ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ನಾಗೇಶನನ್ನು ಬಂಧಿಸಿ ಎಳೆತಂದ ರೋಚಕ ಘಟನೆ ವಿವರಿಸಿದರು ಎ ಎಸ್ ಐ ಶಿವಣ್ಣ

ನಾಗೇಶ ಯಾವ ಆಶ್ರಮದಲ್ಲಿದ್ದಾನೆ ಎಂಬ ಪಕ್ಕಾ ಮಾಹಿತಿಯನ್ನೂ ಪಡೆದ ಶಿವಣ್ಣ ಅಲ್ಲಿಗೆ ಹೋದಾಗ ಅವನು ಖಾದಿವಸ್ತ್ರ ಧರಿಸಿ ಕೂತಿದ್ದನಂತೆ. ಶಿವಣ್ಣ ಮತ್ತು ಅವರ ಇನ್ನೊಬ್ಬ ಸಹೋದ್ಯೋಗಿ ಒಳಗಡೆ ಹೋಗಿ ಅವನ ಎಡಬಲ ಕೂತು ಹೆಸರು ಕೇಳಿದ್ದಾರೆ, ಅವನು ಹೇಳಿಲ್ಲ.

TV9kannada Web Team

| Edited By: Arun Belly

May 14, 2022 | 4:42 PM

Bengaluru: ಒಬ್ಬ ಅಮಾಯಕ ಹಾಗೂ ಅಬಲೆ ಮಹಿಳೆಯ ಮೇಲೆ ಒಬ್ಬ ಕ್ಷುದ್ರ ಹೇಡಿಯಂತೆ ಆ್ಯಸಿಡ್ ಎರಚಿ ಆಕೆಯನ್ನು ನರಕ ಕೂಪಕ್ಕೆ ತಳ್ಳಿ ಸುಮಾರು ಒಂದು ತಿಂಗಳಿನಿಂದ ಪೊಲೀಸರಿಂದ ತಪ್ಪಿಸಿಕೊಂಡು ಗುಡಿ ಗುಂಡಾರಗಳನ್ನು ಸುತ್ತುತ್ತಾ ಆಶ್ರಮಗಳಲ್ಲಿ ತಂಗುತ್ತಿದ್ದ ದುಷ್ಟ ನಾಗೇಶ ಬಾಬುನನ್ನು (Nagesh Babu) ಬೆಂಗಳೂರಿನ ಪೊಲೀಸರು ತಮಿಳುನಾಡಿನ ತಿರುವನಮಲೈಯಲ್ಲಿ (Tiruvanamalai) ಬಂಧಿಸಿ ನಗರಕ್ಕೆ ಎಳೆತಂದಿದ್ದಾರೆ. ಬೆಂಗಳೂರಿಗೆ ಬರುವಾಗಲೂ ಅವನು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರಿಂದ ಪೊಲೀಸರು ಅವನ ಕಾಲಿಗೆ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ. ಅವನನ್ನು ಹಿಡಿಯಲು ಹತ್ತಾರು ತಂಡಗಳನ್ನು ರಚಿಸಲಾಗಿತ್ತಾದರೂ ಕೈಗೆ ಸಿಕ್ಕಿದ್ದು ಮಾತ್ರ ಎಎಸ್ಐ ಶಿವಣ್ಣ (ASI Shivanna) ಅವರಿಗೆ. ಟಿವಿ9 ಕನ್ನಡ ವಾಹಿನಿಯ ಕ್ರೈಮ್ ವರದಿಗಾರ ಶಿವಪ್ರಸಾದ್ ಶನಿವಾರ ಬೆಂಗಳೂರಿನಲ್ಲಿ ಶಿವಣ್ಣರನ್ನು ಮಾತಾಡಿಸಿ ನಾಗೇಶ್ ನನ್ನು ಹೇಗೆ, ಎಲ್ಲಿ ಬಂಧಿಸಲಾಯಿತು ಮೊದಲಾದ ಮಾಹಿತಿಯನ್ನು ಕೇಳಿದ್ದಾರೆ.

