ಗಂಡನ ಕಳೆದುಕೊಂಡವರೇ ಟಾರ್ಗೆಟ್! ಐವರು ಮಹಿಳೆಯರ ಜತೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಖಾಸಗಿ ಕಂಪನಿ ಎಂಡಿ!
ಬೆಂಗಳೂರಿನ ಖಾಸಗಿ ಕಂಪನಿ ಮಾಲೀಕ 38 ವರ್ಷದ ರಾಮಾಂಜಿ ವಿರುದ್ಧ ಹಲವು ಮಹಿಳೆಯರಿಗೆ ವಂಚನೆ ಮಾಡಿದ ಆರೋಪ ಕೇಳಿಬಂದಿದೆ. ಪತಿ ಕಳೆದುಕೊಂಡ, ವಿಚ್ಛೇದಿತ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮದುವೆಯಾಗುವ ನೆಪದಲ್ಲಿ ದೈಹಿಕ ಸಂಪರ್ಕ ಬೆಳೆಸಿ, ಹಣ ಹಾಗೂ ಚಿನ್ನಾಭರಣ ಪಡೆದು ಮೋಸ ಮಾಡಿದ್ದಾನೆ. ಸದ್ಯ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು, ಮಾರ್ಚ್ 23: ಬೆಂಗಳೂರು ನಗರದ ಸೂರ್ಯ ಮ್ಯಾನೇಜ್ಮೆಂಟ್ ಸರ್ವಿಸ್ ಸಂಸ್ಥೆಯ ಮಾಲೀಕ ರಾಮಾಂಜಿ ಎಂಬಾತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಇತರ ಮಹಿಳೆಯರಿಗೆ ಮದುವೆಯಾಗುವ ನೆಪದಲ್ಲಿ ವಂಚಿಸಿರುವ ಆರೋಪದ ಮೇಲೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 38 ವರ್ಷದ ರಾಮಾಂಜಿ ಐವರು ಹೆಣ್ಣುಮಕ್ಕಳಿಗೆ ಮೋಸ ಮಾಡಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.
ಪತಿ ಕಳೆದುಕೊಂಡವರು, ಪತಿಯಿಂದ ವಿಚ್ಛೇದನ ಪಡೆದು ದೂರವಾದವರು ಅಥವಾ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರನ್ನು ಈತ ಬಲೆಗೆ ಕೆಡವುತ್ತಿದ್ದ ಎನ್ನಲಾಗಿದೆ. ಮದುವೆಯ ಭರವಸೆ ನೀಡಿ ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ನಂತರ ಹಣ ಮತ್ತು ಚಿನ್ನಾಭರಣಗಳನ್ನು ಪಡೆದು ಮೋಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈತ ಹೌಸ್ ಕೀಪಿಂಗ್ ಮತ್ತು ಸೆಕ್ಯೂರಿಟಿ ಸೇವೆಗಳನ್ನು ಒದಗಿಸುತ್ತಿದ್ದ ಸಂಸ್ಥೆಯ ಮುಖ್ಯಸ್ಥನಾಗಿದ್ದು, 60ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದ. ಪ್ರಸ್ತುತ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
Follow Us
