ವಿಕೋಪಕ್ಕೆ ತಿರುಗಿದ ಪಂಚಮಸಾಲಿ ಹೋರಾಟ: ಯತ್ನಾಳ್, ಸ್ವಾಮೀಜಿ ಸೇರಿದಂತೆ ಹಲವರು ಪೊಲೀಸ್ ವಶಕ್ಕೆ
ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟಗಾರರು, ಮುಖಂಡರ ಮೇಲೆ ಲಾಠಿ ಚಾರ್ಚ್ ನಡೆದಿದೆ. 2A ಮೀಸಲಾತಿಗೆ ಒತ್ತಾಯಿಸಿ ಸಾವಿರಾರು ಪ್ರತಿಭಟನಾಕಾರರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದದರು. ಜೈ ಪಂಚಮಸಾಲಿ ಎನ್ನುತ್ತಾ ನುಗ್ಗಿದ ಸಾವಿರ, ಸಾವಿರ ಹೋರಾಟಗಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಬೆಳಗಾವಿ, (ಡಿಸೆಂಬರ್ 10): 2A ಮೀಸಲಾತಿ ನೀಡಬೇಕೆಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಪಂಚಮಸಾಲಿ ಹೋರಾಟ ವಿಕೋಪಕ್ಕೆ ತಿರುಗಿದೆ. ಜೈ ಪಂಚಮಸಾಲಿ ಎನ್ನುತ್ತಾ ಸಾವಿರಾರು ಹೋರಾಟಗಾರರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ನುಗ್ಗಿದರು. ಇದರಿಂದ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಪ್ರತಿಭಟನೆಕಾರರು ಬ್ಯಾರಿಕೇಡ್ಗಳನ್ನು ಕಿತ್ತೆಸೆದು ಸುವರ್ಣಸೌಧಕ್ಕೆ ನುಗ್ಗಲು ಯತ್ನಿಸಿದ್ದಾರೆ. ಹೀಗಾಗಿ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.
ಬೆಳಗಾವಿಯ ಕೊಂಡಸಕೊಪ್ಪದಿಂದ ಪಂಚಮಸಾಲಿ ಮುಖಂಡರು ಸುವರ್ಣಸೌಧದತ್ತ ತೆರಳುತ್ತಿದ್ದರು. ಬೃಹತ್ ಪ್ರಮಾಣದ ಹೋರಾಟಗಾರರು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರಾಷ್ಟ್ರೀಯ ಹೆದ್ದಾರಿ- 4 ತಡೆದು ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಸೇರಿದಂತೆ ಹಲವರನ್ನ ಪೋಲಿಸರ ವಶಕ್ಕೆ ಪಡೆದರು.