‘ಹುಳುಕು ಹುಡುಕೋರು ಇರ್ತಾರೆ’: ‘ಎ’ ಸಿನಿಮಾ ವಿವಾದಕ್ಕೆ ಉಪೇಂದ್ರ ಪ್ರತಿಕ್ರಿಯೆ
1998ರಲ್ಲಿ ತೆರೆಕಂಡಿದ್ದ ‘ಎ’ ಸಿನಿಮಾ ಈಗ ಮತ್ತೆ ಬಿಡುಗಡೆ ಆಗುತ್ತಿದೆ. ಮೇ 17ರಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗಲಿದೆ. ಆ ಪ್ರಯಕ್ತ ನಟ, ನಿರ್ದೇಶಕ ಉಪೇಂದ್ರ ಅವರು ಸಂದರ್ಶನ ನೀಡಿದ್ದಾರೆ. ‘ಎ’ ಸಿನಿಮಾದ ಮೂಲಕವೇ ಉಪೇಂದ್ರ ಅವರು ಹೀರೋ ಆಗಿ ಜನರಿಗೆ ಪರಿಚಿತರಾಗಿದ್ದು. ಸಿನಿಮಾದಲ್ಲಿನ ಕೆಲವು ವಿಚಾರಗಳ ಬಗ್ಗೆ ಅವರೀಗ ಮಾತನಾಡಿದ್ದಾರೆ.
ನಟ ಉಪೇಂದ್ರ (Upendra) ಅವರು ಹೀರೋ ಆಗಿದ್ದು ‘ಎ’ ಸಿನಿಮಾದಿಂದ. 1998ರಲ್ಲಿ ಆ ಸಿನಿಮಾ ಬಿಡುಗಡೆ ಆಗಿತ್ತು. ಈಗ ‘ಎ’ ಚಿತ್ರ (A Movie) ಮರು ಬಿಡುಗಡೆ ಆಗುತ್ತಿದೆ. ಮೇ 17ರಂದು ಮರು ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಉಪೇಂದ್ರ ಅವರು ‘ಟಿವಿ9 ಕನ್ನಡ’ ಜೊತೆ ಮಾತನಾಡಿದ್ದಾರೆ. ‘ಎ’ ಕಥೆ ತುಂಬ ಡಿಫರೆಂಟ್ ಆಗಿತ್ತು. ಆದರೆ ಆ ಸಿನಿಮಾ ಬಿಡುಗಡೆ ಆದಾಗ ಕೆಲವು ವಿವಾದಗಳು ಕೂಡ ಆಗಿದ್ದವು. ಈ ಬಗ್ಗೆ ಈಗ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ‘ಎ ಸಿನಿಮಾವನ್ನು ಬಹುತೇಕರು ಅರ್ಥ ಮಾಡಿಕೊಂಡರು. ಇಲ್ಲದಿದ್ದರೆ ಹೊಸ ಹೀರೋ ಸಿನಿಮಾ ಅಷ್ಟು ದೊಡ್ಡ ಹಿಟ್ ಆಗುತ್ತಿರಲಿಲ್ಲ. ಅದರಲ್ಲೂ ಕೂಡ ಹುಳುಕು ಹುಡುಕುವವರು ಕೆಲವರು ಇರುತ್ತಾರೆ. ಅಂಥವರು ಕೂಡ ಇರಬೇಕು. ನಮ್ಮನ್ನು ನಾವು ತಿದ್ದಿಕೊಳ್ಳಲು ವಿಮರ್ಶಕರು ಕೂಡ ಬೇಕು. ಆದರೆ ವಿಮರ್ಶೆಯೇ ಪ್ರಧಾನವಾಗಬಾರದು. ಹೊಸಬರು ಬಂದಾಗ ‘ಎಲ್ಲ ಚೆನ್ನಾಗಿದೆ, ಒಂದೆರಡು ಸಣ್ಣ ತಪ್ಪುಗಳನ್ನು ಸರಿ ಮಾಡಿಕೋ’ ಎನ್ನುವುದು ಬೇರೆ. ಆದರೆ ಅದೇ ಎರಡನ್ನು ಇಟ್ಟುಕೊಂಡು ‘ನೀನು ಏನೂ ಸರಿ ಮಾಡಿಲ್ಲ’ ಅನ್ನೋದು ಬೇರೆ. ಆ ಸಿನಿಮಾದಲ್ಲಿ ಇರುವ ಒಳ್ಳೆಯದನ್ನು ಜನರು ತೆಗೆದುಕೊಂಡರು. ಉದ್ದೇಶ ಏನು ಎಂಬುದು ತುಂಬ ಮುಖ್ಯ ಆಗುತ್ತದೆ’ ಎಂದು ಉಪೇಂದ್ರ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.