ವಿಡಿಯೋನಲ್ಲಿ ನಿಮಗೆ ಕಾಣುತ್ತಿರುವ ಎಎಸ್ಐ ಶಿವಣ್ಣ ಇನೈದು ತಿಂಗಳಲ್ಲಿ ರಿಟೈರಾಗಲಿದ್ದಾರೆ. ಅದಕ್ಕೂ ಮುನ್ನ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಯಶ ಕಂಡಿದ್ದು ಬಹಳ ಖುಷಿ ನೀಡಿದೆ ಅಂತ ಅವರು ಹೇಳುತ್ತಾರೆ. ಕಾರ್ಯಾಚರಣೆಯ ರೂಪುರೇಷೆಗಳನ್ನು ಸಿದ್ಧಪಡಿಸಿ ಪ್ರತಿ ಹಂತದಲ್ಲೂ ತಮಗೆ ಹಾಗೂ ತಮ್ಮ ತಂಡಕ್ಕೆ ಮಾರ್ಗದರ್ಶನ ನೀಡಿದ ಡಿಸಿಪಿ ಸಂಜೀವ ಎಮ್ ಮತ್ತು ಎಸಿಪಿ ರವಿ ಅವರನ್ನು ಶಿವಣ್ಣ ಕೃತಜ್ಞತೆಯಿಂದ ನೆನೆಯುತ್ತಾರೆ.

ಆರೋಪಿ ನಾಗೇಶ ತಿರುವನಮಲೈಯ ಆಶ್ರಮವೊಂದರಲ್ಲಿರುವ ಬಗ್ಗೆ ಶಿವಣ್ಣ ಅವರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಅವನ ಪೋಟೋ ಇರುವ ಭಿತ್ತಿ ಪತ್ರಗಳನ್ನು ದೇಗುಲ ಜಾಸ್ತಿಯಿರುವ ತಮಿಳುನಾಡಿನ ಬಹಳಷ್ಟು ಊರುಗಳಲ್ಲಿ ಅಂಟಿಸಲಾಗಿತ್ತು ಮತ್ತು ತಿರುವನಮಲೈಯ ಜನ ಅದನ್ನು ನೋಡಿ ಅದರಲ್ಲಿ ನಮೂದಿಸಿದ್ದ ಮೇಲಧಿಕಾರಿಗಳ ಫೋನ್ ನಂಬರ್ ಗಳಿಗೆ ಕರೆ ಮಾಡಿ ಅವನು ಆಶ್ರಮವೊಂದರಲ್ಲಿ ತಂಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಮೇಲಧಿಕಾರಿಗಳು ಆ ಮಾಹಿತಿಯನ್ನು ಶಿವಣ್ಣನವರ ತಂಡಕ್ಕೆ ರವಾನಿಸಿದರಲ್ಲದೆ, ಅವನ ಫೋಟೋವೊಂದನ್ನು ವಾಟ್ಸ್ಯಾಪ್ ಮಾಡಿದರು. ಅವನ ಕೈ ಮೇಲೆ ಌಸಿಡ್ ಬಿದ್ದು ಆಗಿರುವ ಗಾಯವಿದೆ ಅಂತ ಶಿವಣ್ಣನವರಿಗೆ ತಿಳಿಸಲಾಯಿತು.

ನಾಗೇಶ ಯಾವ ಆಶ್ರಮದಲ್ಲಿದ್ದಾನೆ ಎಂಬ ಪಕ್ಕಾ ಮಾಹಿತಿಯನ್ನೂ ಪಡೆದ ಶಿವಣ್ಣ ಅಲ್ಲಿಗೆ ಹೋದಾಗ ಅವನು ಖಾದಿವಸ್ತ್ರ ಧರಿಸಿ ಕೂತಿದ್ದನಂತೆ. ಶಿವಣ್ಣ ಮತ್ತು ಅವರ ಇನ್ನೊಬ್ಬ ಸಹೋದ್ಯೋಗಿ ಒಳಗಡೆ ಹೋಗಿ ಅವನ ಎಡಬಲ ಕೂತು ಹೆಸರು ಕೇಳಿದ್ದಾರೆ, ಅವನು ಹೇಳಿಲ್ಲ. ಆಮೇಲೆ ಅವನ ಕೈ ಮೇಲೆ ಗಾಯವಾಗಿರುವುದನ್ನು ಖಚಿತಪಡಿಸಿಕೊಂಡು ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲಿಗೆ ದುಷ್ಟನ ಕಣ್ಣಾಮುಚ್ಚಾಲೆ ಆಟಕ್ಕೆ ತೆರೆಬಿದ್ದಿದೆ.

ಇದನ್ನೂ ಓದಿ:  ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ನಾಗೇಶ್​ನ ಬಂಧಿಸಿದ ಪೊಲೀಸ್ ತಂಡಗಳಿಗೆ 5 ಲಕ್ಷ ರೂ. ಬಹುಮಾನ; ಕಮಲ್ ಪಂತ್ ಮಾಹಿತಿ

Follow us on

Click on your DTH Provider to Add TV9 Kannada