ಪುನೀತ್ ಮೇಲಿನ ಅಭಿಮಾನಕ್ಕೆ ಫ್ಯಾನ್ಸ್ ಕಟ್ಟಿದ ದೇವಸ್ಥಾನ ಉದ್ಘಾಟಿಸಿದ ಅಶ್ವಿನಿ
ಹಾವೇರಿ ತಾಲೂಕು ಯಲಗಚ್ಚ ಗ್ರಾಮದಲ್ಲಿ ಪುನೀತ್ ರಾಜ್ಕುಮಾರ್ ಅವರಿಗಾಗಿ ಅಭಿಮಾನಿಗಳು ದೇವಸ್ಥಾನ ಕಟ್ಟಿದ್ದಾರೆ. ಅದನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಉದ್ಘಾಟನೆ ಮಾಡಿದ್ದಾರೆ. ಬಳಿಕ ಅವರು ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ಜನರು ತೋರಿಸುವ ಪ್ರೀತಿಗೆ ಅಶ್ವಿನಿ ಅವರು ಧನ್ಯವಾದ ತಿಳಿಸಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ಪುನೀತ್ ರಾಜ್ಕುಮಾರ್ ಅವರ ಅಭಿಮಾನಿ ಆಗಿರುವ ಪ್ರಕಾಶ ಮತ್ತು ದೀಪಾ ದಂಪತಿ ಮನೆಯ ಎದುರು ದೇವಸ್ಥಾನ ಕಟ್ಟಿಸಿದ್ದಾರೆ. ಅಪ್ಪು ದೇವಸ್ಥಾನವನ್ನು ತಮ್ಮ ಸ್ವಂತ ಜಾಗದಲ್ಲಿ ಈ ಅಭಿಮಾನಿಗಳು ಕಟ್ಟಿದ್ದಾರೆ. ಈ ದಂಪತಿಯ ಮಗಳಿಗೆ ಅಪೇಕ್ಷಾ ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ನಾಮಕರಣ ಮಾಡಿದ್ದಾರೆ. ನಂತರ ಮಾತನಾಡುವಾಗ ಅವರು ಕೊಂಚ ಎಮೋಷನಲ್ ಆದರು. ಅಭಿಮಾನಿಯ 10 ಲಕ್ಷ ರೂಪಾಯಿ ಸ್ವಂತ ಹಣದಲ್ಲಿ ಈ ದೇವಸ್ಥಾನ ನಿರ್ಮಾಣ ಆಗಿದೆ.
ಪುನೀತ್ ರಾಜಕುಮಾರ ಅವರ ಅಪ್ಟಟ ಅಭಿಮಾನಿ ಯಲಗಚ್ಚ ಗ್ರಾಮದ ಪ್ರಕಾಶ ಮೊರಬದ ಈ ಅಪರೂಪದ ಕ್ಷಣಕ್ಕೆ ಕಾರಣರಾದರು. ಪ್ರಕಾಶ ತಮ್ಮ ಮನೆಯ ಮುಂದಿನ ಸ್ವಂತ ಜಾಗದಲ್ಲಿ ತಮ್ಮ ನೆಚ್ಚಿನ ನಟ ಪುನೀತ್ ರಾಜಕುಮಾರ ಅವರ ದೇವಸ್ಥಾನ ನಿರ್ಮಿಸಿ, ಪುನೀತ್ ರಾಜಕುಮಾರ ಮೂರ್ತಿ ಕೂಡ ರೆಡಿ ಮಾಡಿಸಿದ್ದರು.
ಪುನೀತ್ ರಾಜಕುಮಾರ ಜೊತೆ ಅಭಿನಯ ಮಾಡಬೇಕೆಂಬ ಹಂಬಲ ಹೊಂದಿದ್ದರು ಅಭಿಮಾನಿ ಪ್ರಕಾಶ. ದಿವಂಗತ ಆಗುತ್ತಿದ್ದಂತೆ ನಿತ್ಯವೂ ತಾವು ನಂಬಿದ್ದ ದೇವರು ಅಪ್ಪು ಅವರನ್ನು ಕಾಣುವ ಹಂಬಲ ಹೊಂದಿದ್ದರು. ಹೀಗಾಗಿ ತಮ್ಮ ಮನೆಯ ಮುಂದಿನ ಸ್ವಂತ ಜಾಗದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಅವರು ಮುಂದಾದರು. ಅಪ್ಪು ದೇವಸ್ಥಾನ ಅಂದ ಕೂಡಲೇ ಅಪ್ಪು ಅವರ ಅಭಿಮಾನಿಗಳು ಹಣ ನೀಡಿದರು. ಉಳಿದಂತೆ ಸ್ವಂತ ಹಣವನ್ನು ಸೇರಿಸಿ ಸುಮಾರು ಹತ್ತು ಲಕ್ಷ ರುಪಾಯಿ ವೆಚ್ಚದಲ್ಲಿ ಪುನೀತ್ ರಾಜಕುಮಾರ ಅವರ ದೇಗುಲ ನಿರ್ಮಿಸಿದರು. ನಂತರ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ ಅವರ ಕೈಯಿಂದ ದೇವಸ್ಥಾನ ಉದ್ಘಾಟಿಸಿ, ಅಪ್ಪು ಪುತ್ಥಳಿ ಅನಾವರಣ ಮಾಡುವ ಹಂಬಲ ಹೊಂದಿದ್ದರು. ಇವತ್ತು ಅಭಿಮಾನಿಯ ಆಸೆ ಈಡೇರಿದ್ದು, ಅಭಿಮಾನಿಗಳ ದೇವರು ಪುನೀತ್ ರಾಜಕುಮಾರ ಅವರ ದೇವಸ್ಥಾನ ಹಾಗೂ ಪುತ್ಥಳಿ ಅನಾವರಣಗೊಂಡಿದೆ. ಇದಕ್ಕೆ ಅಭಿಮಾನಿ ಪ್ರಕಾಶ ಫುಲ್ ಖುಷ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:54 pm, Thu, 26 September 24