‘ಚಿತ್ರಮಂದಿರಕ್ಕೆ ಬರಲ್ಲ ಅಂತ ಜನರನ್ನು ದೂಷಿಸಬಾರದು’: ಉಪೇಂದ್ರ
ಈಗ ಜನರು ಒಟಿಟಿಯಲ್ಲಿ ಹೆಚ್ಚು ಮನರಂಜನೆ ಬಯಸುತ್ತಿದ್ದಾರೆ. ಚಿತ್ರಮಂದಿರಕ್ಕೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಬರುತ್ತಿಲ್ಲ. ಹಾಗಂತ ಜನರನ್ನು ದೂಷಿಸಲು ಸಾಧ್ಯವಿಲ್ಲ ಎಂಬುದು ಉಪೇಂದ್ರ ಅವರ ಅಭಿಪ್ರಾಯ. ಆ ಕುರಿತು ಅವರು ಮಾತನಾಡಿದ್ದಾರೆ. ‘ಎ’ ಸಿನಿಮಾ ಮರು ಬಿಡುಗಡೆ ಆಗಲು ಸಜ್ಜಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ಸಂದರ್ಶನ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂಬ ಕೂಗು ಗಾಂಧಿನಗರದಲ್ಲಿ ಕೇಳಿಬರುತ್ತಲೇ ಇದೆ. ಅನೇಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಾಗಿಲು ಮುಚ್ಚುತ್ತಿವೆ. ಹಾಗಾದರೆ ಇದಕ್ಕೆ ಕಾರಣ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಆ ಬಗ್ಗೆ ನಟ, ನಿರ್ದೇಶಕ ಉಪೇಂದ್ರ (Upendra) ಅವರು ಮಾತನಾಡಿದ್ದಾರೆ. ಉಪೇಂದ್ರ ನಟಿಸಿದ ‘ಎ’ ಸಿನಿಮಾ (A Kannada Movie) ಮರು ಬಿಡುಗಡೆ ಆಗುತ್ತಿದೆ. ಮೇ 17ಕ್ಕೆ ಚಿತ್ರಮಂದಿರಗಳಲ್ಲಿ ‘ಎ’ ರೀ-ರಿಲೀಸ್ ಆಗಲಿದೆ. ಈ ಪ್ರಯುಕ್ತ ನೀಡಿದ ಸಂದರ್ಶನದಲ್ಲಿ ಉಪೇಂದ್ರ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಈಗ ಮೊಬೈಲ್ನಲ್ಲಿ ಎಲ್ಲವೂ ಇದೆ. ಕೈಯಲ್ಲೇ ವಿವಿಧ ಬಗೆಯ ಮನರಂಜನೆ ಸಿಗುತ್ತಿದೆ. ಇದನ್ನೂ ಮೀರಿದ್ದನ್ನು ಜನರು ನಿರೀಕ್ಷಿಸುತ್ತಿದ್ದಾರೆ. ಬರೀ ದೊಡ್ಡ ಬಜೆಟ್ ಸಿನಿಮಾ ಅಂತಲ್ಲ. ಮೇಕಿಂಗ್, ಕಂಟೆಂಟ್ ದೃಷ್ಟಿಯಿಂದಲೂ ಹೊಸತನ್ನು ಬಯಸಿದ್ದಾರೆ. ಪ್ರೇಕ್ಷಕರು ಥಿಯೇಟರ್ಗೆ ಬರಲ್ಲ ಅಂತ ನಾವು ಜನರನ್ನು ದೂಷಿಸಲು ಸಾಧ್ಯವಿಲ್ಲ. ಒಂದು ಒಳ್ಳೆಯ ಸಿನಿಮಾ ನಂತರದ 5 ಸಿನಿಮಾಗಳಿಗೆ ಜನರನ್ನು ಕರೆದುಕೊಂಡು ಬರುತ್ತದೆ. ಒಂದು ಕೆಟ್ಟ ಸಿನಿಮಾ ಮುಂದಿನ 5 ಒಳ್ಳೆಯ ಸಿನಿಮಾಗಳಿಗೆ ಜನರನ್ನು ತಡೆಯುತ್ತದೆ. ಬೇರೆ ಬೇರೆ ಕಾರಣಗಳು ಕೂಡ ಇರುತ್ತದೆ. ಆ ಸಮಯ ಸೂಕ್ತವಾಗಿಲ್ಲದೇ ಇರಬಹುದು. ಆದರೂ ಜನರು ಒಳ್ಳೆಯ ಸಿನಿಮಾವನ್ನು ಕೈ ಹಿಡಿದಿದ್ದಾರೆ. ಜನರನ್ನು ದೂಷಿಸಬಾರದು’ ಎಂದು ಉಪೇಂದ್ರ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.