ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ನಾಗೇಶ್ನ ಬಂಧಿಸಿದ ಪೊಲೀಸ್ ತಂಡಗಳಿಗೆ 5 ಲಕ್ಷ ರೂ. ಬಹುಮಾನ; ಕಮಲ್ ಪಂತ್ ಮಾಹಿತಿ
ಆರೋಪಿ ನಾಗೇಶ್ ಯಾವುದೇ ಸುಳಿವು ನೀಡದೆ ನಾಪತ್ತೆಯಾಗಿದ್ದ. ಸಂದೀಪ್ ಪಾಟೀಲ್ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ನಿನ್ನೆ ರಾತ್ರಿ ತಿರುವಣ್ಣಾಮಲೈನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು: ಪ್ರೀತಿ ನಿರಾಕರಿಸಿದ್ದ ಯುವತಿ ಮೇಲೆ ಆ್ಯಸಿಡ್ (Acid) ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ನಾಗೇಶ್ ನಿನ್ನೆ ಸೆರೆಯಾಗಿದ್ದಾನೆ. ಸ್ವಾಮೀಜಿ ವೇಷ ಧರಿಸಿ ತಲೆಮರಿಸಿಕೊಂಡಿದ್ದ. ನಿರಂತರ ಕಾರ್ಯಾಚರಣೆ ನಡೆಸಿ ಬೆಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಇಂದು ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ (Kamala Pant), ಕಾರ್ಯಚರಣೆ ತಂಡಗಳಿಗೆ ಒಟ್ಟು ಐದು ಲಕ್ಷ ರೂ. ಬಹುಮಾನ (Prize) ನೀಡುವುದಾಗಿ ತಿಳಿಸಿದ್ದಾರೆ.
ಆರೋಪಿ ನಾಗೇಶ್ ಯಾವುದೇ ಸುಳಿವು ನೀಡದೆ ನಾಪತ್ತೆಯಾಗಿದ್ದ. ಸಂದೀಪ್ ಪಾಟೀಲ್ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ನಿನ್ನೆ ರಾತ್ರಿ ತಿರುವಣ್ಣಾಮಲೈನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುವತಿಗೆ ಗೊತ್ತಾಗದಂತೆ ಆರೋಪಿ ನಾಗೇಶ್ ಹಿಂಬಾಲಿಸುತ್ತಿದ್ದ. ಏ.20ರಂದು ಖಾಸಗಿ ಕಂಪನಿ ಲೆಟರ್ಹೆಡ್ ಬಳಸಿ ಸಲ್ಫೂರಿಕ್ ಆ್ಯಸಿಡ್ ಖರೀದಿ ಮಾಡಿದ್ದ. ಆ್ಯಸಿಡ್ ಖರೀದಿಸಿದ ನಂತರ ಯುವತಿ ಬಳಿ ತೆರಳಿ ಮಾತಾಡಿದ್ದ. ತನ್ನನ್ನು ಮದುವೆಯಾಗುವಂತೆ ಪೀಡಿಸಿದ್ದ. ಸ್ಥಳಕ್ಕೆ ಬಂದಿದ್ದ ಕಂಪನಿಯ ಮ್ಯಾನೇಜರ್ ಬೈಯ್ದು ಕಳಿಸಿದ್ದರು. ಏಪ್ರಿಲ್ 28ರಂದು ಬೆಳಗ್ಗೆ ಯುವತಿ ಮೇಲೆ ಆ್ಯಸಿಡ್ ಎರಚಿದ್ದ ಎಂದು ಕಮಲ್ ಪಂತ್ ಹೇಳಿದರು.
