಿಕೊಳ್ಳದಿರಲು ಜನ ಮಾಡುತ್ತಿರುವ ನಾಟಕಗಳ ಒಂದು ನಮೂನೆ ಈ ವೆಂಕಮ್ಮ ಮಾಡುತ್ತಿರೋದು!
ಉತ್ತರ ಕರ್ನಾಟಕದ ಬಹಳಷ್ಟು ಊರುಗಳಲ್ಲಿ ಹೀಗೆ ದೇವರು ಮೈಮೇಲೆ ಬರೋದು ಸಾಮಾನ್ಯ ಸಂಗತಿಯಾಗಿದೆ. ಕೆಲ ನಿರ್ದಿಷ್ಟ ಮಹಿಳೆ ಇಲ್ಲವೇ ಪುರುಷರ ಮೈಮೇಲಷ್ಟೇ ದೇವರು ಬರೋದು. ಹಾಗೆ ದೇವರು ಮೈಮೇಲೆ ಬಂದಾಗ ಅ ವ್ಯಕ್ತಿ ಏನೇನೋ ಮಾತಾಡುತ್ತಾರೆ. ಕೆಲವರು ಇದನ್ನು ನಂಬುತ್ತಾರೆ ಕೆಲವರು ಇಲ್ಲ.
ಆದರೆ, ವೆಂಕಮ್ಮ ಕೇವಲ ಲಸಿಕೆ ಹಾಕಿಸಿಕೊಳ್ಳದಿರಲು ಹೀಗೆ ಮಾಡುತ್ತಿದ್ದಾಳೆ ಅನ್ನೋದು ಬರಿನೋಟಕ್ಕೆ ಗೊತ್ತಾಗುತ್ತದೆ. ಆಕೆ ಹೇಳುತ್ತಿರುವುದನ್ನು ಕೇಳಿಸಿಕೊಳ್ಳಿ. ದೇವರಿಗೆ ಸೂಜಿ (ಲಸಿಕೆ) ಚುಚ್ಚಬಾರದು, ನಿಮಗೆ ಶಾಪ ಬರುತ್ತದೆ ಅಂತ ಆಕೆ ಕಿರುಚಿ ಕಿರುಚಿ ಹೇಳುತ್ತಿದ್ದಾಳೆ.
ಸರಿ ಬಿಡು ನಿಂಗೆ ಸೂಜಿ ಚುಚ್ಚಲ್ಲ ಅಂತ ಅರೋಗ್ಯ ಸಿಬ್ಬಂದಿ ಹೇಳಿದ ಕೂಡಲೇ ಮೈಮೇಲಿನ ದೇವರು ಮಾಯವಾಗಿ, ಅಕೆ ಶಾಂತಚಿತ್ತಳಾಗಿ ಬಂದು ಅಲ್ಲಿರುವ ಮೆಟ್ಟಿಲುಗಳ ಮೇಲೆ ಕೂರುತ್ತಾಳೆ.
ಸಿಬ್ಬಂದಿ ತನಗೆ ಲಸಿಕೆ ಹಾಕುವ ತಯಾರಿ ಮಾಡುತ್ತಿರುವುದು ಗಮನಕ್ಕೆ ಬಂದಕೂಡಲೇ ಪುನ: ಆವೇಷಕ್ಕೊಳಗಾದವಳಂತೆ ತನ್ನ ತಲೆಯನ್ನು ಗಿರಗಿರ ತಿರುಗಿಸಲಾರಂಭಿಸುತ್ತಾಳೆ!
ಆದರೆ, ಮುಖ್ಯವಾದ ವಿಷಯವೇನು ಗೊತ್ತಾ? ಆಕೆಗೆ ಲಸಿಕೆ ನೀಡಿಯೇ ಆರೋಗ್ಯ ಕಾರ್ಯಕರ್ತರು ಬೇರೆ ಮನೆಗೆ ಹೋಗಿದ್ದಾರೆ!
ಇದನ್ನೂ ಓದಿ: ಲ್ಯಾಂಡ್ ಆಗುವ ಮುನ್ನ ವಿಮಾನದ ವಿಂಡ್ಸ್ಕ್ರೀನ್ಗೆ ಡಿಕ್ಕಿ ಹೊಡೆದ ಪಕ್ಷಿಗಳ ಹಿಂಡು; ಬೆಂಕಿ ಕಿಡಿ ಹೊತ್ತಿದ ವಿಡಿಯೋ ವೈರಲ್