ಸುಮಾರು ಅರ್ಧ ಲೀಟರ್ ಸಲ್ಫೂರಿಕ್ ಆ್ಯಸಿಡ್ ಹಾಕಿದ್ದ. ಌಸಿಡ್ ದಾಳಿ ನಂತರ ಅಣ್ಣ, ಸ್ನೇಹಿತನಿಗೆ ಕರೆ ಮಾಡಿದ್ದ. ರಾಜಗೋಪಾಲನಗರ ಠಾಣೆಗೆ ಶರಣಾಗುವಂತೆ ಸೂಚನೆ ನೀಡಿದ್ದರು. ಅಣ್ಣ, ಸ್ನೇಹಿತನ ಮಾತು ಕೇಳದೆ ಬೈಕ್ನಲ್ಲಿ ಕೋರ್ಟ್ಗೆ ತೆರಳಿದ್ದ. ತನಗೆ ಪರಿಚಯವಿದ್ದ ವಕೀಲರನ್ನು ಭೇಟಿಯಾಗಿದ್ದ. ಕೋರ್ಟ್ಗೆ ಎಫ್ಐಆರ್ ಬಂದಿಲ್ಲವೆಂದು ವಕೀಲರು ಹೇಳಿರುತ್ತಾರೆ. ನಂತರ ಅಲ್ಲಿಂದ ಹೊಸಕೋಟೆಗೆ ತೆರಳಿದ್ದ. ಕೆರೆಯೊಂದಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಕೊನೆ ಕ್ಷಣದಲ್ಲಿ ಮನಸ್ಸು ಬದಲಿಸಿ ತಿರುಪತಿ ಬಸ್ ಹತ್ತಿ ತೆರಳಿದ್ದ. ಮಾರ್ಗಮಧ್ಯೆ ಬಸ್ನಿಂದ ಇಳಿದು ತಿರುವಣ್ಣಾಮಲೈಗೆ ತೆರಳಿದ್ದ. ತಿರುವಣ್ಣಾಮಲೈಗೆ ತೆರಳಿ ಕೇಸರಿ ಬಟ್ಟೆಯನ್ನು ಖರೀದಿಸಿದ್ದ ಎಂದು ಸುದ್ದಿಗೋಷ್ಟಿಯಲ್ಲಿ ಕಮಲ್ ಪಂತ್ ತಿಳಿಸಿದರು.
ಮೊದಲು ಪ್ರಶ್ನಿಸಿದಾಗ ಪ್ರತಿಕ್ರಿಯೆ ನೀಡಿದ ಆರೋಪಿ: ಎಎಸ್ಐ ಶಿವಣ್ಣ, ಕಾನ್ಸ್ಟೇಬಲ್ ರವಿ ಆಶ್ರಮಕ್ಕೆ ತೆರಳಿದ್ದರು. ಶಿವಣ್ಣ, ರವಿ ಆರೋಪಿ ನಾಗೇಶ್ನ ಹಿಂದೆ ಕುಳಿತುಕೊಂಡಿದ್ದರು. ಮೆಡಿಟೇಷನ್ ಮುಗಿದ ಬಳಿಕ ಪೊಲೀಸರು ಆತನನ್ನು ಪ್ರಶ್ನಿಸಿದ್ದಾರೆ. ನಮ್ಮ ಪೊಲೀಸರು ಮೊದಲು ಪ್ರಶ್ನಿಸಿದಾಗ ಪ್ರತಿಕ್ರಿಯೆ ನೀಡಿರಲಿಲ್ಲ. ನಂತರ ಗಟ್ಟಿಧ್ವನಿಯಲ್ಲಿ ಪ್ರಶ್ನಿಸಿದಾಗ ನಾಗೇಶ್ ಎಂದು ಹೇಳಿದ್ದ. ನಾಗೇಶ್ನನ್ನು ಹಿಡಿದುಕೊಂಡಾಗ ಅಲ್ಲಿದ್ದವರು ಸುತ್ತುವರಿದಿದ್ದರು. ನಾಗೇಶ್ನನ್ನು ಹಿಡಿದುಕೊಂಡೇ ಜನರಿಗೆ ಎಲ್ಲಾ ಮಾಹಿತಿ ನೀಡಿದ್ದರು.
2 ಕಿ.ಮೀ. ದೂರದಲ್ಲಿದ್ದ ಮತ್ತೊಂದು ಟೀಮ್ ಆಶ್ರಮಕ್ಕೆ ಬಂದಿತ್ತು. ಆರೋಪಿ ನಾಗೇಶ್ನನ್ನ ನಿನ್ನೆಯೇ ವಶಕ್ಕೆ ಪಡೆದು ಕರೆತಂದಿದ್ದೇವೆ. ತಮಿಳುನಾಡಿನಿಂದ ಬೆಂಗಳೂರಿಗೆ ಬರುವವರೆಗೆ ವಿಚಾರಣೆ ನಡೆಸಿದ್ದರು. 15 ದಿನಗಳ ಕಾಲ 50ಕ್ಕೂ ಹೆಚ್ಚು ಪೊಲೀಸರು ಹಗಲಿರುಳು ಕೆಲಸ ಮಾಡಿದ್ದಾರೆ. ತಮಿಳುನಾಡಿನಲ್ಲೂ ನಮ್ಮ ಪೊಲೀಸರ 2 ತಂಡ ಬೀಡುಬಿಟ್ಟಿದ್ದವು ಎಂದು ಕಮಲ್ ಪಂತ್ ಹೇಳಿದ್ದಾರೆ.
Published On - 12:07 pm, Sat, 14 May 22